ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ | ಬಾವಿಯೊಳಗೆ ಶಂಕಿತ ವಿಷಾನಿಲ ಸೇವಿಸಿ 9 ಜನರು ಸಾವು

Published 5 ಜುಲೈ 2024, 23:50 IST
Last Updated 5 ಜುಲೈ 2024, 23:50 IST
ಅಕ್ಷರ ಗಾತ್ರ

ಜಂಜ್‌ಗೀರ್‌–ಚಂಪಾ/ಕೋರ್ಬ: ಛತ್ತೀಸಗಢದ ಜಂಜ್‌ಗೀರ್‌– ಚಂಪಾ ಮತ್ತು ಕೋರ್ಬದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಬಾವಿಯೊಳಗೆ ಶಂಕಿತ ವಿಷಾನಿಲ ಸೇವಿಸಿ 9 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜಂಜ್‌ಗೀರ್‌– ಚಂಪಾದಲ್ಲಿನ ಬಿರ್ರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಕಿಕಿರ್ದಾ ಗ್ರಾಮದಲ್ಲಿ ರಾಮಚಂದ್ರ ಜೈಸ್ವಾಲ್‌ (60), ರಮೇಶ್‌ ಪಟೇಲ್‌ (50), ಅವರ ಇಬ್ಬರು ಮಕ್ಕಳಾದ ರಾಜೇಂದ್ರ (20), ಜಿತೇಂದ್ರ (25) ಮತ್ತು ಟಿಕೇಶ್ವರ ಚಂದ್ರ ಎಂಬುವರು ಅಸುನೀಗಿದ್ದಾರೆ ಎಂದು ಬಿಲಾಸ್‌ಪುರ ವಲಯದ ಐಜಿಪಿ ಸಂಜೀವ್‌ ಶುಕ್ಲಾ ತಿಳಿಸಿದ್ದಾರೆ.

ಘಟನೆ ವಿವರ: ಜೈಸ್ವಾಲ್‌ ಅವರು ತಮ್ಮ ಮನೆ ಬಳಿಯ ಬಾವಿಯ ಮೇಲೆ ಹೊದಿಸಿದ್ದ ಮರದ ಪಟ್ಟಿಯನ್ನು ಸರಿಪಡಿಸುತ್ತಿದ್ದಾಗ, 30 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಇದು ತಿಳಿದ ಕೂಡಲೇ ಅವರ ಪತ್ನಿ ಕೂಗಿ ಸಮೀಪದಲ್ಲಿರುವವರನ್ನು ನೆರವಿಗೆ ಕರೆದಿದ್ದಾರೆ. ಪಕ್ಕದಲ್ಲಿದ್ದ ಪಟೇಲ್‌ ಕುಟುಂಬದ ಮೂವರು ಬಾವಿಗೆ ಇಳಿದಿದ್ದಾರೆ. ಯಾರೊಬ್ಬರೂ ಮೇಲೆ ಬಾರದಿದ್ದಾಗ ಚಂದ್ರ ಎಂಬುವರೂ ಇಳಿದಿದ್ದಾರೆ. ಅವರೂ ಪ್ರಜ್ಞೆ ತಪ್ಪಿದಾಗ, ಈ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಶುಕ್ಲಾ ಅವರು ವಿವರಿಸಿದ್ದಾರೆ.

ಮೇಲ್ನೋಟಕ್ಕೆ, ಬಾವಿಯೊಳಗಿನ ಕೆಲ ವಿಷಕಾರಿ ಅನಿಲ ಸೇವನೆಯಿಂದ ಇವರು ಮೃತಪಟ್ಟಿರಬಹುದು ಎಂದು ತೋರುತ್ತಿದೆ. ಆದರೆ ಶವಪರೀಕ್ಷೆ ವರದಿಗಳು ಬಂದ ನಂತರವಷ್ಟೇ ನಿಖರ ಕಾರಣ ತಿಳಿಯುತ್ತದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಮತ್ತೊಂದು ಪ್ರಕರಣ: ಇದೇ ರೀತಿಯ ಮತ್ತೊಂದು ದುರಂತ ಕೋರ್ಬದಲ್ಲಿ ನಡೆದಿದ್ದು, ಜಹ್ರು ಪಟೇಲ್‌ (60, ಅವರ ಮಗಳು ಸಪಿನಾ (16), ಕುಟುಂಬದ ಸದಸ್ಯರಾದ ಶಿವಚರಣ್‌ ಪಟೇಲ್‌ (45), ಮನ್ಬೋಧ್‌ ಪಟೇಲ್‌ (57) ಮೃತಪಟ್ಟಿದ್ದಾರೆ ಎಂದು ಕೊರ್ಬ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ಧಾರ್ಥ್‌ ತಿವಾರಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಜಹ್ರು ಪಟೇಲ್‌ ತಮ್ಮ ಜಮೀನಿನ ಪಕ್ಕದ ಬಾವಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಅವರ ಮಗಳು ಸಹ ಇಳಿದಿದ್ದಾರೆ. ಇಬ್ಬರೂ ಮೇಲೆ ಬಾರದಿದ್ದಾಗ ಮತ್ತಿಬ್ಬರು ಬಾವಿಗೆ ಇಳಿದಿದ್ದಾರೆ. ಆದರೆ ಎಲ್ಲರೂ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಬಾವಿಯೊಳಗಿನ ಕೆಲ ವಿಷಯಕಾರಿ ಅನಿಲ ಸೇವನೆಯಿಂದ ಇವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ ಎಂದು ತಿವಾರಿ ವಿವರಿಸಿದ್ದಾರೆ.

ರಾಜ್ಯ ವಿಪತ್ತ ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಸಿಬ್ಬಂದಿ ಎರಡೂ ಬಾವಿಗಳಿಂದ ಮೃತದೇಹಗಳನ್ನು ಹೊರತೆಗೆದಿದ್ದು, ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡೂ ದುರಂತಗಳಿಗೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ವಿಷ್ಣುದೇವ್‌ ಸಾಯ್‌ ಅವರು, ಮೃತರ ಕುಟುಂಬಕ್ಕೆ ತಲಾ ₹ 9 ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT