ಲಖನೌ: ನಿರ್ಗಮನದ ಹಾದಿಯಲ್ಲಿರುವವರ ಮಾತಿಗಳಿಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಸರ್ಕಾರವು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
‘ಆದಿತ್ಯನಾಥ್ ಅವರ ಮಾತುಗಳಿಗೆ ಅವರ ಪಕ್ಷದವರೇ ಕಿವಿಕೊಡದಿದ್ದಾಗ, ನಿರ್ಗಮನದ ಹಾದಿಯಲ್ಲಿರುವವರ ಮಾತಿಗಳಿಗೆ ನಾವೇಕೆ ಚಿಂತಿಸಬೇಕು’ ಎಂದು ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
‘ಯಾವ ಕಾರಣದಿಂದ ಐಪಿಎಸ್ ಅಧಿಕಾರಿಗಳು ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದಾರೆ. ದಿನಕ್ಕೆ ₹15 ಲಕ್ಷ ಗಳಿಸುವ ಪೊಲೀಸ್ ಠಾಣೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬಿಜೆಪಿ ಸದಸ್ಯರೇ ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ. ಇಂತಹ ಚುವಟಿಕೆಗಳಿಗೆ ಬುಲ್ಡೋಜರ್ ಕ್ರಮ ಎಂದು ಹೆಸರಿಸಲಾಗಿದೆ’ ಎಂದು ಯಾದವ್ ಆರೋಪಿಸಿದ್ದಾರೆ.
‘ಅಧಿಕಾರವನ್ನು ಕುಟುಂಬದ ಆಸ್ತಿ ಎಂದು ಪರಿಗಣಿಸಿರುವ ಯಾದವ್ ಅವರು, ಅಧಿಕಾರಕ್ಕೆ ಮತ್ತೆ ಹಿಂದಿರುಗುದಿಲ್ಲ ಎಂದು ಅರಿತುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಷಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ’ ಎಂದು ಯಾದವ್ ವಿರುದ್ಧ ಯೋಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.