ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಜಪ್ತಿ ಹಣ ₹ 290 ಕೋಟಿಗೆ ಏರಿಕೆ

ಎಣಿಕೆಗೆ 40 ಯಂತ್ರಗಳ ಬಳಕೆ * ಇಲಾಖೆ, ಬ್ಯಾಂಕ್‌ಗಳ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
Published 9 ಡಿಸೆಂಬರ್ 2023, 15:30 IST
Last Updated 9 ಡಿಸೆಂಬರ್ 2023, 15:30 IST
ಅಕ್ಷರ ಗಾತ್ರ

ನವದೆಹಲಿ/ಭುವನೇಶ್ವರ: ತೆರಿಗೆ ವಂಚನೆ ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಡಿಶಾದ ಭುವನೇಶ್ವರದಲ್ಲಿ ಜಪ್ತಿ ಮಾಡಿರುವ ಹಣ ₹ 290 ಕೋಟಿಗೆ ಏರುವ ಸಾಧ್ಯತೆಯಿದೆ. ಎಣಿಕೆ ನಡೆಯುತ್ತಿದೆ.

ಅಧಿಕಾರಿಗಳ ಪ್ರಕಾರ, ಒಂದು ನಿರ್ದಿಷ್ಟ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಿರುವ ಅತ್ಯಧಿಕ ಮೊತ್ತದ ‘ಕಪ್ಪುಹಣ’ ಇದಾಗಿದೆ. ಭುವನೇಶ್ವರದ ಬೌದ್‌ ಡಿಸ್ಟಿಲರಿ ಪ್ರೈವೇಟ್‌ ಲಿಮಿಟೆಡ್‌ನ ವಿವಿಧ ಕಚೇರಿ ಮೇಲೆ ಡಿ.6ರಂದು ದಾಳಿ ನಡೆದಿತ್ತು.

ಹಣ ಎಣಿಕೆ ಕಾರ್ಯ ಶನಿವಾರವೂ ಮುಂದುವರಿಯಿತು. ಎಣಿಕೆ ಕಾರ್ಯಕ್ಕಾಗಿ 40 ದೊಡ್ಡ ಮತ್ತು ಸಣ್ಣ ಗಾತ್ರದ ಎಣಿಕೆ ಯಂತ್ರಗಳ ನೆರವು ಪಡೆದಿದ್ದು, ಇಲಾಖೆ ಮತ್ತು ಬ್ಯಾಂಕ್‌ಗಳ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜಪ್ತಿಯಾದ ಮೊತ್ತವನ್ನು ಎಣಿಕೆ ಬಳಿಕ ಬ್ಯಾಂಕ್‌ಗಳಿಗೆ ಸಾಗಣೆ ಮಾಡಲು ಹೆಚ್ಚಿನ ವಾಹನಗಳನ್ನು ಒದಗಿಸುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೊಲಾಂಗಿರ್‌ನಲ್ಲಿರುವ ಎಸ್‌ಬಿಐನ ಕೇಂದ್ರ ಶಾಖೆಗೆ ಜಮೆ ಮಾಡಲು ಅಧಿಕಾರಿಗಳು ಶುಕ್ರವಾರ ಒಟ್ಟು 156 ಚೀಲದಲ್ಲಿ ಹಣವನ್ನು ಒಯ್ದರು. 

ದಾಳಿ ನಡೆಸಿದ್ದ ಸ್ಥಳಗಳಲ್ಲಿ ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್‌ ಪ್ರಸಾದ್ ಸಾಹು ಅವರಿಗೆ ಸೇರಿದ ಸ್ಥಳವೂ ಸೇರಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಕ್ರಿಯೆಗೆ ಪಿಟಿಐ ಸುದ್ದಿಸಂಸ್ಥೆ ಯತ್ನಿಸಿದ್ದರೂ ಸಾಹು ಲಭ್ಯರಾಗಲಿಲ್ಲ.

ಹೇಳಿಕೆ ದಾಖಲು: ನೋಟುಗಳ ಎಣಿಕೆ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಕಂಪನಿಯ ವಿವಿಧ ಅಧಿಕಾರಿಗಳು, ಸಂಬಂಧಿಸಿದ ಇತರರ ಹೇಳಿಕೆಗಳನ್ನು ದಾಖಲಿಸುವ ಕಾರ್ಯವು ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದುವರೆಗೂ ₹ 250 ಕೋಟಿ ಮೊತ್ತದ ಹಣ ಜಪ್ತಿಯಾಗಿದೆ. ಎಣಿಕೆಯ ಹಿಂದೆಯೇ ನಿರಂತರವಾಗಿ ಒಡಿಶಾದ ಸರ್ಕಾರಿ ಬ್ಯಾಂಕ್‌ನ ಶಾಖೆಗಳಿಗೆ ಜಮೆ ಮಾಡಲಾಗುತ್ತಿದೆ. ಹೆಚ್ಚಿನವು ₹ 500 ಮುಖಬೆಲೆಯ ನೋಟುಗಳು ಎಂದು ತಿಳಿಸಿದ್ದಾರೆ.

₹ 230 ಕೋಟಿ ಹಣವನ್ನು ಬೊಲಾಂಗಿರ್‌ ಜಿಲ್ಲೆಯಲ್ಲಿರುವ ಕಂಪನಿಯ ಕಚೇರಿಯಲ್ಲಿ 8–10 ಅಲ್ಮೇರಾಗಳಲ್ಲಿ ಜೋಡಿಸಿ ಇಡಲಾಗಿತ್ತು. ಉಳಿದದ್ದನ್ನು ತಿತ್ಲಾಗರ್‌, ಸಂಬಲ್‌ಪುರ್, ರಾಂಚಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ. 

ಇಲಾಖೆಯ ಪ್ರಧಾನ ನಿರ್ದೇಶಕ ಸಂಜಯ್‌ ಬಹಾದ್ದೂರ್‌ ಭುವನೇಶ್ವರದಲ್ಲಿಯೇ ಮೂರು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ಆದರೆ, ದಾಳಿ ಮತ್ತು ತನಿಖೆ ಪ್ರಗತಿಯ ವಿವರಗಳನ್ನು ನೀಡಲು ಅವರು ನಿರಾಕರಿಸಿದರು. 

‘ಇಲಾಖೆಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದಷ್ಟೇ ಹೇಳಿದರು. ಮೂಲಗಳ ಪ್ರಕಾರ, 150 ಅಧಿಕಾರಿಗಳು ದಾಳಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ವಶಪಡಿಸಿಕೊಂಡಿರುವ ಡಿಜಿಟಲ್‌ ದಾಖಲೆಗಳ ಪರಿಶೀಲನೆಗಾಗಿ ಇಲಾಖೆಯು ಹೈದರಾಬಾದ್‌ನಿಂದ ಹೆಚ್ಚುವರಿಯಾಗಿ 20 ಅಧಿಕಾರಿಗಳನ್ನು ಕರೆಯಿಸಿಕೊಂಡಿದೆ.

‘ಕಾರ್ಯದೊತ್ತಡದ ಪರಿಣಾಮ ಎಣಿಕೆ ಯಂತ್ರಗಳು ಕೈಕೊಡುತ್ತಿವೆ. ಹೀಗಾಗಿ ವಿಳಂಬವಾಗಿದೆ. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಇತರೆ ಬ್ಯಾಂಕ್‌ಗಳಿಂದಲೂ ಹಣ ಎಣಿಕೆ ಯಂತ್ರಗಳನ್ನು ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮದ್ಯ ವಿತರಕರು, ಮಾರಾಟಗಾರರು, ಉದ್ಯಮ ಸಂಸ್ಥೆಗಳು ಪಾವತಿಸಿರುವ ‘ದಾಖಲೆಯಿಲ್ಲದ’ ದೊಡ್ಡ ಮೊತ್ತದ ನಗದನ್ನು ಸಂಗ್ರಹಿಸಲಾಗಿದೆ ಎಂಬ ‘ಖಚಿತ ಮಾಹಿತಿ’ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಡಿ.6ರಂದು ಬೌದ್‌ ಡಿಸ್ಟಿಲರಿ ಕಂಪನಿ ಕಚೇರಿ ಮೇಲೆ ದಾಳಿ ನಡೆದಿತ್ತು. ಇದು, ಬಲ್‌ದೇವ್‌ ಸಾಹು ಇನ್ಫ್ರಾ ಪ್ರೈವೇಟ್‌ ಲಿಮಿಟೆಡ್‌ನ ಅಧೀನ ಸಂಸ್ಥೆಯಾಗಿದೆ. ಇದು, ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದರೊಬ್ಬರಿಗೂ ಸೇರಿದೆ ಎನ್ನಲಾಗಿದೆ. ಸಂಬಲ್‌ಪುರ್‌, ರೂರ್ಕೆಲಾ, ಬೊಲಾಂಗಿರ್, ಸುಂದರ್‌ಗರ್ ಮತ್ತು ಭುವನೇಶ್ವರದ ವಿವಿಧೆಡೆ ದಾಳಿ ನಡೆದಿತ್ತು.

ರಾಂಚಿಯಲ್ಲಿರುವ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ದೀರಜ್‌ ಸಾಹು ಅವರ ರಾಂಚಿಯ ನಿವಾಸದಲ್ಲಿ ಭದ್ರತೆಗಾಗಿ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

ರಾಂಚಿಯಲ್ಲಿರುವ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ದೀರಜ್‌ ಸಾಹು ಅವರ ರಾಂಚಿಯ ನಿವಾಸದಲ್ಲಿ ಭದ್ರತೆಗಾಗಿ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

–ಪಿಟಿಐ ಚಿತ್ರ

ಮತ್ತೊಂದು ಡಿಸ್ಟಿಲರಿ ಮೇಲೆ ದಾಳಿ: ₹ 50 ಕೋಟಿ ‘ಕಪ್ಪುಹಣ’ ಜಪ್ತಿ

ಭುವನೇಶ್ವರ: ‘ದಾಖಲೆರಹಿತ’ ಮೊತ್ತದ ಬೆನ್ನತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಇಲ್ಲಿನ ಮತ್ತೊಂದು ಡಿಸ್ಟಿಲರಿ ಸಮೂಹದ ಮೇಲೆ ದಾಳಿ ಮಾಡಿದ್ದು 20 ಚೀಲದಲ್ಲಿ ದೊಡ್ಡ ಮೊತ್ತ ಜಪ್ತಿ ಮಾಡಿದೆ. ಬೊಲಾಂಗಿರ್‌ ಜಿಲ್ಲೆಯ ಸುದಾಪರ ವಲಯದಲ್ಲಿರುವ ದೇಶಿ ಮದ್ಯ ತಯಾರಿಕಾ ಕಂಪನಿಯ ಕಚೇರಿ ಮೇಲೆ ದಾಳಿ ನಡೆದಿದೆ. ಜಪ್ತಿ ಮಾಡಿದ ಹಣದ ಮೊತ್ತ ಅಂದಾಜು ₹ 50 ಕೋಟಿ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಸೇರಿದ್ದಿರಬಹುದು: ಬಿಜೆಡಿ
ದಾಳಿ ನಡೆಸಿ ದೊಡ್ಡ ಮೊತ್ತವನ್ನು ಜಪ್ತಿ ಮಾಡಿರುವ ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಒಡಿಶಾದ ಆಡಳಿತ ಪಕ್ಷ ಬಿಜೆಡಿ ಸ್ವಾಗತಿಸಿದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ.  ‘ಜಾರ್ಖಂಡ್‌ನ ಬಿಜೆಪಿ ನಾಯಕರ ಪ್ರಕಾರ ಈ ಹಣ ಕಾಂಗ್ರೆಸ್‌ ನಾಯಕರಿಗೆ ಸೇರಿದ್ದಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ ನಾಯಕರು ಈ ಮೊತ್ತ ಬಿಜೆಪಿ ನಾಯಕರಿಗೆ ಸೇರಿದ್ದಾಗಿದೆ ಎಂದು ಹೇಳುತ್ತಿದ್ದಾರೆ. ಬಹುಶಃ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರಿಬ್ಬರೂ ತಮ್ಮ ಹಣವನ್ನು ಅಡಗಿಸಿಡುವಂತೆ ಉದ್ಯಮಿಗೆ ನೀಡಿರಬಹುದು’ ಎಂದು ಬಿಜೆಡಿ ಪ್ರತಿಕ್ರಿಯಿಸಿದೆ.

ಹಣದ ಮೂಲ ಯಾವುದು –ಪ್ರಧಾನ್‌ ಪ್ರಶ್ನೆ

ಭುವನೇಶ್ವರ: ಐ.ಟಿ ಅಧಿಕಾರಿಗಳು ಜಪ್ತಿ ಮಾಡಿರುವ ಕೋಟ್ಯಂತರ ರೂಪಾಯಿಯ ಮೂಲ ಯಾವುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರಶ್ನಿಸಿದ್ದಾರೆ. ‘ಒಡಿಶಾ ಪಶ್ಚಿಮ ಬಂಗಾಳ ಜಾರ್ಖಂಡ್‌ ಮೂಲದ ಕೆಲವರಿಗೂ ಈ ಹಣಕ್ಕೂ ಸಂಬಂಧವಿದೆ ಎನ್ನಲಾಗಿದೆ. ಇದರ ಮೂಲ ಯಾವುದು ಇದರ ಹಿಂದಿನ ಸತ್ಯ ಏನು? ಒಡಿಶಾದ ಕೆಲವರಿಗೂ ಜಪ್ತಿಯಾದ ಹಣಕ್ಕೂ ಸಂಬಂಧವಿದೆಯಾ’ ಎಂದು ಎಕ್ಸ್‌ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.  ನೈತಿಕತೆ ಮತ್ತು ಪ್ರಾಮಾಣಿಕತೆ ಕುರಿತು ಮಾತನಾಡುವ ಕೆಲ ಪಕ್ಷಗಳು ಮೌನವಾಗಿ ಇರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT