ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಶೇ 50ರ ಮೀಸಲಾತಿ ಮಿತಿ ತೆಗೆಯುತ್ತೇವೆ: ರಾಹುಲ್‌

ಜನರ ಸ್ಥಿತಿಗತಿ ತಿಳಿಯಲು ಜಾತಿ ಗಣತಿ, ಸಮೀಕ್ಷೆ
Published 9 ಮಾರ್ಚ್ 2024, 14:09 IST
Last Updated 9 ಮಾರ್ಚ್ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮತ್ತು ಆರ್ಥಿಕ ಸ್ಥಿತಿಗತಿ ಆಧರಿಸಿ ಮೀಸಲಾತಿ ಮೇಲಿನ ಶೇ 50ರಷ್ಟು ಮಿತಿಯನ್ನು ತೆಗೆದುಹಾಕುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ಪ್ರತಿಪಾದಿಸಿದ್ದಾರೆ.

‘ಯಾರು ಬಡವರು ಎಂದು ನಾವು ಎಂದಾದರೂ ಯೋಚಿಸಿದ್ದೀವಾ? ಎಷ್ಟು ಮಂದಿ ಬಡವರಿದ್ದಾರೆ ಮತ್ತು ಅವರ ಸ್ಥಿತಿ ಹೇಗಿದೆ? ಇವೆಲ್ಲವನ್ನೂ ಲೆಕ್ಕ ಹಾಕುವ ಅಗತ್ಯವಿಲ್ಲವೇ?’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೀಗಾಗಿ ಕಾಂಗ್ರೆಸ್‌ ಘೋಷಣೆಯು ‘ಲೆಕ್ಕಿಸು’ ಎಂಬುದಾಗಿದ್ದು, ಇದು ನ್ಯಾಯದ ಕಡೆಗೆ ಮೊದಲ ಹೆಜ್ಜೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

‘ಬಿಹಾರದಲ್ಲಿ ನಡೆಸಿದ ಜಾತಿ ಸಮೀಕ್ಷೆಯು ಶೇ 88ರಷ್ಟು ಬಡ ಜನರು ದಲಿತ, ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಎಂಬುದನ್ನು ಬಹಿರಂಗಪಡಿಸಿದೆ. ಬಿಹಾರದ ಅಂಕಿ ಅಂಶಗಳು ದೇಶದ ನೈಜ ಚಿತ್ರಣದ ಸಣ್ಣ ನೋಟವಾಗಿದೆ. ದೇಶದ ಬಡ ಜನರು ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಕಲ್ಪನೆಯೂ ನಮಗೆ ಇಲ್ಲ’ ಎಂದಿದ್ದಾರೆ.

‘ಹೀಗಾಗಿಯೇ ನಾವು ಜಾತಿ ಗಣತಿ ಮತ್ತು ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ಎಂಬ ಎರಡು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಅದರ ಆಧಾರದ ಮೇಲೆ ಮೀಸಲಾತಿಗೆ ಸಂಬಂಧಿಸಿದಂತೆ ಇರುವ ಶೇ 50ರ ಮಿತಿಯನ್ನು ತೆಗೆಯುತ್ತೇವೆ’ ಎಂದು ಅವರು ಭರವಸೆ ನೀಡಿದ್ದಾರೆ.

‘ಇದರಿಂದ ದೇಶದ ಜನರ ವಾಸ್ತವ ಸ್ಥಿತಿಗತಿ ಗೊತ್ತಾಗುತ್ತದೆ. ಎಲ್ಲರಿಗೂ ಸರಿಯಾದ ಮೀಸಲಾತಿ, ಹಕ್ಕುಗಳು ಮತ್ತು ಹಂಚಿಕೆಯನ್ನು ಒದಗಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ. 

‘ಅಲ್ಲದೆ ಬಡವರಿಗೆ ಸರಿಯಾದ ನೀತಿ, ಯೋಜನೆಗಳನ್ನು ಮಾಡಲು ಇದು ಸಹಾಯಕವಾಗುತ್ತದೆ. ಶಿಕ್ಷಣ, ಸಂಪಾದನೆ, ಔಷಧಿಗಾಗಿ ಪರದಾಡುವುದರಿಂದ ಅವರನ್ನು ಪಾರು ಮಾಡಬಹುದಾಗಿದೆ. ಅಲ್ಲದೆ ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಜೋಡಿಸಲೂ ನೆರವಾಗುತ್ತದೆ’ ಎಂದು ರಾಹುಲ್‌ ವಿವರಿಸಿದ್ದಾರೆ.

‘ಜಾತಿ ಗಣತಿ ನಿಮ್ಮೆಲ್ಲರ ಹಕ್ಕಾಗಿದ್ದು, ನಿಮ್ಮನ್ನು ಕಷ್ಟಗಳ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯತ್ತದೆ. ಆದ್ದರಿಂದ ಇದಕ್ಕಾಗಿ ಧ್ವನಿ ಎತ್ತಿ’ ಎಂದು ಅವರು ಕರೆ ನೀಡಿದ್ದಾರೆ. 

‘ಸಾಮಾಜಿಕ– ಆರ್ಥಿಕ ಜಾತಿ ಗಣತಿಯು ಜನರಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸರ್ಕಾರಕ್ಕೆ ನೆರವಾಗುತ್ತದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಹವನ) ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

‘ಇದರಿಂದ ಪ್ರತಿ ಕುಟುಂಬದ ಆಸ್ತಿ, ಸಾಲದ ಹೊರೆ, ಜಮೀನು, ಆದಾಯ ಒಳಗೊಂಡಂತೆ ಸಮಗ್ರ ಆರ್ಥಿಕ ಸ್ಥಿತಿಗತಿಯ ಚಿತ್ರಣ ದೊರೆಯುತ್ತದೆ. ದೇಶದಲ್ಲಿ ಈಗಿರುವ ಜಾತಿಗಳು, ಯಾವ ಜಾತಿ ಬಲಿಷ್ಠವಾಗಿದೆ ಮತ್ತು ಯಾವುದು ಬಲಹೀನವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT