ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Parliament | ಓವೈಸಿ ಪ್ರಮಾಣ: ಕೋಲಾಹಲ

ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಪ್ರದೇಶದ ಪ್ರಸ್ತಾಪ * ಕಡತಕ್ಕೆ ಹೋಗುವುದಿಲ್ಲ ಎಂದ ಸ್ಪೀಕರ್‌ ಪೀಠ
Published 25 ಜೂನ್ 2024, 23:44 IST
Last Updated 25 ಜೂನ್ 2024, 23:44 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಸದಸ್ಯರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಅವರು ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಪ್ರದೇಶವನ್ನು ಪ್ರಸ್ತಾಪಿಸಿದ್ದು ಸದನದಲ್ಲಿ ಕೋಲಾಹಲ ಎಬ್ಬಿಸಿತು.

ಪ್ರಮಾಣವಚನ ಹೊರತುಪಡಿಸಿ ಬೇರೆ ಯಾವುದೇ ಮಾತುಗಳು ಕಡತಕ್ಕೆ ಹೋಗುವುದಿಲ್ಲ ಎಂದು ಈ ವೇಳೆ ಸ್ಪೀಕರ್‌ ಪೀಠ ತಿಳಿಸಿತು.

ಹೈದರಾಬಾದ್‌ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆ ಆಗಿರುವ ಓವೈಸಿ ಅವರು ಉರ್ದು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಅವರು ಪ್ರಾರ್ಥನೆಯನ್ನೂ ಪಠಿಸಿದರು.

ಪ್ರಮಾಣವಚನದ ಬಳಿಕ ಅವರು, ತೆಲಂಗಾಣ, ಬಾಬಾಸಾಹೇಬ್‌ ಭೀಮರಾವ್‌ ಅಂಬೇಡ್ಕರ್‌, ಮುಸ್ಲಿಮರಿಗಾಗಿ ಘೋಷಣೆಯನ್ನು ಕೂಗಿದರು.

ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಪ್ರದೇಶದ ಹೆಸರನ್ನೂ ಓವೈಸಿ ಈ ವೇಳೆ ಪ್ರಸ್ತಾಪಿಸಿದರು. ಇದಕ್ಕೆ ಆಡಳಿತ ಪಕ್ಷದ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದು ಕೆಲ ಕಾಲ ಕೋಲಾಹಲಕ್ಕೆ ಕಾರಣವಾಯಿತು.

ಈ ವೇಳೆ ಸ್ಪೀಕರ್‌ ಪೀಠದಲ್ಲಿದ್ದ ರಾಧಾ ಮೋಹನ್‌ ಸಿಂಗ್‌ ಅವರು, ‘ಪ್ರಮಾಣವಚನದ ಹೊರತಾಗಿ ಯಾವುದೇ ಮಾತುಗಳು ದಾಖಲೆ ಆಗುವುದಿಲ್ಲ ಎಂದು ಸದಸ್ಯರಿಗೆ ಭರವಸೆ ನೀಡಿದರು. ಹೀಗೆ ಆದ ನಂತರವೂ ಕೆಲ ಕ್ಷಣ ಗೊಂದಲ ಮುಂದುವರಿಯಿತು. ಆನಂತರ ಪ್ರಮಾಣವಚನ ಸ್ವೀಕಾರ ಮುಂದುವರಿಯಿತು.

ಸ್ಪೀಕರ್‌ ಪೀಠಕ್ಕೆ ಮರಳಿದ ಹಂಗಾಮಿ ಸ್ಪೀಕರ್‌ ಭರ್ತೃಹರಿ ಮಹತಾಬ್‌ ಅವರೂ, ‘ಪ್ರಮಾಣವಚನವನ್ನು ಮಾತ್ರ ದಾಖಲಿಸಲಾಗುತ್ತಿದೆ’ ಎಂದು ಹೇಳಿದರು.

ಜೈ ಪ್ಯಾಲೆಸ್ಟೀನ್‌ ಎಂದ ಓವೈಸಿ:

ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಓವೈಸಿ, ‘ಇತರ ಸದಸ್ಯರೂ ಬೇರೆ ಬೇರೆ ಮಾತುಗಳನ್ನಾಡುತ್ತಿದ್ದಾರೆ. ನಾನು ಜೈ ಭೀಮ್‌, ಜೈ ಮೀಮ್‌, ಜೈ ತೆಲಂಗಾಣ, ಜೈ ಪ್ಯಾಲೆಸ್ಟೀನ್‌ ಎಂದು ಹೇಳಿದೆ. ಅದು ಹೇಗೆ ತಪ್ಪಾಗುತ್ತದೆ? ಸಂವಿಧಾನದ ನಿಬಂಧನೆಗಳು ಏನಿವೆ ಎಂಬುದನ್ನು ಹೇಳಿ? ಬೇರೆಯವರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಬೇಕಲ್ಲವೇ. ಮಹಾತ್ಮ ಗಾಂಧಿ ಅವರು ಪ್ಯಾಲೆಸ್ಟೀನ್‌ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿ’ ಎಂದರು.

ಪ್ಯಾಲೆಸ್ಟೀನ್‌ ಅನ್ನು ಏಕೆ ಉಲ್ಲೇಖಿಸಿದಿರಿ ಎಂಬ ಪ್ರಶ್ನೆಗೆ, ‘ಅವರು ತುಳಿತಕ್ಕೆ ಒಳಗಾದ ಜನರು’ ಎಂದು ಓವೈಸಿ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT