ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ 43 ವರ್ಷದ ಆತಿಶಿ ಅವರು ನವದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಹಿಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಳಸುತ್ತಿದ್ದ ಕುರ್ಚಿಯನ್ನು ಬಳಸದೆ ಅಚ್ಚರಿ ಮೂಡಿಸಿದ್ದಾರೆ.
ಆತಿಶಿ ನಡೆ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ‘ಆತಿಶಿ ಅವರು ಸಿಎಂ ಕುರ್ಚಿಯ ಮೇಲೆ ಕೇಜ್ರಿವಾಲ್ ಅವರ ಚಪ್ಪಲಿಯನ್ನು ಇಟ್ಟುಕೊಳ್ಳಬಹುದು ಮತ್ತು ಚಪ್ಪಲಿಗಳು ಸರ್ಕಾರವನ್ನು ನಡೆಸುತ್ತಿವೆ ಎಂದು ಹೇಳಬಹುದು!’ ಎಂದು ವ್ಯಂಗ್ಯವಾಡಿದ್ದಾರೆ.
She might as well keep Kejriwal’s slippers on the CM’s chair & say that the slippers are running the government! pic.twitter.com/Mv7E37bIzP
— Prashant Bhushan (@pbhushan1) September 23, 2024
‘ಒಂದೇ ವೈನ್ ಬೇರೆ ಬೇರೆ ಬಾಟಲ್‌ಗಳಲ್ಲಿ.. ಎಂಥಾ ಪತನ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ.
Same wine in different bottles.. what a fall … #justasking https://t.co/CXLYhGJOKC
— Prakash Raj (@prakashraaj) September 23, 2024
ಆತಿಶಿ ಹೇಳಿದ್ದೇನು?
ದೆಹಲಿಯ ಮುಖ್ಯಮಂತ್ರಿಯಾಗಿ ಆತಿಶಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ, ಹಿಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಳಸುತ್ತಿದ್ದ ಕುರ್ಚಿಯನ್ನು ಪಕ್ಕದಲ್ಲಿಯೇ ಇಟ್ಟುಕೊಂಡಿದ್ದರು. ಆ ಮೂಲಕ ‘ಅವರಿಗಾಗಿ ಕಾಯುತ್ತಿದ್ದೇನೆ’ ಎಂದು ಸಂದೇಶ ರವಾನಿಸಿದ್ದಾರೆ.
ದೆಹಲಿ ಸಚಿವಾಲಯದಲ್ಲಿರುವ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ಅತಿಶಿ ಅವರು ಬಿಳಿಬಣ್ಣದ ಕುರ್ಚಿಯಲ್ಲಿ ಆಸೀನರಾಗಿದ್ದರು. ಕೇಜ್ರಿವಾಲ್ ಬಳಸುತ್ತಿದ್ದ ಕೆಂಪು ಬಣ್ಣದ ಕುರ್ಚಿಯು ಬದಿಯಲ್ಲಿತ್ತು. ದೆಹಲಿಯ ಮುಖ್ಯಮಂತ್ರಿಯ ಹುದ್ದೆಯ ಕುರ್ಚಿಯು ಕೇಜ್ರಿವಾಲ್‌ಗೆ ಸೇರಿದ್ದಾಗಿದೆ. ಆ ಕುರ್ಚಿಯು ಕೊಠಡಿಯಲ್ಲಿ ಹಾಗೆಯೇ ಇರಲಿದ್ದು, ಅವರಿಗಾಗಿ ಕಾದು ಕೂತಿದೆ’ ಎಂದಿದ್ದರು.
‘ಮಹಾಕಾವ್ಯ ರಾಮಾಯಣದ ಉದಾಹರಣೆಯನ್ನು ಉಲ್ಲೇಖಿಸಿ, 14 ವರ್ಷಗಳ ಕಾಲ ಶ್ರೀರಾಮ ವನವಾಸಕ್ಕೆ ತೆರಳಿದಾಗ ಆತನ ಸಹೋದರ ಭರತ ಎದುರಿಸಿದ ಸ್ಥಿತಿಯೂ ನನ್ನದಾಗಿದೆ. ಭಗವಾನ್ ಶ್ರೀರಾಮನ ಮರದ ಚಪ್ಪಲಿಗಳನ್ನು ಸಿಂಹಾಸನದ ಮೇಲಿರಿಸಿ, 14 ವರ್ಷಗಳ ಕಾಲ ಅಯೋಧ್ಯೆಯಲ್ಲಿ ಭರತ ಆಡಳಿತ ನಡೆಸಿದಂತೆ ಮುಂದಿನ ನಾಲ್ಕು ತಿಂಗಳ ಕಾಲ ದೆಹಲಿ ಸರ್ಕಾರದ ಆಡಳಿತ ನಡೆಸಲಿದ್ದೇನೆ’ ಎಂದು ಹೇಳಿದ್ದರು.
‘ತಂದೆಯ ಆಸೆಯನ್ನು ಈಡೇರಿಸಿದ್ದರಿಂದಲೇ, ಭಗವಾನ್ ರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಯಲಾಗುತ್ತದೆ. ಅವರ ಜೀವನ ಘನತೆ ಹಾಗೂ ನೈತಿಕತೆಗೆ ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ದೇಶದರಾಜಕಾರಣದಲ್ಲಿ ಘನತೆ ಹಾಗೂ ನೈತಿಕತೆಯ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ’ ಎಂದು ತಿಳಿಸಿದ್ದರು.
ಇದೇ ವೇಳೆ ಬಿಜೆಪಿಗೆ ಕೇಜ್ರಿವಾಲ್ ಅವರ ವರ್ಚಸ್ಸು ಹಾಳು ಮಾಡಲು ಇನ್ನು ಮುಂದೆ ಯಾವುದೇ ಮಾರ್ಗ ಉಳಿದಿಲ್ಲ ಎಂದು ತಿರುಗೇಟು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.