ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ದೇಣಿಗೆ; ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ–ತನಿಖೆಗೆ ಕಾಂಗ್ರೆಸ್ ಆಗ್ರಹ

Published 23 ಫೆಬ್ರುವರಿ 2024, 12:04 IST
Last Updated 23 ಫೆಬ್ರುವರಿ 2024, 12:04 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ಸಂಸ್ಥೆಗಳಿಂದ ಬಲವಂತವಾಗಿ ದೇಣಿಗೆ ಪಡೆಯಲು ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘2018–19 ಮತ್ತು 2022–23ರ ಹಣಕಾಸು ವರ್ಷಗಳಲ್ಲಿ ಸರಿಸುಮಾರು 30 ಕಂಪನಿಗಳು ಬಿಜೆಪಿಗೆ ಸುಮಾರು ₹335 ಕೋಟಿಗಳಷ್ಟು ದೇಣಿಗೆಯನ್ನು ನೀಡಿವೆ. ಈ ಸಮಯದಲ್ಲಿ ಕಂಪನಿಗಳು ಇ.ಡಿ ಕ್ರಮವನ್ನು ಎದುರಿಸಿದ್ದವು’ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್‌ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ರಮೇಶ್‌ ತಿಳಿಸಿದ್ದಾರೆ.

ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಲವಂತವಾಗಿ ಬಿಜೆಪಿಗೆ ದೇಣಿಗೆ ನೀಡುವಂತೆ ಖಾಸಗಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿರುವ ರಮೇಶ್‌, ಬಿಜೆಪಿಯ ಹಣಕಾಸಿನ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

‘ಹಣಕಾಸಿನ ವಿಷಯದ ಕುರಿತು ನಿಮ್ಮ (ಬಿಜೆಪಿ) ಬಳಿ ಮುಚ್ಚಿಡಲು ಯಾವ ವಿಷಯಗಳು ಇಲ್ಲದಿದ್ದರೆ, ಬಿಜೆಪಿಯ ಖಜಾನೆ ತುಂಬಲು ಕಾರಣವಾದ ಅಂಶಗಳನ್ನು ಕಾಲಾನುಕ್ರಮವಾಗಿ ಪ್ರಸ್ತುತಪಡಿಸಲು ನೀವು ತಯಾರಿರುವಿರಾ. ಒಂದು ವೇಳೆ ವಾಸ್ತವಿಕ ವಿವರಣೆಯನ್ನು ನೀಡಲು ಸಿದ್ಧರಿಲ್ಲದಿದ್ದರೆ, ಬಿಜೆಪಿಗೆ ಬರುತ್ತಿರುವ ದೇಣಿಗೆಯ ಸಂಶಯಾಸ್ಪದ ವ್ಯವಹಾರಗಳ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆಗೆ ಹಾಜರಾಗಲು ನಿಮಗೆ ಧೈರ್ಯವಿದೆಯೇ’ ಎಂದು ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಈ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆ ಅಗತ್ಯವಿದೆ ಎಂದು ರಮೇಶ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT