ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಅಕಾಲಿಕ ಮಳೆ: ಗೋಧಿ ಬೆಳೆ ನಷ್ಟದ ಭೀತಿಯಲ್ಲಿ ರೈತರು

Published 30 ಮಾರ್ಚ್ 2024, 11:39 IST
Last Updated 30 ಮಾರ್ಚ್ 2024, 11:39 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ಹಲವು ಭಾಗಗಳಲ್ಲಿ ಶನಿವಾರ ಅಕಾಲಿಕ ಮಳೆಯಾಗಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಹಲವೆಡೆ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಜೋರಾಗಿ ಮಳೆ ಸುರಿದಿದೆ. ಬಟಿಂಡಾ, ಫಜಿಲ್ಕಾ, ಲೂಧಿಯಾನಾ, ಪಟಿಯಾಲಾ, ಅಮೃತಸರ ಹಾಗೂ ಪಠಾಣ್‌ಕೋಟ್‌ ಭಾಗಗಳಲ್ಲಿ ಜೋರಾಗಿ ಮಳೆ ಸುರಿದಿದೆ. 

ಪಂಜಾಬ್ ಮತ್ತು ಹರಿಯಾಣ ಭಾಗದಲ್ಲಿ ಗೋಧಿಯ ಕೊಯ್ಲು ಏ. 1ರಿಂದ ಆರಂಭವಾಗಲಿದೆ. ಈ ಸಮಯದಲ್ಲಿ ಸುರಿದಿರುವ ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಮನೆ ಮಾಡಿದೆ. 

‘ಬಿರುಗಾಳಿ ಮತ್ತು ಜೋರಾದ ಮಳೆಗೆ ಗೋಧಿ ಬೆಳೆ ನೆಲ ಕಚ್ಚಿದೆ. ಇದರ ಕೊಯ್ಲು ಮಾಡುವುದು ಕಷ್ಟದ ಕೆಲಸ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ಬಟಿಂಡಾದ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ರಾಜ್ಯದ ಮಾಲ್ವಾ ಪ್ರಾಂತ್ಯದಲ್ಲಿ ಸುರಿದ ಅಕಾಳಿಕ ಮಳೆಗೆ ಗೋಧಿ ಬೆಳೆ ಹಾನಿಗೀಡಾಗಿದೆ. ಕೆಲ ದಿನಗಳ ಹಿಂದೆಯೂ ಆಲಿಕಲ್ಲು ಸಹಿತ ಮಳೆ ಸುರಿದು ರೈತರ ನೆಮ್ಮದಿ ಹಾಳು ಮಾಡಿತ್ತು. ಹೀಗಾಗಿ ತಕ್ಷಣ ಬೆಳೆ ನಷ್ಟದ ಸಮೀಕ್ಷೆ ನಡೆಸಲು ಆದೇಶಿಸಬೇಕು. ಜತೆಗೆ ರೈತರಿಗೆ ಮಧ್ಯಂತರ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ಶಿರೋಮಣಿ ಅಕಾಲಿದಳ ಒತ್ತಾಯಿಸಿದೆ. 

ಈ ಕುರಿತು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಅವರ ಪತ್ನಿ ಹಾಗೂ ಬಟಿಂಡಾದ ಸಂಸದೆ ಹರಿಸಿಮ್ರತ್ ಕೌರ್ ಬಾದಲ್ ಪ್ರತಿಕ್ರಿಯಿಸಿ, ‘ಒಂದೇ ತಿಂಗಳಲ್ಲಿ ಎರಡು ಬಾರಿ ಮಾಲ್ವಾ ಪ್ರಾಂತ್ಯದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಬೆಳೆದು ನಿಂತ ಗೋಧಿ ಬೆಳೆ ನೆಲಕಚ್ಚಿದೆ. ಈ ಹಿಂದೆ ಬೆಳೆ ಹಾನಿ ಅನುಭವಿಸಿದ ರೈತರಿಗೆ ಈವರೆಗೂ ಯಾವುದೇ ಪರಿಹಾರವನ್ನು ಸರ್ಕಾರ ಕೊಟ್ಟಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ತಕ್ಷಣ ಬೆಳೆಹಾನಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಬೆಳೆ ಹಾನಿ ಸಮೀಕ್ಷೆಯನ್ನು ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT