ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಹಲವೆಡೆ ಭಾರಿ ಮಳೆ: ತಗ್ಗು ಪ್ರದೇಶಗಳಲ್ಲಿ ಪ್ರವಾಹ

Published 23 ಮೇ 2024, 16:13 IST
Last Updated 23 ಮೇ 2024, 16:13 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹಲವು ನಗರಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಈ ಮಧ್ಯೆ ‌ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದೇ ದಿನದಲ್ಲಿ ಸುಮಾರು 20 ಸೆ.ಮೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ಗುರುವಾರ ಮುನ್ನೆಚ್ಚರಿಕೆ ನೀಡಿದೆ.

ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ. ಗುರುವಾರ ಯಾವುದೇ ಸಾವು ಸಂಭವಿಸಿಲ್ಲ. ಪ್ರತಿ ವರ್ಷ ಮೇ ತಿಂಗಳಲ್ಲಿ ಸುರಿಯುವ ಮಳೆಗಿಂತ ಈ ಬಾರಿ ಶೇ 18ಕ್ಕಿಂತೂ ಹೆಚ್ಚಿನ ಪ್ರಮಾಣದ ಮಳೆ ಸುರಿದಿದೆ. ‘ಹಠಾತ್‌ ಆಗಿ ಪ್ರವಾಹ ಉಂಟಾಗುವ ಸ್ಥಿತಿ ಇದೆ. ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಜನರಲ್ಲಿ ಮನವಿ ಮಾಡಿದ್ದಾರೆ.

ಎರ್ನಾಕುಲಂ ಹಾಗೂ ತ್ರಿಶ್ಶೂರ್‌ ಜಿಲ್ಲೆಗಳಲ್ಲಿ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ. ಇದಕ್ಕೂ ಮೊದಲು ಇಲಾಖೆ ನೀಡಿದ್ದ ಮುನ್ನೆಚ್ಚರಿಕೆಯಲ್ಲಿ ಈ ಎರಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿತ್ತು. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಕೊಚ್ಚಿ ನಗರ ಪ್ರದೇಶದಲ್ಲಿ ಹೆಚ್ಚು ಪ್ರವಾಹ ಉಂಟಾಗಿದ್ದು, ಮನೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಹಾಗೂ ಸ್ಥಳಿಯಾಡಳಿತ ಕಸ ತೆರವು ಕಾರ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ. ಇದರಿಂದಾಗಿ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ನಗರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲು ಇದೇ ಕಾರಣ ಎನ್ನಲಾಗಿದೆ. 

ವಿಮಾನ ಹಾರಾಟದಲ್ಲಿ ವ್ಯತ್ಯಯ: ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಗಳಲ್ಲಿ ವ್ಯತ್ಯಯವಾಗಿದೆ. ಗಲ್ಫ್‌ ರಾಷ್ಟ್ರಗಳಿಂದ, ಬೆಂಗಳೂರಿನಿಂದ ಕೋಯಿಕ್ಕೋಡಿಗೆ ಬರಬೇಕಿದ್ದ ವಿಮಾನಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ. ಇಲ್ಲಿಗೆ ಬಂದಿಳಿಯಬೇಕಿದ್ದ ಕೆಲವು ವಿಮಾನಗಳು ಮಂಗಳೂರು ಹಾಗೂ ಕೊಯಮತ್ತೂರು ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ. ಇಲ್ಲಿಂದ ಇತರೆಡೆ ತೆರಳಬೇಕಿದ್ದ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ. 

ಮಳೆ: ಜನಜೀವನ ಅಸ್ತವ್ಯಸ್ತ

* ತೀವ್ರ ಮಳೆಯಿಂದ ತೊಂದರೆಗೀಡಾದ ತಿರುವನಂತಪುರ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಎರಡು ನಿರಾಶ್ರಿತ ಶಿಬಿರಗಳನ್ನು ಆರಂಭಿಸಲಾಗಿದೆ. ಆಳಪುಳ್ಳದ ಕುಟ್ಟನಾಡಿನಲ್ಲಿ ಪ್ರವಾಹ ಉಂಟಾಗಿದೆ. ಮಲಪ್ಪುರ ಹಾಗೂ ಕಾಸರಗೋಡಿನಲ್ಲಿ ಭೂಕುಸಿತವೂ ಸಂಭವಿಸಿದೆ 

* ಕೋಯಿಕ್ಕೋಡ್‌ನಲ್ಲಿನ ವೈದ್ಯಕೀಯ ಕಾಲೇಜು ಹಾಗೂ ತ್ರಿಶ್ಶೂರ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ನೀರು ನುಗ್ಗಿದೆ

* ಆಳಪುಳ್ಳದ ತೂರಾವೂರ್‌ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮೂರು ಗಂಟೆಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು. ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮಳೆಯ ಕಾರಣ ರಸ್ತೆಗಳಿಗೆ ಹಾನಿಯುಂಟಾಗಿದೆ

* ಇಡುಕ್ಕಿ ಜಿಲ್ಲೆಯಲ್ಲಿರುವ ಮಾಲಂಕರ ಆಣೆಕಟ್ಟೆಯ ನಾಲ್ಕು ದ್ವಾರಗಳನ್ನು ಮುಚ್ಚಲಾಗಿದೆ. ಮೂವಾಟ್ಟುಪುಳ ಹಾಗೂ ತೊಡುಪುಳ ನದಿತೀರದಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ

ಇಲ್ಲೇಕೆ ಹೆಚ್ಚು ಮಳೆ

ದಕ್ಷಿಣ ಕೇರಳದಲ್ಲಿ ಉಂಟಾಗಿರುವ ಸುಂಟರಗಾಳಿಯು ಅರಬ್ಬಿ ಸಮುದ್ರದ ದಕ್ಷಿಣ–ಪೂರ್ವ ಪ್ರದೇಶದಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಿದೆ. ಇದು ಭಾರಿ ಮಳೆಗೆ ಕಾರಣ ಎನ್ನಲಾಗಿದೆ. ಕೇರಳಕ್ಕೆ ಮುಂಗಾರು ಮೇ 31ರಂದು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಈಗ ಸೃಷ್ಟಿಯಾಗಿರುವ ಪರಿಸ್ಥಿತಿಯಿಂದಾಗಿ ಮುಂಗಾರು ಮಾರುತವು ಇನ್ನಷ್ಟು ಬೇಗ ಕೇರಳಕ್ಕೆ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT