ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

Published 30 ಡಿಸೆಂಬರ್ 2023, 10:59 IST
Last Updated 30 ಡಿಸೆಂಬರ್ 2023, 10:59 IST
ಅಕ್ಷರ ಗಾತ್ರ

ಜೈಪುರ: ಬಿಜೆಪಿಯ ಹಿರಿಯ ನಾಯಕ ಕಿರೋಡಿ ಲಾಲ್‌ ಮೀಣಾ, ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಸೇರಿ ಪಕ್ಷದ 22 ಶಾಸಕರು ರಾಜಸ್ಥಾನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ 17 ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಇಲ್ಲಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 22 ಮಂದಿ ಶಾಸಕರಲ್ಲಿ 12 ಶಾಸಕರು ಸಂಪುಟ ದರ್ಜೆ ಸಚಿವರಾಗಿ, ಐವರು ಶಾಸಕರು ರಾಜ್ಯ ಸಚಿವರಾಗಿ (ಸ್ವತಂತ್ರ) ಮತ್ತು ಐವರು ರಾಜ್ಯ ಸಚಿವರಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಹಿರಿಯ ಮತ್ತು ಅನುಭವಿ ನಾಯಕರಿಗೆ ಭಜನ್‌ ಲಾಲ್‌ ಶರ್ಮ ಅವರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಆರು ಅವಧಿಗೆ ಶಾಸಕರು, ಎರಡು ಅವಧಿಗೆ ಲೋಕಸಭಾ ಸಂಸದ ಮತ್ತು ಒಂದು ಅವಧಿಗೆ ರಾಜ್ಯಸಭಾ ಸಂಸದರಾಗಿದ್ದ ಕಿರೋಡಿ ಲಾಲ್‌ ಮೀಣಾ ಅವರು ಸಂಪುಟ ದರ್ಜೆ ಸಚಿವರಾಗಿದ್ದಾರೆ.

ಇವರೊಂದಿಗೆ, ನಾಲ್ಕು ಬಾರಿ ಶಾಸಕರಾಗಿರುವ ಗಜೇಂದ್ರ ಸಿಂಗ್‌ ಖಿಮ್‌ಸಾರ್‌ ಮತ್ತು ಬಾಬುಲಾಲ್‌ ಕರಾಡಿ, ಎರಡು ಅವಧಿಗೆ ಸಂಸದರಾಗಿದ್ದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಆರು ಬಾರಿ ಶಾಸಕರಾಗಿರುವ ಹಾಗೂ ರಾಜಸ್ಥಾನ ಬಿಜೆಪಿ ಘಟಕದ ಕಾರ್ಯದರ್ಶಿ ಮದನ್ ದಿಲಾವರ್‌ ಅವರು ಸಂಪುಟ ದರ್ಜೆಯಲ್ಲಿ ಸ್ಥಾನ ಪಡೆದಿರುವ ಪ್ರಮುಖ ಶಾಸಕರು.

ವಸುಂಧರಾ ರಾಜೇ ಅವರ ಆಪ್ತರಿಗೆ ಸಂಪುಟದಲ್ಲಿ ಸ್ಥಾನ ದೊರಕಿಲ್ಲ. ಮಹಿಳೆಯರ ಪೈಕಿ ಉಪಮುಖ್ಯಮಂತ್ರಿ ದಿಯಾ ಕುಮಾರಿ ಹೊರತು ಪಡಿಸಿ ಜಯಾಲ್‌ ಕ್ಷೇತ್ರದಿಂದ ಗೆದ್ದಿರುವ ಡಾ. ಮಂಜು ಬಾಗ್ಮಾರ್‌ ಮಾತ್ರ ರಾಜ್ಯ ಸಚಿವರಾಗಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಕರಣ್‌ಪುರ ಬಿಜೆಪಿ ಅಭ್ಯರ್ಥಿ ಸಂಪುಟಕ್ಕೆ ಸೇರ್ಪಡೆ

ರಾಜಸ್ಥಾನದ ಕರಣ್‌ಪುರ ವಿಧಾನಸಭೆ ಕ್ಷೇತ್ರಕ್ಕೆ ಜನವರಿ 5ರಂದು ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಸುರೇಂದ್ರ ಪಾಲ್‌ ಸಿಂಗ್‌ ಅವರನ್ನೂ ರಾಜ್ಯ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ರಾಜ್ಯ ಸಚಿವರಾಗಿ (ಸ್ವತಂತ್ರ) ಪ್ರಮಾಣ ವಚನ ಸ್ವೀಕರಿಸಿದರು.  ಈ ನಡೆಯನ್ನು ವಿರೋಧಿಸಿರುವ ಕಾಂಗ್ರೆಸ್‌ ಆಡಳಿತಾರೂಢ ಪಕ್ಷವು ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. 

‘ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಗೋವಿಂದ್‌ ಸಿಂಗ್‌ ದೋತಸ್ರ ಹೇಳಿದ್ದಾರೆ.  ಕರಣ್‌ಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃತಪಟ್ಟ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT