ಔರಂಗಾಬಾದ್: ‘ಉದ್ಯೋಗಾವಕಾಶಗಳು ಇಲ್ಲದಿರುವಾಗ ಮೀಸಲಾತಿಯು ಉದ್ಯೋಗ ಭದ್ರತೆಯನ್ನು ಒದಗಿಸುವುದಿಲ್ಲ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಅವರು ಈ ರೀತಿ ಉತ್ತರಿಸಿದ್ದಾರೆ.
‘ಮೀಸಲಾತಿ ನೀಡಲಾಗಿದೆ ಎಂದು ಊಹಿಸೋಣ. ಆದರೆ, ಉದ್ಯೋಗ ಅವಕಾಶಗಳೇ ಇಲ್ಲ. ಬ್ಯಾಂಕಿಂಗ್ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸಿವೆ. ಸರ್ಕಾರದ ನೇಮಕಾತಿ ಪ್ರಕ್ರಿಯೆಗಳೂ ನಿಂತಿವೆ. ಇನ್ನೆಲ್ಲಿವೆ ಕೆಲಸಗಳು? ಎಂದು ಪ್ರಶ್ನಿಸಿದ್ದಾರೆ.
‘ಹಿಂದುಳಿದ ವರ್ಗಗಳಿಗಿರುವ ಮೀಸಲಾತಿ ಅಂಶವು ರಾಜಕೀಯ ಹಿತಾಸಕ್ತಿಗಾಗಿ ಬಳಕೆಯಾಗುತ್ತಿರುವುದು ಪ್ರಮುಖ ಸಮಸ್ಯೆ. ನಾನು ಹಿಂದುಳಿದವ ಎಂದು ಎಲ್ಲರೂ ಹೇಳುತ್ತಾರೆ. ಬಿಹಾರ, ಉತ್ತರಪ್ರದೇಶಗಳಲ್ಲಿ ಬ್ರಾಹ್ಮಣರು ಪ್ರಬಲರಾಗಿದ್ದು, ರಾಜಕೀಯದಲ್ಲಿ ಹಿಡಿತ ಸಾಧಿಸಿದ್ದಾರೆ. ಅಲ್ಲಿ ಅವರೂ ತಾವು ಹಿಂದುಳಿದವರು ಎಂದು ಹೇಳುತ್ತಾರೆ’
‘ಹಾಗಾಗಿ ಬಡವರು ಬಡವರಾಗಿಯೇ ಇದ್ದಾರೆ. ಅವರಿಗೆ ಯಾವುದೇ ಜಾತಿ, ಮತ ಅಥವಾ ಭಾಷೆ ಇಲ್ಲ. ಧರ್ಮ ಯಾವುದಾದರೂ ಸರಿ ಎಲ್ಲಾ ಸಮುದಾಯಗಳಲ್ಲಿ, ತೊಡಲು ಬಟ್ಟೆ ಇಲ್ಲದವರು, ತಿನ್ನಲು ಆಹಾರ ಇಲ್ಲದವರದ್ದೊಂದು ವರ್ಗ ಇದ್ದೇ ಇದೆ’ಎಂದು ಅಭಿಪ್ರಾಯಪಟ್ಟಿದ್ದಾರೆ.
ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಈ ಹೋರಾಟಕ್ಕೆತುಪ್ಪಸುರಿಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೋರಾಟಗಾರರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.