ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹ: ಕಾನೂನಿನ ಮಾನ್ಯತೆ ಇಲ್ಲ ಎಂದ ಸುಪ್ರೀಂ ಕೋರ್ಟ್‌ 

Published 17 ಅಕ್ಟೋಬರ್ 2023, 7:28 IST
Last Updated 18 ಅಕ್ಟೋಬರ್ 2023, 7:31 IST
ಅಕ್ಷರ ಗಾತ್ರ

ನವದೆಹಲಿ: ಸಲಿಂಗ ವಿವಾಹಕ್ಕೆ ಸಂಸತ್ತು ಮಾತ್ರ ಮಾನ್ಯತೆಯನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ, ಮದುವೆಯು ಮೂಲಭೂತ ಹಕ್ಕು ಆಗಿರದ ಕಾರಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ

ಹಿಂಸಾಚಾರ, ಬಲಾತ್ಕಾರ ಅಥವಾ ಹಸ್ತಕ್ಷೇಪಕ್ಕೆ ಯಾವುದೇ ಆಸ್ಪದವೆಇಲ್ಲದೇ ಸಹಬಾಳ್ವೆಯ ಹಕ್ಕನ್ನು ಮಂಗಳವಾರ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌, ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ಜೋಡಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿತು.

‌ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠವು, ’ಸಲಿಂಗ ದಂಪತಿಗಳಿಗೆ ಮದುವೆಯಾಗುವ ಹಕ್ಕನ್ನು ನ್ಯಾಯಾಂಗ ಗುರುತಿಸುವುದಿಲ್ಲ ಮತ್ತು ಈ ವಿಷಯದ ಬಗ್ಗೆ ಕಾನೂನು ರೂಪಿಸುವುದು ಸಂಸತ್ತು ಅಥವಾ ರಾಜ್ಯ ಶಾಸಕಾಂಗಕ್ಕೆ ಬಿಟ್ಟದ್ದು’ ಎಂದು ತೀರ್ಪು ನೀಡಿತು.

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠವು ಮಂಗಳವಾರ ತೀರ್ಪು ಪ್ರಕಟಿಸಿತು. ಪೀಠವು 3:2ರ ಬಹುಮತದ ತೀರ್ಪು ಕೊಟ್ಟಿತು. 

ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಎಸ್‌.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್‌.ನರಸಿಂಹ ಅವರೂ ಇದ್ದರು. ವಿವಿಧ ಅರ್ಜಿಗಳ ಕುರಿತು 10 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೀಠವು, ಮೇ 11ರಂದು ತೀರ್ಪು ಕಾಯ್ದಿರಿಸಿತ್ತು.

ಸಲಿಂಗ ಜೋಡಿಗಳಿಗೆ ವಿವಾಹದ ಹಕ್ಕು ನೀಡಲು ನ್ಯಾಯಾಂಗವು ಶಾಸಕಾಂಗದ ವ್ಯಾಪ್ತಿಯೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಐವರು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದರು.

ತಮ್ಮದೇ ಲಿಂಗದವರನ್ನು ಜೋಡಿ ಮಾಡಿಕೊಳ್ಳುವ ಹಕ್ಕನ್ನು ಚಾಲ್ತಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಪರಿಗಣಿಸಿದ ಸಿಜೆಐ ಮತ್ತು ನ್ಯಾ. ಕೌಲ್ ತತ್ಪರಿಣಾಮವಾಗಿ ಸವಲತ್ತು ಪಡೆಯುವ ಅಂತಹ ಸಲಿಂಗಿ ಜೋಡಿಗಳ ಹಕ್ಕನ್ನು ಎತ್ತಿಹಿಡಿದರು. ಆದರೆ, ಇತರ ಮೂವರು ನ್ಯಾಯಮೂರ್ತಿಗಳು ಸಲಿಂಗಿ ಜೋಡಿಗಳ ಮದುವೆಗೆ ಮಾನ್ಯತೆ ನೀಡಲು ನಿರಾಕರಿಸಿದರು.

ಜತೆಗೆ, ಸಲಿಂಗ ವಿವಾಹದ ಕಾನೂನು ಮಾನ್ಯತೆಯ ಮನವಿಗಳು ನಗರ ಗಣ್ಯರ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಕೇಂದ್ರದ ನಿಲುವನ್ನು ಪೀಠವು ಟೀಕಿಸಿತು. ವಿಲಕ್ಷಣತೆಯು ನಗರ ಅಥವಾ ಗಣ್ಯ ಪರಿಕಲ್ಪನೆ ಅಥವಾ ಲಕ್ಷಣವಲ್ಲ ಎಂದು ಪೀಠ ಹೇಳಿತು.

ತೀರ್ಪು ‍ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ, ‘ನ್ಯಾಯಾಲಯವು ಕಾನೂನುಗಳನ್ನು ಮಾಡುವುದಿಲ್ಲ. ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತದೆ. ವಿಶೇಷ ವಿವಾಹ ಕಾಯ್ದೆಯಲ್ಲಿ ಸಂಸತ್ತು ಬದಲಾವಣೆ ತರಬಹುದು. ಆದರೆ, ಈ ಸಮುದಾಯ ತಮ್ಮ ಬದುಕು ಸಾಗಿಸುವಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳದ್ದು’ ಎಂದರು.

 ವಿಶೇಷ ವಿವಾಹ ಕಾಯ್ದೆ ವಿಷಯವನ್ನು ಸಂಸತ್ತು ನಿರ್ಧರಿಸಬೇಕು. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್‌ 4 ಅನ್ನು ರದ್ದುಪಡಿಸಿದರೆ ಪ್ರಗತಿಪರ ಶಾಸನದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುವ ಅಪಾಯವೂ ಇದೆ. ಇದು ದೇಶವನ್ನು ಸ್ವಾತಂತ್ರ್ಯಪೂರ್ವ ಯುಗಕ್ಕೆ ಕೊಂಡೊಯ್ಯಲಿದೆ. ಭಾರತೀಯ ಉತ್ತರಾಧಿಕಾರ ಕಾಯ್ದೆ ಅಥವಾ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಒಮ್ಮೆ ಗಮನಿಸಿದರೆ ಈ ಪ್ರಕರಣವು ಶಾಸಕಾಂಗದ ವ್ಯಾಪ್ತಿಗೆ ಸೇರುತ್ತದೆ ಎಂಬುದು ಸ್ಪಷ್ಟ’ ಎಂದು ಹೇಳಿದರು.

‘ವ್ಯಕ್ತಿಯ ಲಿಂಗವು ಅವರ ಲೈಂಗಿಕತೆಗೆ ಸಮನಾದುದಲ್ಲ. ಸಂಗಾತಿಯನ್ನು ಆಯ್ಕೆ ಮಾಡುವ ವಿಷಯವು ಸಂವಿಧಾನದ 21ನೇ ವಿಧಿಯಡಿ ಒಬ್ಬರ ಬದುಕು ಹಾಗೂ ಸ್ವಾತಂತ್ರ್ಯದ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ತಮ್ಮ ಬಾಳ ಸಂಗಾತಿಯ ಆಯ್ಕೆ ಹಾಗೂ ಅದನ್ನು ದೃಢಪಡಿಸುವುದನ್ನು ಒಳಗೊಂಡಿದೆ. ಇದನ್ನು ಗುರುತಿಸದಿರುವುದೇ ತಾರತಮ್ಯ’ ಎಂದು ಅಭಿಪ್ರಾಯಪಟ್ಟರು.

ಈ ಸಮುದಾಯದ ಜನರ ಹಕ್ಕುಗಳನ್ನು ರಕ್ಷಿಸುವ ಸಂಬಂಧ ಕೇಂದ್ರ ಸರ್ಕಾರವು ಸಮಿತಿ ರಚಿಸುವ ಕುರಿತು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿರುವುದನ್ನು ದಾಖಲಿಸಿಕೊಳ್ಳಲಾಗಿದೆ ಎಂದೂ ಸಿಜೆಐ ಹೇಳಿದರು.

ನ್ಯಾಯಮೂರ್ತಿ ರವೀಂದ್ರ ಭಟ್‌, ‘ಅಸಹಜ ಸಮುದಾಯದ ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಚೌಕಟ್ಟು ರೂಪಿಸದೆ, ಅದಕ್ಕೆ ಅನುಮತಿ ನೀಡಲಾಗುವುದಿಲ್ಲ’ ಎಂದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎ.ಎಂ.ಸಿಂಘ್ವಿ, ರಾಜು ರಾಮಚಂದ್ರನ್‌, ಕೆ.ವಿ.ವಿಶ್ವನಾಥನ್‌, ಆನಂದ್ ಗ್ರೋವರ್, ಸೌರಬ್ ಕೃಪಾಲ್‌ ವಾದ ಮಂಡಿಸಿದ್ದರು.

‘ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು. ಪೂರಕವಾಗಿ 1954ರ ವಿಶೇಷ ವಿವಾಹ ಕಾಯ್ದೆಯ (ಎಸ್‌ಎಂಎ) ನಿಬಂಧನೆಗಳನ್ನು ಮರು ವ್ಯಾಖ್ಯಾನಿಸಬೇಕು’ ಎಂದು ಅರ್ಜಿದಾರರು ಅರ್ಜಿಯಲ್ಲಿ ಮನವಿ ಮಾಡಿದ್ದರು.

‘ಕಾಯ್ದೆಯ ಸೆಕ್ಷನ್‌ 4 (ಸಿ)ರಡಿ ‘ಪುರುಷ‘ ಮತ್ತು ‘ಮಹಿಳೆ’ ವಿವಾಹಕ್ಕಷ್ಟೇ ಕಾನೂನು ಮಾನ್ಯತೆ ನೀಡಲಾಗುತ್ತದೆ. ಈ ಮೂಲಕ ಸಲಿಂಗ ವಿವಾಹದ ಜೋಡಿಗೆ ಪಕ್ಷಪಾತ ಆಗುತ್ತಿದ್ದು, ಅವರಿಗೆ ವಿವಾಹದ ಅನುಕೂಲಗಳಾದ ದತ್ತು, ಬಾಡಿಗೆ ತಾಯ್ತನ, ಉದ್ಯೋಗಾವಕಾಶ, ನಿವೃತ್ತಿ ಸೌಲಭ್ಯದ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ’ ಎಂದಿದ್ದರು.

‘ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದಿರುವುದು ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕುಗಳ ನಿರಾಕರಣೆಯೂ ಆಗಿದೆ. ಈ ಕಾರಣದಿಂದ ಸೆಕ್ಷನ್‌ 4(ಸಿ) ಅಸಾಂವಿಧಾನಿಕ ಎಂದು ಘೋಷಿಸಬೇಕು’ ಎಂದೂ ಅರ್ಜಿದಾರರು ಕೋರಿದ್ದರು. 

‘ಲಿಂಗತ್ವ ಅಲ್ಪಸಂಖ್ಯಾತರ ಪರ ಕಾಳಜಿ’

ಬಹುಮತದ ದೃಷ್ಟಿಕೋನದಿಂದ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದಿದ್ದರೂ, ಲಿಂಗತ್ವ ಅಲ್ಪಸಂಖ್ಯಾತರು ಭಿನ್ನಲಿಂಗೀಯ ವ್ಯಕ್ತಿಗಳನ್ನು ಮದುವೆಯಾಗುವ ಹಕ್ಕನ್ನು ಸುಪ್ರೀಂ ಕೋರ್ಟ್ ಮಂಗಳವಾರ ಗುರುತಿಸಿದೆ.

ಡಿ.ವೈ. ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು, ‘ಭಿನ್ನಲಿಂಗೀಯ ಸಂಬಂಧದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ’ ಎಂದು ಹೇಳಿತು. 

‘ಪುರುಷ ಅಥವಾ ಮಹಿಳೆಯೆಂದು ಗುರುತಿಸಿಕೊಂಡಿರುವ ವ್ಯಕ್ತಿಗಳು ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಮದುವೆಯಾಗಲು ಹಕ್ಕು ಹೊಂದಿರುತ್ತಾರೆ; ಸಂವಿಧಾನದ ಅಡಿಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯ ವನ್ನು ಈ ಸಂಬಂಧ ಸಬಲಗೊಳಿಸಲು ಸರ್ಕಾರಗಳು ಪ್ರಯತ್ನಿಸಬೇಕು. ಮದುವೆ ಆಗುವುದನ್ನು ಲಿಂಗದ ಆಧಾರ ಮೇಲೆ ನಿರ್ಬಂಧಿಸುವುದು ತರವಲ್ಲ. ಹಾಗೆ ಮಾಡುವುದು ಸಂವಿಧಾನದ ಪರಿಚ್ಛೇದ 15ರ ಉಲ್ಲಂಘನೆ. ಹೀಗಾಗಿ, ಯಾವುದೇ ಲಿಂಗತ್ವದ ಅಸ್ಮಿತೆ ಹಾಗೂ ಲೈಂಗಿಕ ಮನೋಧರ್ಮ ಹೊಂದಿದ್ದರೂ ಎಲ್ಲರಿಗೂ ಈ ಸ್ವಾತಂತ್ರ್ಯದ ಅವಕಾಶವಿದೆ’ ಎಂದು ಸಿಜೆಐ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಎಸ್‌ಎಸ್‌, ವಿಎಚ್‌ಪಿ ಸ್ವಾಗತ

ಸುಪ್ರೀಂ ಕೋರ್ಟ್‌ನ ತೀರ್ಪನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹಾಗೂ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸ್ವಾಗತಿಸಿವೆ.

‘ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮವನ್ನು ಅನುಸರಿಸುವವರು ಸೇರಿ ಎಲ್ಲ ವರ್ಗದವರ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿ, ಸಲಿಂಗ ವಿವಾಹವು ಕಾನೂನು ಮಾನ್ಯತೆ ಪಡೆಯಲು ಅರ್ಹವಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು ನಮಗೆ ಸಮಾಧಾನ ಉಂಟು ಮಾಡಿದೆ. ಇದು ಮೂಲಭೂತ ಹಕ್ಕು ಕೂಡ ಅಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಮಗು ದತ್ತು ಪಡೆಯಲು ಸಲಿಂಗಿ ಜೋಡಿಗಳಿಗೆ ಅವಕಾಶ ನೀಡದಿರುವುದು ಕೂಡ ಉತ್ತಮ ನಡೆ ಎಂದು ವಿಎಚ್‌ಪಿ ಅಭಿಪ್ರಾಯಪಟ್ಟಿದೆ.

‘ತೀರ್ಪು ಸ್ವಾಗತಾರ್ಹ. ನಮ್ಮ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯು ಇದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಗಂಭೀರವಾಗಿ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

ನಾಗರಿಕರ ಹಕ್ಕುಗಳ ರಕ್ಷಣೆ: ಕಾಂಗ್ರೆಸ್‌

ಸಲಿಂಗ ವಿವಾಹ ಮತ್ತು ಸಂಬಂಧಿತ ವಿಷಯಗಳ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ನಂತರ ವಿವರವಾದ ಪ್ರತಿಕ್ರಿಯೆ ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

‘ನಮ್ಮ ಎಲ್ಲಾ ನಾಗರಿಕರ ಸ್ವಾತಂತ್ರ್ಯಗಳು, ಆಯ್ಕೆಗಳು ಮತ್ತು ಹಕ್ಕುಗಳನ್ನು ರಕ್ಷಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂತಿದೆ. ನಾವು ಒಳಗೊಳ್ಳುವಿಕೆಯ ಪಕ್ಷವಾಗಿ ನ್ಯಾಯಾಂಗ, ಸಾಮಾಜಿಕ ಮತ್ತು ರಾಜಕೀಯ - ತಾರತಮ್ಯರಹಿತ ಪ್ರಕ್ರಿಯೆಗಳ ಕುರಿತು ದೃಢವಾದ ನಂಬಿಕೆ ಹೊಂದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ದತ್ತು: ಸಲಿಂಗ ಜೋಡಿಗೆ ಅವಕಾಶ ಇಲ್ಲ’

ಅವಿವಾಹಿತ ಮತ್ತು ವಿಲಕ್ಷಣ ದಂಪತಿಗಳು ಮಕ್ಕಳನ್ನು ದತ್ತು ಪಡೆಯುವುದನ್ನು ನಿಷೇಧಿಸುವ ದತ್ತು ನಿಯಮಾವಳಿಯೊಂದನ್ನು ಸಂವಿಧಾನ ಪೀಠವು 3:2ರ ಬಹುಮತದಿಂದ ಎತ್ತಿ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅವರು ತಮ್ಮ ಎರಡು ಪ್ರತ್ಯೇಕ ತೀರ್ಪುಗಳಲ್ಲಿ, ‘ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರ) ಮಾರ್ಗಸೂಚಿಯೊಂದರಲ್ಲಿ ಅವಿವಾಹಿತ ಮತ್ತು ವಿಲಕ್ಷಣ ದಂಪತಿಗಳು ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೆ, ಇದು ಅಸಂವಿಧಾನಿಕ ಮತ್ತು ಕಾನೂನುಬಾಹಿರವಾಗಿದೆ’ ಎಂದು ಅಭಿಪ್ರಾಯ‍ಪಟ್ಟರು. 

ಪ್ರಾಧಿಕಾರದ 5(3) ನಿಯಮವು ‘ಸಂಬಂಧಿ ಅಥವಾ ಮಲ-ಪೋಷಕ ದತ್ತು ಸ್ವೀಕಾರದ ಪ್ರಕರಣಗಳನ್ನು ಹೊರತುಪಡಿಸಿ ದಂಪತಿಗಳು ಕನಿಷ್ಠ ಎರಡು ವರ್ಷಗಳ ಸ್ಥಿರ ವೈವಾಹಿಕ ಸಂಬಂಧವನ್ನು ಹೊಂದಿರದ ಹೊರತು ಯಾವುದೇ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ’ ಎಂದು ಹೇಳುತ್ತದೆ. 

‘ವಿವಾಹಿತ ಭಿನ್ನಲಿಂಗೀಯ ದಂಪತಿಗಳು ಮಾತ್ರ ಮಗುವಿಗೆ ಸ್ಥಿರತೆಯನ್ನು ಒದಗಿಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ’ ಎಂದು ತೀರ್ಪು ಪ್ರಕಟಿಸುವಾಗ ಸಿಜೆಐ ಹೇಳಿದರು.

‘ವಿಭಿನ್ನಲಿಂಗಿ ದಂಪತಿಗಳು ಮಾತ್ರ ಉತ್ತಮ ಪೋಷಕರಾಗಬಹುದು ಎಂದು ಕಾನೂನು ಊಹಿಸಲು ಸಾಧ್ಯವಿಲ್ಲ. ಇದು ತಾರತಮ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ದತ್ತು ನಿಯಮಗಳು ಸಂವಿಧಾನದ
ಉಲ್ಲಂಘನೆಯಾಗಿದೆ’ ಎಂದು ಸಿಜೆಐ ಹೇಳಿದರು.

ಇದಕ್ಕೆ ನ್ಯಾಯಮೂರ್ತಿ ಭಟ್, ನ್ಯಾಯಮೂರ್ತಿ ಕೊಹ್ಲಿ ಮತ್ತು ನ್ಯಾಯಮೂರ್ತಿ ನರಸಿಂಹ ಅವರು ಸಹಮತ ವ್ಯಕ್ತಪಡಿಸಲಿಲ್ಲ. ಅವರು ದತ್ತು ಪ್ರಾಧಿಕಾರದ ನಿಯಮಗಳನ್ನು ಎತ್ತಿಹಿಡಿದರು.

ಸಲಿಂಗ ವಿವಾಹ– ಹೋರಾಟದ ಹಾದಿ

 • 2018ರ ಸೆಪ್ಟೆಂಬರ್ 6: ಐತಿಹಾಸಿಕ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠ, ‘ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಅನೈಸರ್ಗಿಕ ಲೈಂಗಿಕತೆ ಅಪರಾಧ’ ಎಂದು ಹೇಳಿದ್ದ 158 ವರ್ಷಗಳ ಹಳೆಯದಾದ, ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಲಾಗಿತ್ತು. ಸಲಿಂಗಕಾಮವು ಅಪರಾಧವಲ್ಲ ಎಂದು ಹೇಳಿತ್ತು. 

 • 2022ರ ನವೆಂಬರ್ 25: ಸಲಿಂಗಿ ದಂಪತಿಗಳು ಸುಪ್ರೀಂ ಕೋರ್ಟ್‌ ಮೊರೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು. ಪೂರಕವಾಗಿ 1954ರ ವಿಶೇಷ ವಿವಾಹ ಕಾಯ್ದೆಯ (ಎಸ್‌ಎಂಎ) ನಿಬಂಧನೆಗಳನ್ನು ಮರು ವ್ಯಾಖ್ಯಾನಿಸಬೇಕು ಎಂಬ ಮನವಿ.

 • ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ.

 • 2023ರ ಜನವರಿ 6: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ವಿವಿಧ ಹೈಕೋರ್ಟ್‌ಗಳಿಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಪೀಠ ನಿರ್ದೇಶನ. ಈ ಕುರಿತು 21 ಅರ್ಜಿಗಳು ಸಲ್ಲಿಕೆಯಾಗಿದ್ದವು.

 • ಮಾರ್ಚ್ 12: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ಕೇಂದ್ರ ವಿರೋಧ.

 • ಮಾರ್ಚ್ 13: ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌ ಪೀಠ. 

 • ಏಪ್ರಿಲ್ 15: ಐವರು ನ್ಯಾಯಮೂರ್ತಿಗಳ ಪೀಠ ರಚನೆಗೆ ಮುಖ್ಯ ನ್ಯಾಯಮೂರ್ತಿ ಸೂಚನೆ.

 • ಏಪ್ರಿಲ್ 18: ವಾದವನ್ನು ಆಲಿಸಲು ಪ್ರಾರಂಭಿಸಿದ ಐವರು ನ್ಯಾಯಮೂರ್ತಿಗಳ ಪೀಠ

 • ಮೇ 11: ತೀರ್ಪು ಕಾಯ್ದಿರಿಸಿದ ಪೀಠ
  ಅಕ್ಟೋಬರ್ 17: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಪೀಠ ನಿರಾಕರಣೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT