ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ಸಲ್ಲಿಕೆಗೆ ನಿಯಮ ರೂಪಿಸಿ: ಸಿಬಲ್

ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳದ ‘ಸುಪ್ರೀಂ’
Published 3 ಫೆಬ್ರುವರಿ 2024, 15:30 IST
Last Updated 3 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಬೇಕಿತ್ತು ಎಂದು ಹೇಳಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ಜನರು ಸುಪ್ರೀಂ ಕೋರ್ಟ್‌ ಮೊರೆಹೋಗಬೇಕಿರುವುದು ಯಾವಾಗ ಎಂಬ ಬಗ್ಗೆ ನಿಯಮವನ್ನು ರೂಪಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಯಾರೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಯಸುತ್ತಿಲ್ಲ. ಕೇಂದ್ರಕ್ಕೆ ‘ಡಬಲ್ ಎಂಜಿನ್’ ಸರ್ಕಾರ ಮಾತ್ರವೇ ಬೇಕಾಗಿದೆ. ಹೀಗಾಗಿ ಸೊರೇನ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಸಿಬಲ್ ಆರೋಪಿಸಿದರು.

ತಮ್ಮನ್ನು ಬಂಧಿಸಿದ ಇ.ಡಿ. ಕ್ರಮ ಪ್ರಶ್ನಿಸಿ ಸೊರೇನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಂಧನದ ವಿಚಾರವಾಗಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ ಮೊರೆಹೋಗುವಂತೆ ಶುಕ್ರವಾರ ಸೂಚಿಸಿತ್ತು. ಸೊರೇನ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂ.ಎಂ. ಸುಂದರೇಶ್, ಬೇಲಾ ಎಂ. ತ್ರಿವೇದಿ ಅವರು ಇದ್ದ ಪೀಠದ ಎದುರು ವಿಚಾರಣೆಗೆ ಬಂದಿತ್ತು. ವಕೀಲರಾದ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರು ಸೊರೇನ್ ‍ಪರವಾಗಿ ಹಾಜರಾಗಿದ್ದರು.

‘ನಾವು ಯಾವ ಪ್ರಕರಣಗಳಲ್ಲಿ ಇಲ್ಲಿಗೆ (ಸುಪ್ರೀಂ ಕೋರ್ಟ್‌ಗೆ) ಬರಬೇಕು, ಯಾವ ಪ್ರಕರಣದಲ್ಲಿ ಬರಬಾರದು ಎಂಬುದನ್ನು ಕೋರ್ಟ್‌ ನಮಗೆ ಹೇಳಬೇಕು. ನಮ್ಮ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ತೆಗೆದುಕೊಳ್ಳುತ್ತದೆಯೇ ಇಲ್ಲವೇ ಎಂಬುದು ನಮಗೆ ಗೊತ್ತಿಲ್ಲ; ಆದರೆ ನಮಗೆ ಇತಿಹಾಸ ಗೊತ್ತಿದೆ’ ಎಂದು ಸಿಬಲ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ ಸಂದರ್ಭಗಳಲ್ಲಿ ಪ್ರಜೆಗಳು ಸುಪ್ರೀಂ ಕೋರ್ಟ್‌ ಮೊರೆಹೋಗಲು ಅವಕಾಶ ಇದೆ ಎಂದು ಸಂವಿಧಾನದ 32ನೆಯ ವಿಧಿ ಹೇಳುತ್ತದೆ. ‘ಹಲವು ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ, ಅರ್ಜಿದಾರರಿಗೆ ಈ ವಿಧಿಯ ಅಡಿಯಲ್ಲಿ ನ್ಯಾಯ ಒದಗಿಸಿದೆ’ ಎಂದು ಸಿಬಲ್ ಅವರು ಹೇಳಿದರು.

‘ದೇಶದಲ್ಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿದ ಇಂತಹ ನಿದರ್ಶನಗಳು ಇಲ್ಲವೇ ಇಲ್ಲ ಎಂಬುದು ನನ್ನ ಅನಿಸಿಕೆ. ಸಂವಿಧಾನದ 32ನೆಯ ವಿಧಿಯ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೂಡ ನಡೆಯಲಿಲ್ಲ. ಸುಪ್ರೀಂ ಕೋರ್ಟ್ ನಮ್ಮ ಅರ್ಜಿಯ ವಿಚಾರಣೆ ನಡೆಸಿ, ನಂತರ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಿದ್ದರೆ ಪರಿಸ್ಥಿತಿ ಬೇರೆಯದಾಗಿರುತ್ತಿತ್ತು. ಆದರೆ ನಮ್ಮ ಅರ್ಜಿಯನ್ನು ವಿಚಾರಣೆಗೇ ಎತ್ತಿಕೊಳ್ಳಲಿಲ್ಲ’ ಎಂದು ಅವರು ಹೇಳಿದರು.

ಕೇಂದ್ರಕ್ಕೆ ವಿರೋಧ ಪಕ್ಷಗಳು ಬೇಕಿಲ್ಲ, ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಮುಖ್ಯಮಂತ್ರಿಗಳು ಬೇಕಿಲ್ಲ ಎಂದು ಸಿಬಲ್ ಹೇಳಿದರು. ‘ಇದನ್ನು ಅವರು ಕೇಜ್ರಿವಾಲ್‌ (ದೆಹಲಿ ಮುಖ್ಯಮಂತ್ರಿ) ಅವರಿಗೂ ಮಾಡುತ್ತಾರೆ’ ಎಂದು ಎಚ್ಚರಿಸಿದರು.

‘ಇನ್ನು ಸೊರೇನ್ ವಿರುದ್ಧ ಹತ್ತು ಸುಳ್ಳು ಪ್ರಕರಣ ದಾಖಲಿಸಲಾಗುತ್ತದೆ. ಆಗ ಸೊರೇನ್ ಅವರಿಗೆ ಜೈಲಿನಿಂದ ಹೊರಬರಲು ಆಗುವುದಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಯೋಜನ ಆಗುತ್ತದೆ’ ಎಂದು ಸಿಬಲ್ ಹೇಳಿದರು. ‘ನಮ್ಮ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಆಲಿಸುವುದಿಲ್ಲ ಎಂದಾದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

ಕಣ್ಗಾವಲಿನಲ್ಲಿ ಶಾಸಕರು

ಹೈದರಾಬಾದ್‌ (ಪಿಟಿಐ): ಎಐಸಿಸಿ ಕಾರ್ಯದರ್ಶಿ ಹಾಗೂ ತೆಲಂಗಾಣದ ಕಾಂಗ್ರೆಸ್‌ ಉಸ್ತುವಾರಿ ದೀಪ ದಾಸ್ ಮುನ್ಶಿ ಅವರ ಕಣ್ಗಾವಲಿನಲ್ಲಿ ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಸರ್ಕಾರದ 40 ಶಾಸಕರನ್ನು ಶಾಮಿರ್‌ಪೇಟೆಯ ‘ಲಿಯೋನಿಯಾ ಹಾಲಿಸ್ಟಿಕ್‌ ಡೆಸ್ಟಿನೇಷನ್‌’ನಲ್ಲಿ ಇರಿಸಲಾಗಿದೆ. ಒಬ್ಬೊಬ್ಬರಿಗೂ ಪ್ರತ್ಯೇಕ ಊಟದ ವ್ಯವಸ್ಥೆ, ಕೋಣೆಗಳ ಎದುರು ಒಬ್ಬೊಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT