ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಯ್ಡಾ ಪ್ರಾಧಿಕಾರ ಮುಖ್ಯ ಎಂಜಿನಿಯರ್‌ಗೆ ಬಂಧನದಿಂದ ರಕ್ಷಣೆ ನೀಡಿದ 'ಸುಪ್ರೀಂ'

Published 16 ಮೇ 2024, 14:46 IST
Last Updated 16 ಮೇ 2024, 14:46 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ನೋಯ್ಡಾ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಯಾದವ್‌ ಸಿಂಗ್‌ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಸಿಬಿಐಗೆ ಗುರುವಾರ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಈಗಾಗಲೇ ಪೂರಕ ಆರೋಪ ಪಟ್ಟಿ ಸಲ್ಲಿಸಿದ್ದು, ಆರೋಪಿ ವಿರುದ್ದ ಜಾಮೀನು ನೀಡಬಹುದಾದ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಯಾದವ್‌ ಸಿಂಗ್ ಪರ ಹಾಜರಿದ್ದ ಹಿರಿಯ ವಕೀಲ ಎನ್‌.ಕೆ.ಕೌಲ್‌ ವಾದವನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್‌ ಹಾಗೂ ಪ್ರಶಾಂತಕುಮಾರ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

2011ರ ಡಿಸೆಂಬರ್‌ನಲ್ಲಿ ₹954 ಕೋಟಿ ಮೊತ್ತದ 1,280 ನಿರ್ವಹಣಾ ಗುತ್ತಿಗೆಗಳನ್ನು ಎಂಟೇ ದಿನಗಳಲ್ಲಿ ಹಂಚಿಕೆ ಮಾಡಿರುವುದಕ್ಕೆ ಸಂಬಂಧಿಸಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪವನ್ನು ಯಾದವ್‌ ಸಿಂಗ್‌ ಎದುರಿಸುತ್ತಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿ ನನ್ನ ಕಕ್ಷಿದಾರ ಯಾದವ್‌ ಸಿಂಗ್‌ ಈಗಾಗಲೇ ಮೂರು ವರ್ಷ ಸೆರೆವಾಸ ಅನುಭವಿಸಿದ್ದಾರೆ. ಸಿಬಿಐ ಪೂರಕ ಆರೋಪಪಟ್ಟಿ ಸಲ್ಲಿಸಿರುವ ಕಾರಣ, ಸಿಂಗ್‌ ಈಗ ಮತ್ತೆ ಬಂಧನದ ಭೀತಿ ಎದುರಿಸುತ್ತಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು ಎಂದು ಕೌಲ್‌ ಹೇಳಿದ್ದಾರೆ.

‘ಸಿಂಗ್‌ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು’ ಎಂಬುದಾಗಿ ಸೂಚಿಸಿದ ನ್ಯಾಯಪೀಠ, ಸಿಂಗ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ನೋಟಿಸ್‌ ನೀಡಿದೆ. ನಾಲ್ಕು ವಾರಗಳ ನಂತರ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT