ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋಕ್ಸಿ ದಂಪತಿ ವಿರುದ್ಧದ ಎಫ್‌ಐಆರ್‌ ರದ್ದತಿ ಆದೇಶ ವಜಾ

ತನಿಖೆ ಮುಂದುವರೆಸಲು ಗುಜರಾತ್‌ ಪೊಲೀಸರಿಗೆ ನಿರ್ದೇಶನ
Published 6 ಡಿಸೆಂಬರ್ 2023, 16:25 IST
Last Updated 6 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ನವದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್‌ ಚೋಕ್ಸಿ ಮತ್ತು ಅವರ ಪತ್ನಿ ಪ್ರೀತಿ ಚೋಕ್ಸಿ ಅವರ ವಿರುದ್ಧ ಕ್ರಿಮಿನಲ್‌ ವಿಶ್ವಾಸದ್ರೋಹ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಿ ಗುಜರಾತ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ. 2013ರಲ್ಲಿ ಗೀತಾಂಜಲಿ ಜ್ಯೂವೆಲ್ಲರಿ ರಿಟೇಲ್‌ ಲಿಮಿಟೆಡ್‌ ಜೊತೆ ಮಾಡಿಕೊಂಡಿದ್ದ ಒಪ್ಪಂದದಂತೆ 24 ಕ್ಯಾರಟ್‌ ಚಿನ್ನದ ಗಟ್ಟಿಗಳನ್ನು ಹಿಂದಿರುಗಿಸಲು ವಿಫಲವಾದ ಪ್ರಕರಣದಲ್ಲಿ ಗುಜರಾತ್‌ನ ಗಾಂಧಿನಗರದ ಪೊಲೀಸ್‌ ಠಾಣೆಯೊಂದರಲ್ಲಿ 2015ರ ಜನವರಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಮುಂದುವರೆಸುವಂತೆ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ನ್ಯಾಯಪೀಠವು ಗುಜರಾತ್ ಪೊಲೀಸರಿಗೆ ನಿರ್ದೇಶಿಸಿದೆ. ಎಫ್‌ಐಆರ್‌ ರದ್ದುಪಡಿಸುವ ಮೊದಲು ಪ್ರಕರಣದ ವಿಚಾರವಾಗಿ ಹೈಕೋರ್ಟ್‌ ಕೂಲಂಕಷವಾಗಿ ಪರಿಶೀಲನೆ ನಡೆಸಿಲ್ಲ ಮತ್ತು ಅಂತಿಮ ನಿಲುವನ್ನು ದಾಖಲಿಸಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ತನಿಖಾಧಿಕಾರಿಗಳು 17 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಅಪರಾಧ ಪ್ರಕ್ರಿಯಾ ಸಂಹಿತೆ– 1973ರ ಸೆಕ್ಷನ್‌ 161 ಮತ್ತು ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲಿಸಿರುವುದಾಗಿ 2016ರ ಸೆಪ್ಟೆಂಬರ್‌ 14ರಂದು ಹೈಕೋರ್ಟ್‌ ನೀಡಿರುವ ಆದೇಶದಲ್ಲಿ ಹೇಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.  ಹೈಕೋರ್ಟ್‌ ಆದೇಶದಿಂದ ಪ್ರಭಾವಿತರಾಗದೇ ತನಿಖೆಯನ್ನು ಮುಂದುವರೆಸಬೇಕು ಎಂದು ಪೊಲೀಸರಿಗೆ ನ್ಯಾಯಪೀಠ ಸೂಚಿಸಿದೆ. ಜೊತೆಗೆ, ಭಾರತೀಯ ದಂಡಸಂಹಿತೆಯ 406, 420, 464, 465 ಮತ್ತಿತರ ಸೆಕ್ಷನ್‌ಗಳನ್ನು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ನೀಡಿರುವ ಆದೇಶಗಳನ್ನು ತನಿಖೆ ನಡೆಸುವ ವೇಳೆ ತನಿಖಾಧಿಕಾರಿ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದೆ. ಪ್ರಕರಣದ ಎಲ್ಲಾ ಆರೋಪಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಅರ್ಜಿದಾರ ದಿಗ್ವಿಜಯಸಿಂಹ ಹಿಮಂತ್‌ಸಿಂಹ ಜಡೇಜಾ ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT