ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಪಿ ಪ್ರಕರಣ: ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

Published 16 ಫೆಬ್ರುವರಿ 2024, 11:22 IST
Last Updated 16 ಫೆಬ್ರುವರಿ 2024, 11:22 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎಂಬ ಚುನಾವಣಾ ಆಯೋಗದ ಆದೇಶದ ವಿರುದ್ಧ ಹಿರಿಯ ಮುಖಂಡ ಶರದ್ ಪವಾರ್ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ನೀಡಿದೆ. 

ಶರದ್ ಪವಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ‘ನಮ್ಮ ಪಕ್ಷಕ್ಕೆ ಪರ್ಯಾಯವಾಗಿ ಯಾವುದೇ ಚಿಹ್ನೆ ನೀಡಿಲ್ಲ. ಇದರಿಂದಾಗಿ ನಮ್ಮ ಪರಿಸ್ಥಿತಿಯು ಉದ್ಧವ್ ಠಾಕ್ರೆ ಅವರ ಪಕ್ಷಕ್ಕಿಂತಲೂ ಶೋಚನೀಯವಾಗಿದೆ. ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಇತ್ತೀಚಿನ ಆದೇಶದ ಹಿನ್ನೆಲೆಯಲ್ಲಿ ತ್ವರಿತ ವಿಚಾರಣೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಕೋರಿದರು. 

ಈ ವೇಳೆ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ‘ಈ ಕುರಿತು ಪರಿಶೀಲಿಸಲಾಗುವುದು’ ಎಂದು ಹೇಳಿದರು. 

ಇದರ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯೆಟ್ ಅರ್ಜಿ ಸಲ್ಲಿಸಿರುವ ಅಜಿತ್ ಪವಾರ್ ಬಣವು, ‘ಶರದ್ ಪವಾರ್ ಗುಂಪಿನ ಪರ ಏಕಪಕ್ಷೀಯವಾಗಿ ಯಾವುದೇ ಆದೇಶ ನೀಡಬಾರದು’ ಎಂದು ಮನವಿ ಮಾಡಿದೆ. 

ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಪರಿಗಣಿಸಿದ್ದ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ‘ಶಾಸಕರನ್ನು ಅನರ್ಹಗೊಳಿಸಬೇಕೆಂದು ಉಭಯ ಬಣಗಳು ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪಕ್ಷದ ಸಂಸ್ಥಾಪಕ ಶರದ್ ಪವಾರ್ ಅವರನ್ನು ಪ್ರಶ್ನಿಸುವ ಅಥವಾ ಅವರ ಇಚ್ಛೆಯನ್ನು ವಿರೋಧಿಸುವ ಪ್ರಕ್ರಿಯೆಗಳು ಪಕ್ಷಾಂತರ ಎನಿಸಿಕೊಳ್ಳುವುದಿಲ್ಲ. ಅವು ಕೇವಲ ಭಿನ್ನಾಭಿಪ್ರಾಯಗಳಷ್ಟೇ’ ಎಂದು ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT