ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ರಜೆ ಅಂತ್ಯ: ‘ಸುಪ್ರೀಂ’ನಲ್ಲಿ ಇಂದಿನಿಂದ ಪೂರ್ಣ ಕಲಾಪ

Published 2 ಜುಲೈ 2023, 16:26 IST
Last Updated 2 ಜುಲೈ 2023, 16:26 IST
ಅಕ್ಷರ ಗಾತ್ರ

ನವದೆಹಲಿ: 42 ದಿನಗಳ ಬೇಸಿಗೆ ವಿರಾಮದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರದಿಂದ ಎಂದಿನಂತೆ ಕಲಾಪಗಳು ಆರಂಭವಾಗಲಿವೆ.  

ಮಣಿಪುರದ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಪಾತಕಿ ಮತ್ತು ರಾಜಕಾರಣಿ ಅತೀಕ್‌ ಅಹಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಅವರ ಹತ್ಯೆಯ ವಿಚಾರಣೆಗೆ ಆಯೋಗ ರಚನೆ ಕೋರಿ ಅವರ ಸಹೋದರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ಆರಂಭವಾಗುವ ನಿರೀಕ್ಷೆ ಇದೆ. 

ಮಣಿಪುರದ ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಜನರಿಗೆ ಸೇನಾ ರಕ್ಷಣೆ ಮತ್ತು ಇವರ ಮೇಲೆ ದಾಳಿ ನಡೆಸಿದ ಕೋಮು ಗುಂಪುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಎನ್‌ಜಿಒ ಸಲ್ಲಿಸಿರುವ ಅರ್ಜಿ ಸೇರಿ ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದ ಇತರ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ನಡೆಸಲಿದೆ.

ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜುಲೈ 12ರಿಂದ ನಾಲ್ಕು ಪ್ರಕರಣಗಳ ವಿಚಾರಣೆ ಆರಂಭಿಸಲಿದೆ.  

ಬೇಸಿಗೆ ರಜೆ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಮೂವರು ಹಿರಿಯ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಅಜಯ್ ರಸ್ತೋಗಿ ಮತ್ತು ವಿ. ರಾಮಸುಬ್ರಮಣಿಯನ್ ಅವರು ಕ್ರಮವಾಗಿ ಜೂನ್ 16, ಜೂನ್ 17 ಮತ್ತು ಜೂನ್ 29ರಂದು ನಿವೃತ್ತಿಯಾಗಿದ್ದು, ಸದ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಬಲ 31ಕ್ಕೆ ಇಳಿದಿದೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಮಂಜೂರಾತಿ ಹುದ್ದೆಗಳ ಸಂಖ್ಯೆ 34.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿ ಸೇರಿ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಬೇಸಿಗೆಯಲ್ಲಿ ರಜಾ ಕಾಲದ ಹಲವು ಪೀಠಗಳು ವಿಚಾರಣೆ ನಡೆಸಿವೆ. ಇದರಲ್ಲಿ ಸುಮಾರು 700 ಪ್ರಕರಣಗಳನ್ನು ವಿಲೇವಾರಿ ಮಾಡಿವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT