ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ: ಮಳೆ ನೀರು ಬಳಸಲು ಅಧಿಕಾರಿಗಳ ಸಲಹೆ

Published 11 ಜುಲೈ 2023, 10:18 IST
Last Updated 11 ಜುಲೈ 2023, 10:18 IST
ಅಕ್ಷರ ಗಾತ್ರ

ಶಿಮ್ಲಾ: ಎತ್ತರದ ಗಿರಿಶಿಖರ, ಹಿಮ ಹೊದ್ದ ಸುಂದರ ಹಸಿರು ಗುಡ್ಡಗಳು, ಸೇಬು ತುಂಬಿದ ಮರಗಳಿಂದ ತುಂಬಿದ್ದ ಶಿಮ್ಲಾ ನಗರದಲ್ಲಿ ಈಗ ಧಾರಾಕಾರ ಮಳೆ, ಭೋರ್ಗರೆವ ನದಿ, ಕುಸಿಯುತ್ತಿರುವ ಗುಡ್ಡ, ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿಗಳೇ ಕಾಣಿಸುತ್ತವೆ.

ಸುತ್ತಲು ನೀರಿದ್ದರೂ ಕುಡಿಯುವ ನೀರಿಗೆ ಮಾತ್ರ ಹಿಮಾಚಲ ಪ್ರದೇಶದ ಶಿಮ್ಲಾ ಜನ ಪರದಾಡುತ್ತಿದ್ದಾರೆ. ಈ ಮುಂಗಾರಿನಲ್ಲಿ ಅತಿ ಹೆಚ್ಚು ಮಳೆ ಸುರಿದ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಈಗ ನಿತ್ಯ ಬಳಕೆ ನೀರಿಗೆ ಬರ ಎದುರಾಗಿದೆ. ಅಲ್ಲಿನ ನಿವಾಸಿಗಳು ಸಮುದ್ರದ ನಂಟಸ್ಥನ, ಉಪ್ಪಿಗೆ ಬಡತನ ಎದುರಿಸುವಂತಾಗಿದೆ ಎಂದು ಗೋಳಿಡುತ್ತಿದ್ದಾರೆ.

ಪರ್ವತ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಭೋರ್ಗರೆಯುತ್ತಿವೆ. ಕೆಲವೆಡೆ ವಸತಿ ಪ್ರದೇಶದತ್ತಲೂ ರಭಸದಿಂದ ನೀರು ನುಗ್ಗುತ್ತಿದೆ. ಇದರಿಂದಾಗಿ ಶಿಮ್ಲಾದಲ್ಲಿನ ಪ್ರದೇಶಗಳಿಗೆ ನೀರು ಪೂರೈಸುವ ವ್ಯವಸ್ಥೆ ಕೈಕೊಟ್ಟಿದ್ದರಿಂದಾಗಿ, ಜನರಿಗೆ ನೀರು ಸರಬರಾಜು ಸ್ಥಗಿತಗೊಂಡಿದೆ. 

ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರು, ‘ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಕೆಲವೊಮ್ಮೆ ನಳಗಳಲ್ಲಿ ನೀರು ತೊಟ್ಟಿಕ್ಕುತ್ತಿದೆ. ಆದರೆ ಆ ನೀರೂ ಕಲುಷಿತಗೊಂಡಿದೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ’ ಎಂದಿದ್ದಾರೆ.

‘ಶೌಚಾಲಯಗಳ ಬಳಕೆಗೂ ನೀರಿಲ್ಲದಂತಾಗಿದೆ. ಜನಜೀವನ ತೀವ್ರವಾಗಿ ಹದಗೆಟ್ಟಿದೆ. ಇದನ್ನು ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗಿದೆ. ಒಂದೆರೆಡು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಶುದ್ಧ ನೀರು ಪೂರೈಕೆಯಾಗುವವರೆಗೂ ಜನರ ಸಂಕಷ್ಟ ಹೇಳತೀರದಾಗಿದೆ’ ಎಂದಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಶಿಮ್ಲಾ ನಿರ್ದೇಶಕ ಸುರೇಂದರ್ ಪೌಲ್ ಅವರು ಮಳೆ ಕುರಿತು ಪ್ರತಿಕ್ರಿಯಿಸಿ, ‘ಪಶ್ಚಿಮದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಇದು ಇನ್ನೂ ಒಂದೆರಡು ದಿನ ಮುಂದುವರಿಯುವ ಸಾಧ್ಯತೆ ಇದೆ.  ಹೀಗಾಗಿ 24 ಗಂಟೆಗಳಿಗೆ ರೆಡ್ ಅಲೆರ್ಟ್‌, ನಂತರ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ನಂತರ ಮಳೆಯ ಪ್ರಮಾಣ ಇಳಿಮುಖವಾಗುವ ಸಾಧ್ಯತೆ ಇದೆ’ ಎಂದಿದ್ದಾರೆ.

ಶಿಮ್ಲಾ ಪ್ರಬಂಧನ್ ನಿಗಮ (ಎಸ್‌ಜೆಎನ್‌ಎಲ್) ಅಧಿಕಾರಿಗಳು ಮಾಹಿತಿ ನೀಡಿ, ‘ಶಿಮ್ಲಾ ನಗರಕ್ಕೆ ಪ್ರತಿನಿತ್ಯ 11.03 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಸೋಮವಾರ ಕೇವಲ 42ರಿಂದ 45 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ನೀರು ಸರಬರಾಜು ವ್ಯವಸ್ಥೆ ಸಹಜ ಸ್ಥಿತಿಗೆ ಮರಳಲು ಇನ್ನೂ 4ರಿಂದ 5 ದಿನ ಬೇಕು’ ಎಂದಿದ್ದಾರೆ.

‘ನಗರಕ್ಕೆ ಗುಮ್ಮಾ, ಗಿರಿ, ಚುರೋಟ್, ಸಿಯೋಗ್‌, ಖೈರ್ ಹಾಗೂ ಕೊಟಿ ಬ್ರಂಡಿ ಜಲಮೂಲಗಳಿಂದ ನೀರು ಪೂರೈಕೆಯಾಗುತ್ತಿದೆ. ಇವುಗಳಿಂದ ಸುಮಾರು 11 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ವಾಡಿಕೆಗಿಂತ ಶೇ 69ರಷ್ಟು ಹೆಚ್ಚು ಮಳೆಯಾಗಿದೆ. ಜುಲೈ 1ರಿಂದ ಜುಲೈ 9 ರವರೆಗೆ ದಿನಗಳಲ್ಲಿ ರಾಜ್ಯದಲ್ಲಿ 271.5 ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ 160.6 ಮಿ.ಮೀ. ಮಳೆಯಾಗಬೇಕಿತ್ತು’ ಎಂದು ಹೇಳಿದ್ದಾರೆ.

‘ಅತಿಯಾದ ಮಳೆಯಿಂದಾಗಿ ಛಾಬಾದಲ್ಲಿರುವ ಪಂಪ್‌ಸ್ಟೇಷನ್‌ಗೆ ಹಾನಿಯಾಗಿದೆ. ನೌಟಿಖಾಡ್ ಬಳಿ ಇರುವ ಪಂಪ್‌ಸ್ಟೇಷನ್‌ ಪ್ರವಾಹ ನೀರಿನಲ್ಲಿ ಮುಳುಗಿದೆ. ಇರುವ ಒಂದು ಪಂಪ್‌ನಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ನಾಗರಿಕರು ಜವಾಬ್ದಾರಿಯುತವಾಗಿ ನೀರನ್ನು ಬಳಕೆ ಮಾಡಿ. ಸಾಧ್ಯವಾದಷ್ಟು ಮಳೆ ನೀರನ್ನು ಸಂಗ್ರಹಿಸಿ ಬಳಕೆ (ಕುಡಿಯಲು ಹೊರತುಪಡಿಸಿ) ಮಾಡಿ’ ಎಂದು ಎಸ್‌ಜೆಪಿಎನ್‌ಎಲ್‌ ವಕ್ತಾರ ಸಾಹಿಲ್ ಶರ್ಮಾ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT