ನಿಂಗ್ಬೊ: ಭಾರತದ ವಿಷ್ಣು ಸರವಣನ್ ಏಷ್ಯನ್ ಕ್ರೀಡಾಕೂಟದ ಸೇಲಿಂಗ್ ಡಿಂಘಿ ಐಎಲ್‌ಸಿಎ 7 ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು.
11 ರೇಸ್‌ಗಳಿರುವ ಈ ವಿಭಾಗದಲ್ಲಿ ಸರವಣನ್ 34 ಅಂಕಗಳಿಸಿದರು. ಕೇವಲ ಒಂದು ಪಾಯಿಂಟ್ ಅಂತರದಿಂದ ಬೆಳ್ಳಿ ಪದಕ ತಪ್ಪಿಸಿಕೊಂಡರು.
ದಕ್ಷಿಣ ಕೊರಿಯಾದ ಜೀಮೈನ್ ಎಚ್‌ಎ 33 ಅಂಕಗಳೊಂದಿಗೆ ಎರಡನೇ ಸ್ಥಾನಪಡೆದರು. ಸಿಂಗಪುರದ ಜುನ್ ಹಾನ್ ರಿಯಾನ್ ಲೊ 26 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
2017ರಿಂದ ರಾಷ್ಟ್ರೀಯ ಚಾಂಪಿಯನ್ ಆಗಿರುವ ವಿಷ್ಣು 2021ರಲ್ಲಿ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಏಷ್ಯಾ ಮಟ್ಟದಲ್ಲಿ ಎರಡನೇ ಶ್ರೇಷ್ಠ ಸೇಲರ್ ಆಗಿದ್ದರು.
ವಿಷ್ಣು ಮುಂಬೈನಲ್ಲಿ ಆರ್ಮಿ ಯಾಚಿಂಗ್ ನಾಡ್‌ನಲ್ಲಿ ತಮ್ಮ ತಂದೆಯಿಂದ ಸೇಲಿಂಗ್ ತರಬೇತಿ ಪಡೆದಿದ್ದರು. ಆಗ ವಿಷ್ಣುಗೆ ಒಂಬತ್ತು ವರ್ಷವಾಗಿತ್ತು. 2019ರಲ್ಲಿ ಕ್ರೊವೇಷ್ಯಾದಲ್ಲಿ ನಡೆದ 21 ವರ್ಷದೊಳಗಿನವರ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಗಾಳಿ ಬೀಸುವಿಕೆಯ ವೇಗ ಕಡಿಮೆಯಿದ್ದ ವಾತಾವರಣದಲ್ಲಿ ನಡೆದ ಸಿಂಗಲ್ ಡಿಂಘಿ ಐಎಲ್‌ಸಿಎ –6 ಮಹಿಳೆಯರ ವಿಭಾಗದಲ್ಲಿ ನೇತ್ರಾ ಕುಮನನ್ ಕಂಚಿನ ಪದಕ ತಪ್ಪಿಸಿಕೊಂಡರು. ವಿಭಾಗದ 12ನೇ ರೇಸ್ ರದ್ದಾಯಿತು. 2018ರಲ್ಲಿಯೂ ಭಾರತದ ಸೇಲಿಂಗ್ ಪಟುಗಳು ಒಂದು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿದ್ದರು. ಈ ಬಾರಿಯೂ ಆ ದಾಖಲೆ ಸಮ ಮಾಡಿದರು.
ಮಂಗಳವಾರ ನೇಹಾ ಠಾಕೂರ್ ಬೆಳ್ಳಿ ಹಾಗೂ ಇಬಾದ್ ಅಲಿ ಕಂಚು ಜಯಿಸಿದ್ದರು.
ನೇತ್ರಾ 41 ನೆಟ್ ಪಾಯಿಂಟ್ಸ್ ಗಳಿಸಿದರು. ಸಿಂಗಪುರದ ಜಿಂಗ್ ಹುವಾ ವಿಕ್ಟೋರಿಯಾ (38) ಅವರು ಕಂಚು ಗೆದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.