ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಬೇಕು: ವಿರೋಧ ಪಕ್ಷಗಳ ಆಗ್ರಹ

ಭದ್ರತಾ ಲೋಪದ ಬಗ್ಗೆ ಗೃಹ ಸಚಿವರು ಸದನದಲ್ಲಿ ಹೇಳಿಕೆ ನೀಡಬೇಕು ಎಂಬ ಆಗ್ರಹ
Published 17 ಡಿಸೆಂಬರ್ 2023, 16:22 IST
Last Updated 17 ಡಿಸೆಂಬರ್ 2023, 16:22 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನದ ಕೊನೆಯ ವಾರದಲ್ಲಿ ವಾಗ್ವಾದ, ಗದ್ದಲ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಸಂಸತ್ತಿನಲ್ಲಿ ಡಿಸೆಂಬರ್ 13ರಂದು ಆದ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂಬ ಬೇಡಿಕೆಗೆ ಇನ್ನಷ್ಟು ಬಲ ನೀಡಲು ವಿರೋಧ ಪಕ್ಷಗಳು ಸಜ್ಜಾಗಿವೆ. ಅಧಿವೇಶನವು ಶುಕ್ರವಾರ ಕೊನೆಗೊಳ್ಳಲಿದೆ.

ಅದರಲ್ಲೂ ಮುಖ್ಯವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭದ್ರತಾ ಲೋಪದ ಬಗ್ಗೆ ಮಾತನಾಡಿರುವ ಕಾರಣ, ವಿರೋಧ ಪಕ್ಷಗಳು ಶಾ ಅವರ ಹೇಳಿಕೆಗೆ ಇನ್ನಷ್ಟು ಬಲವಾಗಿ ಆಗ್ರಹಿಸುವ ನಿರೀಕ್ಷೆ ಇದೆ.

ಮೋದಿ ಅವರು ನೀಡಿರುವ ಸಂದರ್ಶನ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು 13 ಸಂಸದರನ್ನು ಅಮಾನತು ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡು ಲೋಕಸಭಾ ಸದಸ್ಯರಿಗೆ ಬರೆದ ಪತ್ರ ಹಾಗೂ ಶಾ ಅವರು ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಡಿರುವ ಕೆಲವು ಮಾತುಗಳು ಸಂಘರ್ಷಕ್ಕೆ ಸಜ್ಜಾಗಿರುವುದರ ಸೂಚನೆ ಎಂಬಂತೆ ವಿರೋಧ ಪಕ್ಷಗಳು ಗ್ರಹಿಸಿವೆ. ಈ ಮೂವರ ಮಾತುಗಳು, ಸದನದಲ್ಲಿ ಹೇಳಿಕೆ ನೀಡುವ ಬಗ್ಗೆ ಮಾತು ಕೊಡಲು ಆಗದು ಎಂಬ ಸೂಚನೆ ನೀಡುತ್ತಿವೆ ಎಂದು ಕೂಡ ವಿರೋಧ ಪಕ್ಷಗಳು ಭಾವಿಸಿವೆ.

ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಶುಕ್ರವಾರದ ಕಲಾಪದ ಸಂದರ್ಭದಲ್ಲಿ ಎಂಥದ್ದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸಿದ್ಧ ಎಂಬ ಧೋರಣೆಯನ್ನು ತಳೆದಿದ್ದರು. ಮೈತ್ರಿಕೂಟದ ಹಿರಿಯ ಸದಸ್ಯರು ಕೂಡ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಲೋಕಸಭೆ ಪ್ರವೇಶಿಸಿದ್ದರು. 13 ಜನ ಸಂಸದರನ್ನು ಅಮಾನತು ಮಾಡಿದ್ದು ಕೂಡ ಅವರು ಭಿತ್ತಿಪತ್ರಗಳನ್ನು ಹಿಡಿದಿದ್ದಕ್ಕೆ ಹಾಗೂ ಶಾ ಅವರ ಹೇಳಿಕೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಘೋಷಣೆ ಕೂಗಿದ್ದಕ್ಕೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಭಾರತೀಯ ದಂಡ ಸಂಹಿತೆ, ಅಪರಾಧ ದಂಡಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ತರಲು ಉದ್ದೇಶಿಸಿರುವ ಮೂರು ಪ್ರತ್ಯೇಕ ಮಸೂದೆಗಳಿಗೆ ಲೋಕಸಭೆಯ ಅಂಗೀಕಾರ ಪಡೆಯಲು ಸರ್ಕಾರವು ಸೋಮವಾರ ಮುಂದಾಗುವ ನಿರೀಕ್ಷೆ ಇದೆ. ಹೀಗಾಗಿ, ಸದನದಲ್ಲಿ ವಿರೋಧ ಪಕ್ಷಗಳ ನಡುವೆ ಸಮನ್ವಯ ಯಾವ ರೀತಿಯಲ್ಲಿ ಇರಬೇಕು ಎಂಬ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ನಾಯಕರು ಸೋಮವಾರ ಬೆಳಿಗ್ಗೆ ಸಭೆ ನಡೆಸಲಿದ್ದಾರೆ. 

ಈ ಮಸೂದೆಗಳಲ್ಲಿನ ಹಲವು ಅಂಶಗಳ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ಗಂಭೀರ ತಕರಾರುಗಳನ್ನು ಎತ್ತಿವೆ. ವಿರೋಧ ಪಕ್ಷಗಳ ಕೆಲವು ಸಂಸದರನ್ನು ಸದನದಿಂದ ಅಮಾನತು ಮಾಡಿದ ಕ್ರಮವು ವಿರೋಧ ಪಕ್ಷಗಳ ಪಾಲಿಗೆ ಸರಿಕಂಡಿಲ್ಲ. ಅದರಲ್ಲೂ, ಪ್ರಮುಖರಾದ ಕೆ. ಕನಿಮೊಳಿ, ಪಿ.ಆರ್. ನಟರಾಜನ್, ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಅವರ ಅಮಾನತು ಮಾಡಲಾಗಿದೆ. ಬಿರ್ಲಾ ಅವರು ಬರೆದಿರುವ ಪತ್ರದಲ್ಲಿ ಯಾವುದೇ ವಿಷಯ ಕುರಿತು ಉತ್ತರ ಇಲ್ಲ. ಬದಲಿಗೆ, ತಮ್ಮ ಸಮರ್ಥನೆ ಇದೆ ಹಾಗೂ ಸರ್ಕಾರವನ್ನು ರಕ್ಷಿಸುವ ‍ಪ್ರಯತ್ನ ಇದೆ ಎಂದು ವಿರೋಧ ಪಕ್ಷಗಳು ಭಾವಿಸಿವೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿ ಭದ್ರತಾ ಲೋಪದ ವಿಚಾರದ ಬಗ್ಗೆ ಸಂಸತ್ತಿನ ಹೊರಗಡೆ ಮಾತನಾಡಿದ್ದರೂ, ಸಂಸತ್ತಿನಲ್ಲಿ ಹೇಳಿಕೆ ನೀಡಲು ಅವರು ಒಪ್ಪುತ್ತಿಲ್ಲವಾದ ಕಾರಣ ಸರ್ಕಾರದ ವಿರುದ್ಧ ಕಠಿಣ ನಿಲುವು ತಾಳಬೇಕು ಎಂಬ ಅಭಿಪ್ರಾಯವನ್ನು ಡಿಎಂಕೆ, ತೃಣಮೂಲ ಕಾಂಗ್ರೆಸ್ ಹಾಗೂ ಸಿಪಿಎಂ ಹೊಂದಿವೆ. 

ಭದ್ರತಾ ಲೋಪದ ಘಟನೆ ನಡೆದ ಮಾರನೆಯ ದಿನ ಮೋದಿ ಮತ್ತು ಶಾ ಅವರು ಸಂಸತ್ತಿಗೆ ಬಂದಿರಲಿಲ್ಲ. ಮೋದಿ ಅವರು ಸೋಮವಾರ ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT