ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ತಪ್ಪಾಯಿತು: ಪ್ರದೀಪ್ ಗುಪ್ತಾ

Published 22 ಜೂನ್ 2024, 15:37 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಮತದಾನೋತ್ತರ ಸಮೀಕ್ಷೆ ತಪ್ಪಾಗಲು ತಾವು ಕೊನೆಯ ಮೂರು ಹಂತದ ಮತದಾನದಲ್ಲಿ ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ಕಾರಣ ಎಂದು ‘ಆ್ಯಕ್ಸಿಸ್ ಮೈ ಇಂಡಿಯಾ’ ಮುಖ್ಯಸ್ಥ ಪ್ರದೀಪ್ ಗುಪ್ತಾ ಹೇಳಿದ್ದಾರೆ.

‘ಆ್ಯಕ್ಸಿಸ್ ಮೈ ಇಂಡಿಯಾ’ ತನ್ನ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಲೋಕಸಭಾ ಚುನಾವಣೆಯಲ್ಲಿ 361–400 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಅದರಲ್ಲಿಯೂ 80 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 67 ಸ್ಥಾನಗಳು ಬರುತ್ತವೆ ಎಂದು ಹೇಳಿತ್ತು. ಆದರೆ, ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ 240 ಸ್ಥಾನ. ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಅದು ಗಳಿಸಿದ್ದು ಕೇವಲ 33 ಸ್ಥಾನ ಮಾತ್ರ.         

ಪಿಟಿಐ ಜತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಪ್ರದೀಪ್ ಗುಪ್ತಾ, ‘ತಮ್ಮ ಸಂಸ್ಥೆಯು ಮತದಾನೋತ್ತರ ಸಮೀಕ್ಷೆಯ ಮಾರ್ಗಗಳು ತಪ್ಪಾಗಿಲ್ಲ. ಬದಲಿಗೆ, ನಿರ್ಣಾಯಕ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವಿನಿಯೋಗಿಸುವುದರಲ್ಲಿಯೇ ತಪ್ಪಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಸರ್ಕಾರ ರಚನೆ ಮಾಡಿದ್ದರೂ ಕೂಡ, ನಾವು ಹೇಳಿದ್ದ ಸ್ಥಾನಗಳಿಗೂ ವಾಸ್ತವದಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ನಮ್ಮ ಸಮೀಕ್ಷೆ ತಪ್ಪಾಗಿದೆ. ನಮಗೆ ದೊಡ್ಡ ಮಟ್ಟದಲ್ಲಿ ಕೈ ಕೊಟ್ಟ ರಾಜ್ಯಗಳೆಂದರೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ’ ಎಂದು ತಿಳಿಸಿದರು.

‘2019ರಲ್ಲಿ ನಮ್ಮ ಸಮೀಕ್ಷೆ ನಿಜವಾಗಿತ್ತು. ಈ ಬಾರಿ ನಾವು ಒಡಿಶಾ ಬಗ್ಗೆ ವಿಶೇಷ ಗಮನ ಹರಿಸಿದ್ದೆವು. ಹಾಗಾಗಿ ಅಲ್ಲಿ ಎಲ್ಲವೂ ಸರಿಯಾಗಿಯೇ ನಡೆಯಿತು. 2024ರ ಚುನಾವಣೆ ನಮಗೆ ಒಂದು ಪಾಠವಾಗಿದ್ದು, ಯಾವ ರಾಜ್ಯವನ್ನೂ (ಮುಖ್ಯವಾಗಿ ಉತ್ತರ ಪ್ರದೇಶದಂಥ ರಾಜ್ಯವನ್ನು) ಲಘುವಾಗಿ ಪರಿಗಣಿಸಬಾರದು ಎನ್ನುವುದನ್ನು ಕಲಿತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT