ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಮೀರಿ ಆಸ್ತಿ ಗಳಿಕೆ: ತಮಿಳುನಾಡು ಮಾಜಿ ಸಚಿವ ಪೊನ್ಮುಡಿಗೆ 3 ವರ್ಷ ಸಜೆ

Published 21 ಡಿಸೆಂಬರ್ 2023, 5:47 IST
Last Updated 21 ಡಿಸೆಂಬರ್ 2023, 5:47 IST
ಅಕ್ಷರ ಗಾತ್ರ

ಚೆನ್ನೈ: ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ತಮಿಳುನಾಡು ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ. ಪೊನ್ಮುಡಿ ಅವರಿಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಮದ್ರಾಸ್‌ ಹೈಕೋರ್ಟ್‌ ಗುರುವಾರ ವಿಧಿಸಿದೆ.

ಪೊನ್ಮುಡಿ ಅವರ ಪತ್ನಿ ಪಿ. ವಿಶಾಲಾಕ್ಷ್ಮಿ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯ ಮೂರ್ತಿ ಜೆ. ಜಯಚಂದ್ರನ್‌ ಅವರು, ಇಬ್ಬರೂ ಅಪರಾಧಿಗಳಿಗೆ ತಲಾ ₹ 50 ಲಕ್ಷ ದಂಡವನ್ನೂ ವಿಧಿಸಿ ತೀರ್ಪು ನೀಡಿದರು.

ಈ ಪ್ರಕರಣದಲ್ಲಿ ಸಚಿವ ಮತ್ತು ಅವರ ಪತ್ನಿಯನ್ನು ದೋಷಿ ಎಂದು ಮಂಗಳವಾರ ಘೋಷಿಸಿದ್ದ ಹೈಕೋರ್ಟ್‌, ಗುರುವಾರ ತೀರ್ಪು ಪ್ರಕಟಿಸಿದೆ.

ದೋಷಿ ಎಂದು ನ್ಯಾಯಾಲಯ ತೀರ್ಪು ಘೋಷಿಸಿದ ಕ್ಷಣದಿಂದಲೇ ಪೊನ್ಮುಡಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಸಚಿವ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಮತ್ತು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಪೊನ್ಮುಡಿ ಪರ ವಕೀಲ ಎನ್‌.ಆರ್‌. ಎಲ್ಲಂಗೊ ಮನವಿ ಮಾಡಿದರು. ಈ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಜಯಚಂದ್ರನ್‌ ಅವರು, ಆರೋಗ್ಯದ ಸ್ಥಿತಿಯ ಕಾರಣಕ್ಕೆ ಪೊನ್ಮುಡಿ ಮತ್ತು ವಿಶಾಲಾಕ್ಷಿ ಅವರಿಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಲು 30 ದಿನಗಳ ಕಾಲಾವಕಾಶ ನೀಡಿದರು.

2024ರ ಜ.22ರಂದು ಶರಣಾಗದಿದ್ದರೆ ವಾರಂಟ್‌ ಜಾರಿಗೊಳಿಸಿ ಅಪರಾಧಿಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಪೊನ್ಮುಡಿ ಖಾತೆ ರಾಜಕಣ್ಣಪ್ಪನ್‌ಗೆ: ಕೆ. ಪೊನ್ಮುಡಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರಿಂದ, ಉನ್ನತ ಶಿಕ್ಷಣ ಖಾತೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಆರ್‌.ಎಸ್‌.ರಾಜಕಣ್ಣಪ್ಪನ್‌ ಅವರಿಗೆ ಗುರುವಾರ ಹಂಚಿಕೆ ಮಾಡಿದ್ದಾರೆ.

2006ರಿಂದ 2011ರ ಅವಧಿಯ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದಾಗ ಪೊನ್ಮುಡಿ, ತಮ್ಮ ಮತ್ತು ಪತ್ನಿ ಹೆಸರಿನಲ್ಲಿ ಆದಾಯಕ್ಕೂ ಮೀರಿ ಸುಮಾರು ₹1.75 ಕೋಟಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹಿಂದಿನ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಮತ್ತು  ಜಾಗೃತ ದಳ ನಿರ್ದೇಶನಾಲಯ ಈ ಬಗ್ಗೆ ಪ್ರಕರಣ ದಾಖಲಿಸಿದ್ದವು.

ಆದರೆ ತೀರ್ಪನ್ನು ಒಂದು ತಿಂಗಳ ಕಾಲ ಅಮಾನತಿನಲ್ಲಿಟ್ಟಿದೆ.

2011ರ ಪ್ರಕರಣ ಇದಾಗಿದ್ದು, 2016ರಲ್ಲಿ ಕೆಳ ನ್ಯಾಯಾಲಯವು ಪೊನ್ಮುಡಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಡಿ. 19ರಂದು ಮದ್ರಾಸ್ ಹೈಕೋರ್ಟ್ ರದ್ದು ಮಾಡಿ, ದೋಷಿ ಎಂದು ಸಾರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT