ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು | ಭಾರಿ ಮಳೆಗೆ ಕೋಡಿ ಹರಿದ ಕೆರೆಗಳು, ಜಲಾವೃತವಾದ ರಸ್ತೆಗಳು

Published 18 ಡಿಸೆಂಬರ್ 2023, 2:58 IST
Last Updated 18 ಡಿಸೆಂಬರ್ 2023, 2:58 IST
ಅಕ್ಷರ ಗಾತ್ರ

ಚೆನ್ನೈ: ಭಾರಿ ಮಳೆ ಸುರಿಯುತ್ತಿರುವ ಕಾರಣ, ರಾಜ್ಯದ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಹಾಗೂ ತೆಂಕಾಸಿ ಜಿಲ್ಲೆಗಳ ಶಾಲೆ, ಕಾಲೇಜು, ಖಾಸಗಿ ಸಂಸ್ಥೆಗಳು, ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಿಗೆ ತಮಿಳುನಾಡು ಸರ್ಕಾರ ಸೋಮವಾರ ರಜೆ ಘೋಷಣೆ ಮಾಡಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾನುವಾರ ರಾತ್ರಿ ತೂತುಕುಡಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಕೋವಿಲ್‌ಪಟ್ಟಿ ‍ಪ್ರದೇಶದ 40 ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿ, ಕೋಡಿ ಹರಿಯುತ್ತಿವೆ. ಜಿಲ್ಲೆಯ ಹಲವು ಪ್ರದೇಶಗಳು ಮುಳುಗಿವೆ.

ಕೂಸಲಿಪಟ್ಟಿ ಹಾಗೂ ಇನಾಮ್ ಮನಿಯಾಚಿಯಲ್ಲಿ ನದಿಯಲ್ಲಿ ನೀರು ತುಂಬಿ ಹರಿಯುವುದನ್ನು ನಿಲ್ಲಿಸಲು ಮರಳಿನ ಚೀಲ ಹಾಗೂ ಜೆಸಿಬಿಗಳನ್ನು ಬಳಸಲಾಯಿತು. ರಸ್ತೆಗಳಲ್ಲಿ ನೀರು ತುಂಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.

ಭಾನುವಾರ ಬೆಳಿಗ್ಗಿನಿಂದಲೇ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ, ಎಟ್ಟಯಪುರಂ, ವಿಲಾತಿಕುಳಂ, ಕಲುಗುಮಲೈ, ಕಯತಾರ್‌, ಕಡಂಬೂರ್‌, ವೆಂಬಾರ್, ಸುರಂಗಡ ಹಾಗೂ ಇತರ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಈ ನಾಲ್ಕೂ ಜಿಲ್ಲೆಗಳಲ್ಲಿ ಸೋಮವಾರವೂ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

‘ಮಳೆ ಬಾಧಿತ ಜಿಲ್ಲೆಗಳಲ್ಲಿ ಜನರ ಸುರಕ್ಷತೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಈ ಜಿಲ್ಲೆಗಳ ಉಸ್ತುವಾರಿಗಳಾಗಿ ಓರ್ವ ಸಚಿವರು ಹಾಗೂ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ’ ಎಂದು ರಾಜ್ಯದ ಕಂದಾಯ ಹಾಗೂ ವಿಕೋಪ ನಿರ್ವಹಣಾ ಸಚಿವ ಕೆ.ಕೆ.ಎಸ್.ಎಸ್‌.ಆರ್‌ ರಾಮಚಂದ್ರನ್‌ ಅವರು ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ ಹಾಗೂ ತೆಂಕಾಸಿ ಜಿಲ್ಲೆಗಳಲ್ಲಿ ರಾಜ್ಯ ಹಾಗೂ ಕೇಂದ್ರ ವಿಕೋಪ ನಿರ್ವಹಣಾ ಪಡೆಯ 250 ತುಕಡಿಗಳನ್ನು ನಿಯೋಜಿಸಲಾಗಿದೆ. ಮಳೆಯಿಂದ ಭಾಧಿತ ಜನರಿಗಾಗಿ ತಿರುನಲ್ವೇಲಿಯಲ್ಲಿ 19, ಕನ್ಯಾಕುಮಾರಿಯಲ್ಲಿ 4, ತೂತುಕುಡಿಯಲ್ಲಿ 2 ಹಾಗೂ ತೆಂಕಾಸಿಯಲ್ಲಿ 1 ಕ್ಯಾಂಪ್‌ ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT