ಹೈದರಾಬಾದ್: ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜನರಿಂದ ಹಣ ಸಂಗ್ರಹಿಸಿದ್ದ ನಿರ್ಮಾಲಾ ಜಿಲ್ಲೆಯ 12 ವರ್ಷದ ಬಾಲಕಿಯ ನೆರವಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿಂತಿದ್ದಾರೆ. ಬಾಲಕಿಯ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಇತರೆ ಮೂಲಭೂತ ಅಗತ್ಯಗಳನ್ನು ಪೂರೈಸುವಂತೆ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆಯು ಮುಖ್ಯಮಂತ್ರಿ ಅವರ ಗಮನಕ್ಕೆ ಬರುತ್ತಿದ್ದಂತೆಯೇ, ಬಾಲಕಿಗೆ ಸಹಾಯ ಮಾಡುವಂತೆ ನಿರ್ಮಾಲಾ ಜಿಲ್ಲೆಯ ಜಿಲ್ಲಾಧಿಕಾರಿ ಅಭಿಲಾಶಾ ಅಭಿನವ್ ಅವರಿಗೆ ಸೂಚಿಸಿಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ, ಪೋಷಕರನ್ನು ಕಳೆದುಕೊಂಡ ಬಾಲಕಿಯನ್ನು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ವಸತಿ ನಿಲಯಕ್ಕೆ ದಾಖಲಿಸಲಾಗಿದೆ. ಅಲ್ಲಿ ಅಗತ್ಯ ನೆರವನ್ನು ಒದಗಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ,
ಬಾಲಕಿಯ ತಾಯಿಯು ದಿನಗೂಲಿ ನೌಕರರಾಗಿದ್ದರು. ಗುರುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯಸಂಸ್ಕಾರ ಮಾಡಲು ಹಣವಿರದ ಕಾರಣ, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಹಣ ಹೊಂದಿಸಿದ ಈ ಬಾಲಕಿಯು ಅಂತ್ಯಸಂಸ್ಕಾರ ನೆರವೇರಿಸಿದ್ದಳು.