ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ ಪ್ರದೇಶ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ 

Published 11 ಜುಲೈ 2024, 9:54 IST
Last Updated 11 ಜುಲೈ 2024, 9:54 IST
ಅಕ್ಷರ ಗಾತ್ರ

ಹೈದರಾಬಾದ್: ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಮುಚ್ಚುಮರ್ರಿ ಎಂಬಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆಗೈದ ಆರೋಪದಲ್ಲಿ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

12 ಮತ್ತು 13 ವರ್ಷದ ಬಾಲ ಆರೋಪಿಗಳು, ಬಾಲಕಿ ಕಲಿಯುತ್ತಿರುವ ಶಾಲೆಯಲ್ಲಿ ಸೀನಿಯರ್ ವಿದ್ಯಾರ್ಥಿಗಳಾಗಿದ್ದಾರೆ ಎಂದು ನಂದಿಕೊಟ್ಕೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದರೆ, ಬಾಲಕರು ಏಳು ಮತ್ತು ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. 

ಘಟನೆಯನ್ನು ಖಂಡಿಸಿ ಕೆಲವು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದ್ದು, ಮುಚ್ಚುಮರ್ರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಲಕಿ ಭಾನುವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದು, ಆಕೆಯ ಮೃತದೇಹವನ್ನು ಪತ್ತೆಹಚ್ಚುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ.  

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಕೊಲೆಗೈದು ಮೃತದೇಹವನ್ನು ಕಾಲುವೆಗೆ ತಳ್ಳಿರುವುದಾಗಿ ವಿಚಾರಣೆ ವೇಳೆ ಬಾಲಕರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಬಾಲಕಿ ಕಾಣೆಯಾಗಿದ್ದರ ಕುರಿತು ಆಕೆಯ ಪೋಷಕರು ದೂರು ನೀಡಿದ್ದರು. ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಲಭಿಸಿರಲಿಲ್ಲ. ಪೊಲೀಸ್‌ ಶ್ವಾನವು ಒಬ್ಬ ಆರೋಪಿ ಬಾಲಕನ ಮನೆಯ ಬಳಿ ಬಂದು ನಿಂತಿತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಮುಚ್ಚುಮರ್ರಿ ಗ್ರಾಮದ ಉದ್ಯಾನದಲ್ಲಿ ಭಾನುವಾರ ಸಂಜೆ ಬಾಲಕಿಯನ್ನು ನೋಡಿರುವುದಾಗಿ ಬಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ತಮ್ಮೊಂದಿಗೆ ಆಟವಾಡುವಂತೆ ಬಾಲಕಿಯನ್ನು ಪುಸಲಾಯಿಸಿ ಸಮೀಪದ ಡ್ಯಾಂ ಬಳಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ನಡೆದಿರುವುದನ್ನು ಬಾಲಕಿಯು ಮನೆಯವರಿಗೆ ತಿಳಿಸಬಹುದು ಎಂದು ಭಯಗೊಂಡ ಬಾಲಕರು ಆಕೆಯ ಕತ್ತುಹಿಸುಕಿ ಕೊಲೆಗೈದು ಶವವನ್ನು ಕಾಲುವೆಗೆ ತಳ್ಳಿದ್ದಾರೆ. ಬಾಲಕಿಯ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT