ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ‌ ಹಿಮ್ಮೆಟ್ಟಿಸಲು ಟಿಬೆಟ್ ಯೋಧನ ಬಲಿದಾನ: ಡ್ರ್ಯಾಗನ್‌ಗೆ ಸ್ಪಷ್ಟ ಸಂದೇಶ

Last Updated 3 ಸೆಪ್ಟೆಂಬರ್ 2020, 3:54 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್‌ ತ್ಸೋ ಸರೋವರ ಬಳಿಯ ಭೂಭಾಗವನ್ನು ಅತಿಕ್ರಮಿಸುವ ಚೀನಾ ಯತ್ನ ಹಿಮ್ಮೆಟ್ಟಿಸುವ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಟಿಬೆಟ್ ಮೂಲದ ಭಾರತೀಯ ಯೋಧ ನಿಮಾ ತೆಂಜಿನ್ ಸಾವು ನೆರೆಯ ರಾಷ್ಟ್ರಕ್ಕೆ ಹೊಸ ಸಂದೇಶವೊಂದನ್ನು ರವಾನಿಸಿದೆ.

ಚೀನಾದ ವಿಸ್ತರಣಾವಾದದ ವಿರುದ್ಧ ಸಿಡಿದೆದ್ದು ಭಾರತದಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ನರು ಸಂದರ್ಭ ಬಂದರೆ ಭಾರತಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂಬುದಕ್ಕೆ ತೆಂಜಿನ್ ತ್ಯಾಗ,‌ ಬಲಿದಾನ ಸಾಕ್ಷಿಯಾಗಿ ನಿಂತಿದೆ.

ಲಡಾಕ್‌ನ ಸೋನಮ್‌ಲಿಂಗ್‌ನಲ್ಲಿ ತೆಂಜಿನ್ ಪಾರ್ಥಿವ ಶರೀರಕ್ಕೆಭಾರತದ ತ್ರಿವರ್ಣ ಧ್ವಜ ಮತ್ತು ಹಿಮ ಸಿಂಹದ ಲಾಂಛನವಿರುವ ಟಿಬೆಟ್‌ ಧ್ವಜ ಹೊದಿಸಲಾಗಿತ್ತು. ಯೋಧರೊಬ್ಬರು ಎರಡು ರಾಷ್ಟ್ರಗಳ ಧ್ವಜಗಳ ಗೌರವ ಪಡೆದ ಅಪರೂಪದ ಸನ್ನಿವೇಶ ಅದಾಗಿತ್ತು.

51 ವರ್ಷದತೆಂಜಿನ್‌ ಪ್ರತಿನಿಧಿಸುತ್ತಿದ್ದ ವಿಕಾಸ್ ಬಟಾಲಿಯನ್‌ನ ಸ್ಪೇಷಲ್‌ ಫ್ರಾಂಟಿಯರ್‌ ಫೋರ್ಸ್‌ಗೆ‌ (ಎಸ್‌ಎಫ್‌ಎಫ್‌) ವಿಶೇಷ ಹಿನ್ನೆಲೆ ಇದೆ. ‌1962ರ ಭಾರತ–ಚೀನಾ ಯುದ್ಧದ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಈ ಬಟಾಲಿಯನ್‌ನಲ್ಲಿರುವ ಬಹುತೇಕ ಯೋಧರು ಟಿಬೆಟ್‌ ನಿರಾಶ್ರಿತರು ಮತ್ತು ಗೆರಿಲ್ಲಾ ಹೋರಾಟಗಾರು. ಈ ಪಡೆ ಅಸ್ತಿತ್ವಕ್ಕೆ ಬಂದ ದಿನದಿಂದ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಅತ್ಯಂತ ರಹಸ್ಯ ಕಾಪಾಡಲಾಗಿದೆ.

‌ಅದಕ್ಕಾಗಿಯೇ ಯುದ್ಧಭೂಮಿಯಲ್ಲಿ ವಿಶೇಷ ಪಡೆಯ ಯೋಧರ ತ್ಯಾಗ, ಬಲಿದಾನಗಳನ್ನು ಅಧಿಕೃತವಾಗಿ ಗುರುತಿಸಲಾಗುವುದಿಲ್ಲ ಮತ್ತು ಎಲ್ಲಿಯೂ ಬಹಿರಂಗವಾಗಿ ಘೋಷಿಸಲಾಗುವುದಿಲ್ಲ. ಹಾಗಾಗಿಯೇ ಚೀನಾ ಅತಿಕ್ರಮಣ ಹಿಮ್ಮೆಟ್ಟಿಸಿದ ಭಾರತೀಯ ಸೇನೆಯ ಕಾರ್ಯಾಚರಣೆಯ ಬಗ್ಗೆ ರಕ್ಷಣಾ ಸಚಿವಾಲಯ ನೀಡಿದ ಅಧಿಕೃತ ಪ್ರಕಟಣೆಯಲ್ಲಿತೆಂಜಿನ್ ತ್ಯಾಗ,‌ ಬಲಿದಾನದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ಭಾರತೀಯ ಸೇನೆ ಅಧಿಕಾರಿಗಳುಬುಧವಾರಲೆಹ್‌ನಲ್ಲಿತೆಂಜಿನ್ ಪಾರ್ಥಿವ ಶರೀರವನ್ನು ಅವರ ಪತ್ನಿ ಮತ್ತು ಮೂವರು ಮಕ್ಕಳಿಗೆ ಹಸ್ತಾಂತರಿಸಿದರು ಎಂದು ಟಿಬೆಟ್‌ ಸಂಸತ್‌ ಸದಸ್ಯ ಲಗ್ಯಾರಿ ನಮ್‌ಗ್ಯಾಲ್‌ ದೋಲ್ಕರ್‌ ಧರ್ಮಶಾಲಾದಲ್ಲಿ ತಿಳಿಸಿದ್ದಾರೆ. ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಅವರ ಮನೆಯಲ್ಲಿ ಇಡಲಾಗಿದೆ. ಇದೇಪಡೆಯ ಮತ್ತೊಬ್ಬ ಯೋಧ 24 ವರ್ಷದ ತೆಂಜಿನ್‌ ಲೋದೆನ್‌ ಕೂಡ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾರೆ.

‘ಎಸ್‌ಎಫ್‌ಎಫ್’‌ ಮತ್ತು ‘ಎಸ್ಟಾಬ್ಲಿಷ್‌ಮೆಂಟ್‌ 22’ ಎಂಬ ಹೆಸರಿನಿಂದಲೂ ಗುರುತಿಸಲಾಗುವ ಈ ಪಡೆ ಸೇನಾಪಡೆಯ ಭಾಗವಾಗಿದ್ದರೂ, ಭಾರತೀಯ ಬೇಹುಗಾರಿಕೆ ಸಂಸ್ಥೆಯ ನೇರ ಅಧೀನದಲ್ಲಿರುತ್ತದೆ. ಚೀನಾ ಜತೆಗಿನ ರಾಜತಾಂತ್ರಿಕ ಬಾಂಧವ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಈ ಪಡೆಯ ಅಸ್ತಿತ್ವದ ಬಗ್ಗೆ ಭಾರತ ರಹಸ್ಯವನ್ನು ಕಾಪಾಡಿಕೊಂಡಿದೆ.

1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧ ಮತ್ತು 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲೂ ಎಸ್‌ಎಫ್‌ಎಫ್ ಯೋಧರು ಭಾರತದ ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದರು.

‘ಈ ಸಾವು ನಿಜಕ್ಕೂ ದುಃಖ ತಂದಿದೆ. ಆದರೆ, ನಮ್ಮವರೊಬ್ಬರು ಭಾರತಕ್ಕಾಗಿ ಪ್ರಾಣತ್ಯಾಗ ಮಾಡಿದ ಬಗ್ಗೆ ಟಿಬೆಟಿಯನ್ನರಿಗೆ ಹೆಮ್ಮೆ ಇದೆ. ನಮಗೆಲ್ಲ ಆಶ್ರಯ ನೀಡಿದ ಭಾರತದ ಋಣವನ್ನು ಎಂದಿಗೂ ತೀರಿಸಲಾಗದು’ ಎಂದು ನಮ್‌ಗ್ಯಾಲ್‌ ಡೋಲ್ಕರ್‌ ಬುಧವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸದಾ ಹಿಮದಿಂದ ಆವೃತ್ತವಾದ ಲಡಾಖ್‌–ಟಿಬೆಟ್‌ ಗಡಿ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಗೆಎಸ್‌ಎಫ್‌ಎಫ್‌ ಯೋಧರು ನೀಡುವ ನೆರವು ನಿರ್ಣಾಯಕ ಪಾತ್ರ ವಹಿಸುತ್ತದೆ.

‘ಸ್ವಾಯತ್ತ ಟಿಬೆಟ್‌ನ ಸಾವಿರಾರು ಯುವಕರು ಚೀನಾದ ಸೇನೆಯನ್ನು ಸೇರಿದ್ದಾರೆ. ಭಾರತದೊಂದಿಗಿನ ಯುದ್ಧದಲ್ಲಿ ಅವರು ಚೀನಾ ಪರವಾಗಿ ಹೋರಾಟ ನಡೆಸಿದ್ದಾರೆ’ ಎಂದು ಚೀನಾ ಈಚೆಗೆ ಹೇಳಿಕೊಂಡಿತ್ತು. ಆದರೆ, ಚೀನಾಕ್ಕೆ ಈ ಘಟನೆ ಸೂಕ್ತ ಉತ್ತರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT