ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಆತ್ಮಾವಲೋಕನ ಸಭೆ: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಪರಾಮರ್ಶೆ

Published 8 ಡಿಸೆಂಬರ್ 2023, 16:32 IST
Last Updated 8 ಡಿಸೆಂಬರ್ 2023, 16:32 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ಹುಡುಕುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕರು ಶುಕ್ರವಾರ ಆತ್ಮಾವಲೋಕನ ಸಭೆ ನಡೆಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್‌ ಗಾಂಧಿ ಅವರು ಎರಡೂ ರಾಜ್ಯಗಳ ಮುಖಂಡರ ಜತೆ ಪ್ರತ್ಯೇಕ ಸಭೆ ನಡೆಸಿದರು. ಸಭೆಯ ವೇಳೆ ಇಬ್ಬರು ನಾಯಕರು ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಯಾವುದೇ ಮಾತುಗಳನ್ನಾಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮತ್ತು ಖಜಾಂಚಿ ಅಜಯ್‌ ಮಾಕೆನ್‌ ಅವರೂ ಸಭೆಯಲ್ಲಿದ್ದರು.

ಪಕ್ಷದ ಹೈಕಮಾಂಡ್‌ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದ ರಾಜ್ಯ ಘಟಕಗಳಲ್ಲಿ ‘ಭಾರಿ ಬದಲಾವಣೆ’ ತರುವ ಗಂಭೀರ ಚಿಂತನೆ ನಡೆಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ರಾಜಸ್ಥಾನದ ಮುಖಂಡರ ಜತೆಗಿನ ಸಭೆ ಶನಿವಾರ ನಡೆಯಲಿದೆ. 

ಮಧ್ಯಪ್ರದೇಶದ ಮುಖಂಡರು, ರಾಜ್ಯ ಘಟಕದಲ್ಲಿ ಬದಲಾವಣೆ ತರುವ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಹೊಣೆಯನ್ನು ಖರ್ಗೆ ಅವರಿಗೆ ವಹಿಸಿಕೊಟ್ಟಿದ್ದಾರೆ. ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿದ್ದ ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್ ಅವರು ಹೊಸಬರಿಗಾಗಿ ಜಾಗ ಬಿಟ್ಟುಕೊಡುವ ಸೂಚನೆ ದೊರೆತಿದೆ.

ಚುನಾವಣೆಯ ಫಲಿತಾಂಶದಿಂದ ಎಲ್ಲರಿಗೂ ನಿರಾಸೆಯಾಗಿದೆ. ಆತ್ಮಾವಲೋಕನ ಸಭೆಯು ‘ಸ್ನೇಹಪರ’ ವಾತಾವರಣದಲ್ಲಿ ನಡೆಯಿತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮತ್ತು ಮಧ್ಯಪ್ರದೇಶದ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಹೇಳಿದರು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನು ಕಳುಹಿಸುವಂತೆ ಖರ್ಗೆ ಅವರಿಗೆ ಮನವಿ ಮಾಡಲಾಗಿದೆ ಎಂದರು. 

ಸಭೆಯಲ್ಲಿ ಪಾಲ್ಗೊಂಡಿದ್ದ ಮಧ್ಯಪ್ರದೇಶದ ಮುಖಂಡರುಗಳಲ್ಲಿ ಕಮಲ್‌ನಾಥ್‌, ದಿಗ್ವಿಜಯ್‌ ಸಿಂಗ್‌ ಮತ್ತು ಗೋವಿಂದ ಸಿಂಗ್‌ ಅವರು ಪ್ರಮುಖರಾಗಿದ್ದರು. 

ಇದಕ್ಕೂ ಮುನ್ನ ಖರ್ಗೆ ಸೇರಿದಂತೆ ರಾಷ್ಟ್ರೀಯ ನಾಯಕರು ಛತ್ತೀಸಗಢದ ಮುಖಂಡರ ಜತೆ ಸಭೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೆಲ್, ಮಾಜಿ ಉಪಮುಖ್ಯಮಂತ್ರಿ ಟಿ.ಎಸ್. ಸಿಂಹದೇವ್, ಛತ್ತೀಸಗಢ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಮತ್ತು ರಾಜ್ಯ ಉಸ್ತುವಾರಿ ಕುಮಾರಿ ಶೆಲ್ಜಾ ಸಭೆಯಲ್ಲಿದ್ದರು. 

‘ಪಕ್ಷದ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಯಾವ ಮತಗಟ್ಟೆ ಸಮೀಕ್ಷೆಯೂ ಕಾಂಗ್ರೆಸ್‌ನ ಸೋಲಿನ ಭವಿಷ್ಯ ನುಡಿದಿರಲಿಲ್ಲ’ ಎಂದು ಸಭೆಯ ಬಳಿಕ ಶೆಲ್ಜಾ ಅವರು ಸುದ್ದಿಗಾರರಲ್ಲಿ ತಿಳಿಸಿದರು. 

‘2018 ರಲ್ಲಿ ಪಡೆದಿದ್ದ ಮತ ಪ್ರಮಾಣವನ್ನು ಪಕ್ಷವು ಈ ಚುನಾವಣೆಯಲ್ಲೂ ಉಳಿಸಿಕೊಂಡಿರುವುದು ಸಕಾರಾತ್ಮಕ ಅಂಶ. ಸೋಲಿನಿಂದ ನಿರಾಸೆಯಾಗಿರುವುದು ನಿಜ. ಆದರೆ ಹತಾಶೆಗೊಂಡಿಲ್ಲ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT