ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಈಗ ಸಂಪುಟ ರಚನೆಯತ್ತ ಗಮನ

Published 6 ಡಿಸೆಂಬರ್ 2023, 16:27 IST
Last Updated 6 ಡಿಸೆಂಬರ್ 2023, 16:27 IST
ಅಕ್ಷರ ಗಾತ್ರ

ಹೈದರಾಬಾದ್‌: ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಎ. ರೇವಂತ್‌ ರೆಡ್ಡಿ ಅವರು ಗುರುವಾರ ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತ್ವರಿತ ಸಿದ್ಧತೆಗಳು ನಡೆಯುತ್ತಿರುವಂತೆಯೇ, ಕಾಂಗ್ರೆಸ್‌ನಲ್ಲಿನ ಅನೇಕರು ಸಂಪುಟದಲ್ಲಿ ತಮಗೆ ಸ್ಥಾನ ಸಿಗಬಹುದೆಂಬ ಆಶಾಭಾವ ಹೊಂದಿದ್ದಾರೆ.

ನಿಯಮಾವಳಿ ಪ್ರಕಾರ ಮುಖ್ಯಮಂತ್ರಿ ಸೇರಿದಂತೆ  18 ಸದಸ್ಯರು ರಾಜ್ಯ ಸಂಪುಟದ ಭಾಗವಾಗಬಹುದು. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಈಗ ಎಲ್ಲರ ಗಮನ ಸಂಪುಟ ರಚನೆಯತ್ತ ತಿರುಗಿದೆ. ರೇವಂತ್‌ ರೆಡ್ಡಿ ಅವರ ಸಂಪುಟದಲ್ಲಿ ಭಾಗಿಯಾಗಲು ಹಲವು ಮಂದಿ  ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. 

ಮಲ್ಲು ಭಟ್ಟಿ ವಿಕ್ರಮಾರ್ಕ ಅವರೊಂದಿಗೆ ಮಹಿಳಾ ಶಾಸಕಿಯನ್ನು ಕೂಡ ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ ಎನ್ನಲಾಗಿದೆ. ಇಬ್ಬರು ಉಪ ಮುಖ್ಯಮಂತ್ರಿಗಳ ಸ್ಥಾನಗಳಿಗೆ ಎಐಸಿಸಿ ನಾಯಕರು ಒಪ್ಪಿಗೆ ನೀಡಿದರೆ ಮುಲುಗು ಶಾಸಕಿ, ಧನಸರಿ ಅನಸೂಯ ಅಲಿಯಾಸ್‌ ಸೀತಕ್ಕ (ಎಸ್‌ಟಿ ಮಹಿಳೆ) ಅಥವಾ ಕೊಂಡಾ ಸುರೇಖಾ (ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ) ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಏಳು ಬಾರಿ ಶಾಸಕರಾಗಿರುವ ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ ಅವರು ಸಂಪುಟ ಸೇರುವ ಬಗ್ಗೆ ಉತ್ಸಾಹ ತೋರಿಲ್ಲ. ಅವರ ಪತ್ನಿ ಪದ್ಮಾವತಿ ಅವರು ಸಂಪುಟಕ್ಕೆ ಸೇರ್ಪಡೆಯಾಗಬಹುದು. ಸಂಪುಟ ದರ್ಜೆ ಸಚಿವರಾಗುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಂಗ್ರೆಸ್‌ನಲ್ಲಿರುವ ಕಮ್ಮ ಸಮುದಾಯದ ಏಕೈಕ ಶಾಸಕ ತುಮ್ಮಲ ನಾಗೇಶ್ವರ ರಾವ್‌ ಮತ್ತು ಪಿ. ಶ್ರೀನಿವಾಸ್‌ ರೆಡ್ಡಿ ಅವರು ಮುಂಚೂಣಿಯಲ್ಲಿದ್ದಾರೆ. ವೈ. ರಾಜಶೇಖರ್‌ ರೆಡ್ಡಿ  ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದಾಮೋದರ್‌ ರಾಜಾ ನರಸಿಂಹ ಅವರು ಕೂಡ ಸಂಪುಟಕ್ಕೆ ಸೇರುವ ವಿಶ್ವಾಸ ಹೊಂದಿದ್ದಾರೆ. ಶಾಸಕ ಪೊನ್ನಾಮ್‌ ಪ್ರಭಾಕರ್‌ ಅವರೂ ಸಂಪುಟ ಸೇರಬಯಸಿದ್ದಾರೆ.

ರೇಮಂತ್‌ ರೆಡ್ಡಿ ನಿಷ್ಠರಾಗಿರುವ ಶಬ್ಬೀರ್‌ ಅಲಿ ಅವರು ನಿಜಾಮಬಾದ್‌ ನಗರ ಕ್ಷೇತ್ರದಲ್ಲಿ ಸೋತಿದ್ದಾರೆ. ಆದರೆ ಅವರು ಕೂಡ ಖಾತೆ ಪಡೆಯಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ. ಅಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವರನ್ನು ವಿಧಾನಪರಿಷತ್‌ ಸದಸ್ಯರಾಗಿಸಬೇಕಾಗುತ್ತದೆ. 

ವೆಂಕಟರೆಡ್ಡಿ ಅವರು ಪ್ರಮುಖ ಖಾತೆ ಪಡೆಯಲು ಪ್ರಯತ್ನ ನಡೆಸಿದ್ದಾರೆ. ದುಡ್ಡಿಳ್ಳ ಶ್ರೀಧರ ಬಾಬು ಅವರು ಸ್ಪೀಕರ್ ಸ್ಥಾನ  ಅಥವಾ ಸಂಪುಟ ದರ್ಜೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಸಚಿವರಾಗಿದ್ದ ಗಡ್ಡಂ ವಿನೋದ್‌ ಕೂಡ ಸಂಪುಟ ಸೇರಲು ಪ್ರಯತ್ನಿಸಿದ್ದು ಈಗಾಗಲೇ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಗಡ್ಡಂ ವಿನೋದ್‌ ಅವರ ತಮ್ಮ ಗಡ್ಡಂ ವಿವೇಕಾನಂದ ಕೂಡ ಸ್ಪರ್ಧೆಯಲ್ಲಿದ್ದಾರೆ. ಚುನಾವಣೆ ಮುನ್ನವಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ ಅವರು ಸಂಪುಟ ದರ್ಜೆ ಪಡೆಯುವ ವಿಶ್ವಾಸ ಹೊಂದಿದ್ದಾರೆ. ಪಕ್ಷವು ಅಧಿಕಾರಕ್ಕೆ ಬಂದರೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಹೈಕಮಾಂಡ್‌ ನೀಡಿದ ನಂತರವೇ  ಅವರು ಕಾಂಗ್ರೆಸ್‌ಗೆ ಮರಳಿದ್ದರು. ವಿವೇಕ್‌ ಅವರು ಚೆನ್ನೂರ್‌ ಕ್ಷೇತ್ರದಿಂದ ಜಯ ಗಳಿಸಿದ್ದಾರೆ. ಕುಟುಂಬದಲ್ಲಿ ಒಬ್ಬರು ಮಾತ್ರ ಸಚಿವರಾಗುವ ಅವಕಾಶ ಇದ್ದು ದಲಿತ ಸಮುದಾಯದ ಪ್ರಾತಿನಿಧ್ಯದಡಿ ಗಡ್ಡಂ ಸೋದರರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ದೊರಕುವ ಸಾಧ್ಯತೆ ಇದೆ.

‘ಇಂಡಿಯಾ’ ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನ?

ನವದೆಹಲಿ: ರೇವಂತ್‌ ರೆಡ್ಡಿ ಅವರ ಪ್ರಮಾಣ ವಚನ ಸಮಾರಂಭವನ್ನು ‘ಇಂಡಿಯಾ’ ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನವಾಗಿ ಮಾಡಲು ಕಾಂಗ್ರೆಸ್‌ ಯತ್ನಿಸಿದ್ದು ಮೈತ್ರಿಕೂಟದ ನಾಯಕರುಗಳಿಗೆ ಆಹ್ವಾನ ನೀಡಲಾಗಿದೆ. ರೇವಂತ್‌ ಅವರು ದೂರವಾಣಿ ಮೂಲಕ ಮಮತಾ ಬ್ಯಾನರ್ಜಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವರನ್ನು ಸಂಪರ್ಕಿಸಿ ಸಮಾರಂಭಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಅತ್ಯಂತ ಕಡಿಮೆ ಕಾಲಾವಕಾಶದಲ್ಲೇ ನಾಯಕರಿಗೆ ಆಹ್ವಾನ ನೀಡಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ ಎಂದು ಮೂಲಗಳು ಹೇಳಿವೆ. ಸಮಾರಂಭಕ್ಕೆ ಬರಲು ಆಗುವುದಿಲ್ಲ ಎಂದು ಮಮತಾ ಹೇಳಿದ್ದು ತಮ್ಮ ಪರವಾಗಿ ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರೆಕ್‌ ಒಬ್ರಿಯನ್‌ ಅವರಿಗೆ ಹೈದರಾಬಾದ್‌ಗೆ ತೆರಳಲು ಸೂಚಿಸಿದ್ದಾರೆ. ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಸ್ಟಾಲಿನ್‌ ಅವರ ಉಪಸ್ಥಿತಿ ಬಗ್ಗೆಯೂ ಅನುಮಾನವಿದೆ. ಸಿಪಿಐನ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಜಾರ್ಖಂಡ್‌ ಮುಖ್ಯಮಂತ್ರಿ ಹೇಮತ್‌ ಸೊರೇನ್‌ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ ರೆಡ್ಡಿ ಅವರಿಗೂ ಆಹ್ವಾನ ನೀಡಲಾಗಿದೆ. ರೇವಂತ್ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೂ ಕರೆ ಮಾಡಿದ್ದರು ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ‘ರೇವಂತ್ ರೆಡ್ಡಿ ಅವರಿಗೆ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಸರ್ಕಾರವು ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಲಿದೆ ಮತ್ತು ಪ್ರಜಾ ಸರ್ಕಾರ ರಚಿಸಲಿದೆ’ ಎಂದು ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT