ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ನಿಲ್ಲದ ಘರ್ಷಣೆ, ಬಿಜೆಪಿ ನಾಯಕರ ಮನೆಗಳೇ ದಾಳಿಯ ಗುರಿ

Published 17 ಜೂನ್ 2023, 14:37 IST
Last Updated 17 ಜೂನ್ 2023, 14:37 IST
ಅಕ್ಷರ ಗಾತ್ರ

ಇಂಫಾಲ್‌/ಕೋಲ್ಕತ್ತ‌: ಮಣಿಪುರದ ಇಂಫಾಲ್‌ನಲ್ಲಿ ಶುಕ್ರವಾರ ತಡರಾತ್ರಿವರೆಗೂ ಉದ್ರಿಕ್ತ ಗುಂಪುಗಳು ಬಿಜೆಪಿ ಕಚೇರಿ ಸೇರಿದಂತೆ ಆ ಪಕ್ಷದ ನಾಯಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದ್ದು, ಈ ಘರ್ಷಣೆಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. 

ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಆರ್‌.ಕೆ. ರಂಜನ್‌ ಸಿಂಗ್‌ ಅವರ ಮನೆಯ ಮೇಲೆ ಗುರುವಾರ ಮಧ್ಯರಾತ್ರಿ ಗುಂಪೊಂದು ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿ ಧ್ವಂಸಗೊಳಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಬಿಸ್ವಜಿತ್ ಅವರ ಮನೆಗೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಯತ್ನಿಸಿದರು. ಸ್ಥಳಕ್ಕೆ ಧಾವಿಸಿದ ಮಣಿಪುರ ಕ್ಷಿಪ್ರಪಡೆಯ ಯೋಧರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಪೋರಂಪತ್‌ ಬಳಿ ಇರುವ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ದೇವಿ ಅವರ ಮನೆಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲು ಮುಂದಾಗಿದ್ದ ಯುವಕರ ಗುಂಪನ್ನು ಸೇನಾ ಪಡೆಗಳು ಚದುರಿಸಿವೆ. ಸಿಂಜೆಮಾಯ್‌ನಲ್ಲಿರುವ ಬಿಜೆಪಿ ಕಚೇರಿಯನ್ನು ಮತ್ತೊಂದು ಉದ್ರಿಕ್ತ ಗುಂಪು ಸುತ್ತುವರಿದಿತ್ತು. ಆದರೆ, ಸಕಾಲದಲ್ಲಿ ಬಂದ ಸೇನಾ ಯೋಧರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗುಂಡಿನ ದಾಳಿ:

ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಚಾಂದಪುರ ಜಿಲ್ಲೆಯ ಕಂಗ್ವಾಯ್‌ನಲ್ಲಿ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಇಂಫಾಲ್‌ನ ಪಶ್ಚಿಮ ಭಾಗದಲ್ಲಿರುವ ಇರಿಂಗ್ಬಮ್ ಠಾಣೆ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರ ಲೂಟಿಗೆ ಯತ್ನಿಸಿದ್ದಾರೆ. ಕಿಡಿಗೇಡಿಗಳು ಮತ್ತು ಭದ್ರತಾ ಪಡೆಗಳ ನಡುವಣ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್‌ ಮತ್ತು ಮಣಿಪುರ ಕ್ಷಿಪ್ರ ಪಡೆಯು ತಡರಾತ್ರಿವರೆಗೆ ದಂಗೆ ನಿಯಂತ್ರಣಕ್ಕೆ ಜಂಟಿ ಕಾರ್ಯಾಚರಣೆ ನಡೆಸಿದವು. ಇಂಫಾಲ್‌ನ ಅರಮನೆ ಕಾಂಪೌಂಡ್‌ ಬಳಿ ಸಾವಿರಕ್ಕೂ ಹೆಚ್ಚು ಜನರಿದ್ದ ಗುಂಪು, ಕಟ್ಟಡಕ್ಕೆ ಬೆಂಕಿ ಹಚ್ಚಲು ಯತ್ನಿಸಿತು. ಈ ವೇಳೆ ಕ್ಷಿಪ್ರಪಡೆ ಯೋಧರು ಕಿಡಿಗೇಡಿಗಳ ಮೇಲೆ ಅಶ್ರುವಾಯು ಸಿಡಿಸಿದರು. ರಬ್ಬರ್‌ ಬುಲೆಟ್‌ಗಳನ್ನು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ರಾಯಲ್‌ ಪ್ಯಾಲೇಸ್‌ ಬಳಿ ಬುಡಕಟ್ಟು ಸಮುದಾಯದ ನಿವೃತ್ತ ಐಎಎಸ್‌ ಅಧಿಕಾರಿಗೆ ಸೇರಿದ ಆಹಾರದ ಗೋದಾಮು ಗುರುವಾರ ರಾತ್ರಿ ಬೆಂಕಿಗಾಹುತಿಯಾಗಿತ್ತು. ಈ ಘರ್ಷಣೆಯ ಬಳಿಕ ಉದ್ರಿಕ್ತರು ಇಂಫಾಲ್‌ನ ವಾಂಗ್ಖೈ, ಪೊರಂಪತ್‌ ಮತ್ತು ತಂಗಪತ್ ಪ್ರದೇಶದ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಸಂಚಾರ ವ್ಯತ್ಯಯಗೊಂಡಿತು.

ಇಂಫಾಲ್‌ನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ರಸ್ತೆಗಳನ್ನು ಬಂದ್‌ ಮಾಡಿ ಸಾರ್ವಜನಿಕ ಕಟ್ಟಡಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರದಿಂದ ಇಲ್ಲಿಯವರೆಗೆ 100 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮುಂಜಾಗ್ರತೆಯಾಗಿ ಸಂಘರ್ಷಕ್ಕೆ ತುತ್ತಾದ 11 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಇಂಟರ್‌ನೆಟ್‌ ಸೇವೆಯನ್ನೂ ಬಂದ್‌ ಮಾಡಿದೆ.

₹10 ಕೋಟಿ ಪರಿಹಾರ ಪ್ಯಾಕೇಜ್‌ಗೆ ಆಗ್ರಹ

ಐಜ್ವಾಲ್‌: ಮಣಿಪುರದಿಂದ ಸುರಕ್ಷತೆ ಅರಸಿ ಮಿಜೋರಾಂಗೆ 11 ಸಾವಿರಕ್ಕೂ ಹೆಚ್ಚು ಜನರು ಬಂದಿದ್ದಾರೆ. ಅವರಿಗೆ ಅಗತ್ಯ ನೆರವು ಕಲ್ಪಿಸುವ ದೃಷ್ಟಿಯಿಂದ ತಕ್ಷಣವೇ ₹ 10 ಕೋಟಿ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು ಎಂದು ಕೇಂದ್ರದ ಮುಂದೆ ಮಿಜೋರಾಂ ಸರ್ಕಾರವು ಬೇಡಿಕೆ ಇಟ್ಟಿದೆ. ಪ್ರವಾಸೋದ್ಯಮ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಜೊತೆಗೆ ಈ ಕುರಿತು ಚರ್ಚಿಸಿದರು. ಬಳಿಕ ಮಾತನಾಡಿದ ಅವರು ‘ಶೀಘ್ರವೇ ಕೇಂದ್ರವು ಪರಿಹಾರ ಪ್ಯಾಕೇಜ್‌ ಘೋಷಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಲ್ಲಿ ಮಹಿಳೆಯರು ಮಕ್ಕಳು ಹಿರಿಯ ನಾಗರಿಕರಿದ್ದಾರೆ. ಸರ್ಕಾರ ಸ್ವಯಂ ಸೇವಾ ಸಂಸ್ಥೆಗಳು ಚರ್ಚ್‌ಗಳು ಅವರಿಗೆ ಆಶ್ರಯ ಒದಗಿಸಿವೆ. ಪರಿಹಾರ ಬಿಡುಗಡೆಯ ಜೊತೆಗೆ ಮಣಿಪುರದಲ್ಲಿ ಶಾಂತಿ ನೆಲೆಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಡಬಲ್‌ ಎಂಜಿನ್ ವಿಫಲ: ಟೀಕೆ

ಮುಂಬೈ: ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಡಬಲ್‌ ಎಂಜಿನ್‌ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಿವಸೇನಾ(ಯುಬಿಟಿ) ಟೀಕಿಸಿದೆ. ‘ಸಂಘಟಿತ ಕುಕಿ ಬಂಡುಕೋರರ ದಾಳಿಗೆ ಸಿಲುಕಿ ಮಣಿಪುರದಲ್ಲಿರುವ ಹಿಂದೂಗಳು ಸಾಯುತ್ತಿದ್ದಾರೆ. ಆದರೆ ತಥಾಕಥಿತ ಹಿಂದುತ್ವ ಪ್ರತಿಪಾದಕರು (ಬಿಜೆಪಿ) ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಅಲ್ಲಿ ಇರುವವರು ಹಿಂದೂಗಳಲ್ಲವೇ’ ಎಂದು ಶಿವಸೇನಾ  ಮುಖವಾಣಿಯಾದ ‘ಸಾಮ್ನಾ‘ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರ ಮತ್ತು ಮಣಿಪುರದಲ್ಲಿ ಬಿಜೆಪಿ ಸರ್ಕಾರವಿದೆ. ಎರಡೂ ಕಡೆ ಒಂದೇ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕವೆಂದು ಅವರೇ ಹೇಳುತ್ತಾರೆ. ಸಂಘರ್ಷ ಪೀಡಿತ ನೆಲದಲ್ಲಿ ಶಾಂತಿ ಪುನರ್‌ ಸ್ಥಾಪನೆಗೆ ಡಬಲ್‌ ಎಂಜಿನ್‌ ಸರ್ಕಾರ ವಿಫಲವಾಗಿದೆ. ಹಿಂಸಾಚಾರದ ಬಗ್ಗೆ ಇಂದಿಗೂ ಮೋದಿ ಮಾತನಾಡುತ್ತಿಲ್ಲ. ಕುಕಿ ಬಂಡುಕೋರರಿಗೆ ಶಸ್ತ್ರಾಸ್ತ್ರಗಳು ಎಲ್ಲಿಂದ ಪೂರೈಕೆಯಾಗುತ್ತವೆ ಎಂಬ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಬಹಿರಂಗಪಡಿಸಬೇಕಿದೆ ಎಂದು ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT