ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶದಲ್ಲಿ ಬಿಸಿಗಾಳಿ: 4 ದಿನಗಳಲ್ಲಿ 57 ರೋಗಿಗಳು ಸಾವು

Published 18 ಜೂನ್ 2023, 15:01 IST
Last Updated 18 ಜೂನ್ 2023, 15:01 IST
ಅಕ್ಷರ ಗಾತ್ರ

ಬಲಿಯಾ (ಉತ್ತರಪ್ರದೇಶ) (ಪಿಟಿಐ): ಕಳೆದ ನಾಲ್ಕು ದಿನಗಳಲ್ಲಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ 57 ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

‘ಜಿಲ್ಲಾ ಆಸ್ಪತ್ರೆಯ ದಾಖಲೆಗಳ ಪ್ರಕಾರ, ಮೃತಪಟ್ಟ 57 ರೋಗಿಗಳ ಪೈಕಿ ಶೇ 40ರಷ್ಟು ರೋಗಿಗಳು ಜ್ವರದಿಂದ ಬಳಲುತ್ತಿದ್ದರೆ, ಶೇ 60ರಷ್ಟು ರೋಗಿಗಳು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಬಲಿಯಾ ಜಿಲ್ಲೆಯಲ್ಲಿ ಬಿಸಿಗಾಳಿಯ ಆಘಾತದಿಂದ ಇದುವರೆಗೆ ಇಬ್ಬರು ಮಾತ್ರ ಸಾವಿಗೀಡಾಗಿ
ದ್ದಾರೆ’ ಎಂದು ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ. ಜಯಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

‘ಆಸ್ಪತ್ರೆಯಲ್ಲಿ ನಿತ್ಯವೂ 125ರಿಂದ 135 ರೋಗಿಗಳು ದಾಖಲಾಗುತ್ತಿದ್ದು, ಸಿಬ್ಬಂದಿ ಮೇಲೆ ಒತ್ತಡವುಂಟಾಗುತ್ತಿದೆ’ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಎಸ್‌.ಕೆ. ಯಾದವ್ ಹೇಳಿದ್ದಾರೆ. 

‘ಜೂನ್ 15ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 154 ರೋಗಿಗಳು ದಾಖಲಾಗಿದ್ದರು. ಇದರಲ್ಲಿ ವಿವಿಧ ಕಾರಣಗಳಿಂದ ಅಂದೇ 23 ರೋಗಿಗಳು ಮೃತಪಟ್ಟಿದ್ದಾರೆ‌. ಜೂನ್ 16ರಂದು 20 ರೋಗಿಗಳು ಹಾಗೂ ಜೂನ್ 17ರಂದು 11 ರೋಗಿಗಳು ಸಾವಿಗೀಡಾಗಿ
ದ್ದಾರೆ. ಮೃತರೆಲ್ಲರೂ 60 ವಯಸ್ಸಿಗಿಂತ ಮೇಲ್ಪಟ್ಟವರು’ ಎಂದೂ ಅವರು ತಿಳಿಸಿದ್ದಾರೆ. 

‘ಆಸ್ಪತ್ರೆಯಲ್ಲಿ ಜೂನ್ 15ರಿಂದ 17ರವರೆಗೆ ಒಟ್ಟು 400 ರೋಗಿಗಳು ದಾಖಲಾಗಿದ್ದು, ನಿತ್ಯವೂ ಏಳರಿಂದ ಒಂಬತ್ತು ಮಂದಿ ಮೃತ‍ಪಡುತ್ತಿ
ದ್ದಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

‘ಲಖನೌದಿಂದ ಆರೋಗ್ಯ ಇಲಾಖೆತ ತಂಡವೊಂದು ಬಲಿಯಾಕ್ಕೆ ಭೇಟಿ ನೀಡಿ, ಪರೀಕ್ಷೆಗಳನ್ನು ನಡೆಸಲಿದ್ದು, ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ’ ಎಂದು ಆರೋಗ್ಯ ಇಲಾಖೆಯ ಆಜಂಘಡದ ವಿಭಾಗೀಯ ಹೆಚ್ಚುವರಿ ನಿರ್ದೇಶಕ ಒ.ಪಿ. ತಿವಾರಿ ಶನಿವಾರ ತಿಳಿಸಿದ್ದರು. 

‘ಬಹುಶಃ ಯಾವುದಾದರೂ ಕಾಯಿಲೆ ಇರಬಹುದು. ಅದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಹೊರಗೆ ಉಷ್ಣಾಂಶ ಕೂಡಾ ಹೆಚ್ಚಿದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಮಧುಮೇಹ ರೋಗಿಗಳು, ಉಸಿರಾಟದ ತೊಂದರೆ ಇರುವವರು ಹಾಗೂ ರಕ್ತದೊತ್ತಡ ಇರುವ ರೋಗಿಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ’ ಎಂದೂ ಅವರು ವಿಶ್ಲೇಷಿಸಿದ್ದಾರೆ. 

‘ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು. ಅವರಿಗೆ ಏರ್ ಕೂಲರ್‌, ಫ್ಯಾನ್ ಮತ್ತು ಎ.ಸಿಗಳ ವ್ಯವಸ್ಥೆ ಮಾಡಬೇಕು. ಇದರ ಜತೆಗೆ ಆಸ್ಪತ್ರೆಯಲ್ಲಿ 15 ಹಾಸಿಗೆಗಳನ್ನು ಹೆಚ್ಚಳ ಮಾಡಿ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಆದೇಶ ಹೊರಡಿಸಿದ್ದಾರೆ. 

ವೈದ್ಯಕೀಯ ಅಧೀಕ್ಷಕ ಬದಲು: 

ಈ ಮಧ್ಯೆ, ಸಾವಿಗೀಡಾದವರ ಕುರಿತು ನಿರ್ಲಕ್ಷ್ಯದ ಹೇಳಿಕೆ ನೀಡಿರುವ ಬಲಿಯಾ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ದಿವಾಕರ್ ಸಿಂಗ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ, ಆಂಜಂಘಡಕ್ಕೆ ಕಳುಹಿಸಲಾಗಿದೆ. ಡಾ.ಎಸ್.ಕೆ. ಯಾದವ್ ಅವರನ್ನು ಮುಖ್ಯ ವೈದ್ಯಕೀಯ ಅಧೀಕ್ಷಕ ಸ್ಥಾನಕ್ಕೆ ಉಸ್ತುವಾರಿ ನೀಡಲಾಗಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಗ್ಯ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು, ಆಸ್ಪತ್ರೆ
ಗಳಿಗೆ ದಾಖಲಾಗುವ ಪ್ರತಿ ರೋಗಿಯ ತಪಾಸಣೆ ನಡೆಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಮುಖ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ.

ಜಾರ್ಖಂಡ್‌: ಜೂನ್ 21ರವರೆಗೆ ಬೇಸಿಗೆ ರಜೆ ಮತ್ತೆ ವಿಸ್ತರಣೆ

ಬಿಸಿಗಾಳಿಯ ವಾತಾವರಣದ ಕಾರಣ ಜಾರ್ಖಂಡ್ ಸರ್ಕಾರವು 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ಜೂನ್ 21ರವರೆಗೆ ಪುನಃ ವಿಸ್ತರಿಸಿದೆ.  ಈ ವರ್ಷ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಮೂರನೇ ಬಾರಿಗೆ ಬೇಸಿಗೆ ರಜೆಯನ್ನು ವಿಸ್ತರಿಸಿದೆ. ಈ ಹಿಂದೆ ಜೂನ್ 11 ಮತ್ತು ಜೂನ್ 14ರಂದು ಸರ್ಕಾರವು ಈ ರಜೆಯನ್ನು ವಿಸ್ತರಿಸಿತ್ತು. ಬೇಸಿಗೆ ರಜೆಯ ಬಳಿಕ ಜೂನ್ 19ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಬೇಕಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT