ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತವನ್ನು ದಾರಿದ್ರ್ಯಕ್ಕೆ ತಳ್ಳಿದ್ದ ಯುಪಿಎ ಸರ್ಕಾರ: ನಿರ್ಮಲಾ ಸೀತಾರಾಮನ್ ಟೀಕೆ

Published 9 ಫೆಬ್ರುವರಿ 2024, 14:03 IST
Last Updated 9 ಫೆಬ್ರುವರಿ 2024, 14:03 IST
ಅಕ್ಷರ ಗಾತ್ರ

ನವದೆಹಲಿ: ‘ಕುಟುಂಬ ಮೊದಲು’ ಎನ್ನುವ ನಿಲುವಿಗೆ ಅಂಟಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಆರ್ಥಿಕತೆಯ ಕೆಟ್ಟ ನಿರ್ವಹಣೆಯಿಂದ 2014ರಲ್ಲಿ ದೇಶವನ್ನು ಭೀಕರ ದಾರಿದ್ರ್ಯಕ್ಕೆ ತಳಿತ್ತು. ಆದರೆ, ಅದು ಈಗ ನರೇಂದ್ರ ಮೋದಿ ಸರ್ಕಾರಕ್ಕೆ ಆರ್ಥಿಕತೆ ನಿರ್ವಹಣೆಯ ಬಗ್ಗೆ ಪಾಠ ಹೇಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

‘ಭಾರತದ ಆರ್ಥಿಕತೆ ಮೇಲಿನ ಶ್ವೇತಪತ್ರ ಮತ್ತು ಭಾರತೀಯರ ಜೀವನದ ಮೇಲೆ ಅದರ ಪರಿಣಾಮ’ದ ಬಗ್ಗೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ಆರಂಭಿಸಿದ ಅವರು, ಮೋದಿ ಸರ್ಕಾರವು ‘ದೇಶ ಮೊದಲು’ ಎನ್ನುವ ನಿಲುವು ಹೊಂದಿದ್ದು, ದೇಶದ ಆರ್ಥಿಕತೆಯನ್ನು ಐದನೇ ಸ್ಥಾನಕ್ಕೆ ಕೊಂಡೊಯ್ದಿದೆ. ಅಲ್ಲದೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ಮಾತು ಮುಂದುವರೆಸಿದ ಅವರು, ‘ಮುಂದಿನ ಪೀಳಿಗೆಗಾಗಿ ಶ್ವೇತಪತ್ರವನ್ನು ತರಲಾಗಿದ್ದು, ಭಾರತದ ಗತವೈಭವವನ್ನು ಮರಳಿ ತರಲು ಪ್ರಧಾನಿ ಮೋದಿ ಎಷ್ಟರ ಮಟ್ಟಿಗೆ ಶ್ರಮಿಸುತ್ತಿದ್ದಾರೆ ಎಂಬುದನ್ನು ಯುವಜನರು ಅರಿಯಬೇಕಾಗಿದೆ’ ಎಂದು ಹೇಳಿದರು.        

‘ಕೋವಿಡ್ ಬಿಕ್ಕಟ್ಟು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತ ಹೆಚ್ಚು ವಿನಾಶಕಾರಿಯಾಗಿತ್ತು. ಆದರೆ, ಮೋದಿ ಸರ್ಕಾರವು ಅದನ್ನು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ, ಬದ್ಧತೆಯಿಂದ ಎದುರಿಸಿ, ಜನರಿಗೆ ಉಚಿತವಾಗಿ ಲಸಿಕೆಗಳನ್ನು ಪೂರೈಸಿತು. 2008ರಲ್ಲಿ ಯುಪಿಎ ಸರ್ಕಾರವು ‘ಶುದ್ಧ’ ಮನಸ್ಸಿನಿಂದ ಬಿಕ್ಕಟ್ಟನ್ನು ಎದುರಿಸಲಿಲ್ಲ’ ಎಂದು ಅವರು ಆರೋಪಿಸಿದರು.

ಯುಪಿಎ ಅವಧಿಯ ಕಲ್ಲಿದ್ದಲು ಹಗರಣದಿಂದಾಗಿ ₹1.86 ಲಕ್ಷ ಕೋಟಿ ನಷ್ಟವಾಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದ ಅವರು, ಸುಪ್ರೀಂ ಕೋರ್ಟ್ 214 ಕಲ್ಲಿದ್ದಲು ನಿಕ್ಷೇಪಗಳ ಅನುಮತಿ ರದ್ದು ಮಾಡಿದ್ದನ್ನು ಸ್ಮರಿಸಿದರು.

‘ಮೋದಿ ಸರ್ಕಾರವು ಪಾರದರ್ಶಕವಾಗಿ ಕಲ್ಲಿದ್ದಲು ಹರಾಜು ನಡೆಸಿತು. ಅದರಿಂದ ಕಲ್ಲಿದ್ದಲು ಉತ್ಪಾದನೆಯು 567 ಮೆಟ್ರಿಕ್‌ ಟನ್‌ನಿಂದ 900 ಮೆಟ್ರಿಕ್ ಟನ್‌ಗೆ ಏರಿಕೆಯಾಯಿತು’ ಎಂದು ತಿಳಿಸಿದರು.

‘ಶ್ವೇತಪತ್ರವು ಹಿಂದಿನ ಯುಪಿಎ ಸರ್ಕಾರಕ್ಕೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ’ ಎಂದು ಟಿಎಂಸಿ ಸದಸ್ಯ ಸುಗತ ರಾಯ್ ಮತ್ತು ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಆಕ್ಷೇಪ ವ್ಯಕ್ತಪಡಿಸಿದರು.

ಪದೇ ಪದೇ ವಿರೋಧ ಪಕ್ಷಗಳು ತಮ್ಮ ಮಾತಿಗೆ ಅಡ್ಡಿಪಡಿಸಿದಾಗ, ‘ನಿಮಗೆ ಧೈರ್ಯವಿದ್ದರೆ ಅಡ್ಡಿಪಡಿಸುವ ಬದಲು ನೀವು ನನಗೆ ಉತ್ತರ ಕೊಡಿ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT