ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಾಜಕಾರಣಕ್ಕೆ ಮೆರುಗು ತಂದ ಮುತ್ಸದ್ದಿ

Last Updated 17 ಆಗಸ್ಟ್ 2018, 9:59 IST
ಅಕ್ಷರ ಗಾತ್ರ

ಭಾರತದ ರಾಜಕಾರಣದ ಮಟ್ಟಿಗೆ ಇದು ಅಪರೂಪ. ತನ್ನ ಪಕ್ಷದ ನಾಯಕನನ್ನು ಪಕ್ಷದ ಕಾರ್ಯಕರ್ತರು ಹೊಗಳುವುದು, ಕೊಂಡಾಡುವುದು ಸಾಮಾನ್ಯ ಆದರೆ ಪ್ರತಿಪಕ್ಷದವರು ಗೌರವಿಸುವುದು, ಮೆಚ್ಚುಗೆಯ ಮಾತನ್ನಾಡುವುದು ದುರ್ಲಭ. ವಾಜಪೇಯಿ ಅವರ ವಿಷಯದಲ್ಲಿ ಅದು ಸಾಧ್ಯವಾಯಿತು. ಪ್ರಥಮ ಪ್ರಧಾನಿ ನೆಹರೂ ಸಂಸತ್ತಿನಲ್ಲಿ ಆಗಷ್ಟೇ ಅರಳುತ್ತಿದ್ದ ಯುವ ಪ್ರತಿಭೆಯ ಭುಜ ತಟ್ಟಿದ್ದರು. ಮಾಜಿ ಪ್ರಧಾನಿ ಚಂದ್ರಶೇಖರ್ ಕೊನೆಯವರೆಗೂ ’ಗುರೂಜಿ’ ಎಂದೇ ಸಂಬೋಧಿಸಿಸುತ್ತಿದ್ದರು. ಪಿ.ವಿ. ನರಸಿಂಹರಾಯರು 1994ರಲ್ಲಿ ’ಉತ್ತಮ ಸಂಸದೀಯ ಪಟು’ ಎಂದು ಅವರನ್ನು ಪುರಸ್ಕರಿಸುವಾಗ 'ಭಾರತೀಯ ಸಂಸದೀಯ ಚರಿತ್ರೆಗೆ ವಿಶೇಷ ಮೆರುಗು ನೀಡಿದ ನಾಯಕ ವಾಜಪೇಯಿ. ನನ್ನ ರಾಜಕೀಯ ಗುರು' ಎಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ನಿಕಟಪೂರ್ವ ಪ್ರಧಾನಿ ಮನಮೋಹನ್ ಸಿಂಗ್ ವಾಜಪೇಯಿ ’ಭಾರತದ ಸಮಕಾಲೀನ ರಾಜಕಾರಣದ ಭೀಷ್ಮ ಪಿತಾಮಹ’ ಎಂದು ಕರೆದಿದ್ದರು.

ಬಹುಶಃ ನೆಹರೂ ನಂತರ ಭಾರತದ ರಾಜಕಾರಣದಲ್ಲಿ ಬಹುಮುಖ ಪ್ರತಿಭೆಯ, ಮೇಧಾವಿ ರಾಜಕಾರಣಿ ಎಂದು ಗುರುತಿಸಬಹುದಾದರೆ ಅದು ವಾಜಪೇಯಿ ಅವರನ್ನು ಮಾತ್ರ. ಯಾವುದೇ ರಾಜಕೀಯ ಹಿನ್ನಲೆಯಿಲ್ಲದ ಓರ್ವ ಸಾಮಾನ್ಯ ಶಾಲಾ ಮಾಸ್ತರ್ ಮಗನಾಗಿ ತನ್ನ ಪ್ರತಿಭೆ ಮತ್ತು ಚಾಣಾಕ್ಷತನದಿಂದಲೇ ರಾಷ್ಟ್ರರಾಜಕಾರಣದಲ್ಲಿ ವಾಜಪೇಯಿ ಬೆಳೆದ ಪರಿಯೇ ಒಂದು ಅಚ್ಚರಿ.

ಗ್ವಾಲಿಯರ್ ಮಹಾರಾಜ ಜೀವಾಜಿರಾವ್ ಸಿಂಧಿಯಾರ ಸ್ಕಾಲರ್ಶಿಪ್ ನೆರವಿನಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಾಜಪೇಯಿ ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ವಾಕ್ಚಾತುರ್ಯದಿಂದಲೇ ಬಹುಮನ್ನಣೆ ಗಳಿಸಿದ್ದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಳದಲ್ಲಿ ಹೆಚ್ಚಿನ ಪೋಷಣೆ ದೊರೆತು, ಶ್ಯಾಮ್‍ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರ ಗರಡಿಯಲ್ಲಿ ವ್ಯಕ್ತಿತ್ವ ವಿಸ್ತಾರವಾದ ಮೇಲೆ ಸಂಘದ ಜವಾಬ್ದಾರಿಗಳನ್ನು ಹೆಗಲೇರಿಸಿಕೊಂಡವರು. ರಾಷ್ಟ್ರಧರ್ಮ, ಸ್ವದೇಶ್, ಪಾಂಚಜನ್ಯ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ’ವ್ಯಕ್ತಿಗಿಂತ ಧ್ಯೇಯ, ಧ್ಯೇಯಕ್ಕಿಂತ ರಾಷ್ಟ್ರ ಮುಖ್ಯ’ ಎನ್ನುವುದು ಆಗಲೇ ಮೈಗೂಡಿತ್ತು.

ಶ್ಯಾಮ್‍ಪ್ರಸಾದ್ ಮುಖರ್ಜಿ ಅನುಮಾನಾಸ್ಪದವಾಗಿ ಸಾವಿಗೀಡಾದ ಬಳಿಕ, ದೀನದಯಾಳ್ ಉಪಾಧ್ಯಾಯರ ನಂತರದ ದಿನಗಳಲ್ಲಿ ರಾಜಕೀಯವಾಗಿ ಮುಖ್ಯಭೂಮಿಕೆಗೆ ಬಂದ ವಾಜಪೇಯಿ ಜನಮಾನಸದಲ್ಲಿ ಬೆಳೆಯುತ್ತಾ ಹೋದರು. ಮುಖ್ಯವಾಗಿ ವಾಜಪೇಯಿ ತೆರೆದ ಮನಸ್ಸಿನವರಾದ್ದರಿಂದಲೇ ಅವರ ಬೆಳವಣಿಗೆಯೂ ಏರುಗತಿಯಲ್ಲೇ ಸಾಗಿತು. ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದ ನಡೆಯನ್ನು ವಿರೋಧಿಸುವುದಕ್ಕೆಂದೇ ವಿರೋಧಿಸಿದೆ ತುಲನಾತ್ಮಕವಾಗಿ ಚಿಂತಿಸಿ ವಾದ ಮಂಡಿಸುತ್ತಿದ್ದ ಯುವ ವಾಜಪೇಯಿಯನ್ನು ಕಾಂಗ್ರೆಸ್ ನಾಯಕರೂ ಮೆಚ್ಚುತ್ತಿದ್ದರು. ಮೊದಲಬಾರಿಗೆ ಸಂಸತ್ತಿನಲ್ಲಿ ವಾಜಪೇಯಿ ಮಾತನಾಡಿದಾಗ ನೆಹರೂ ಶ್ಲಾಘಿಸಿದ್ದರು. ವಾಜಪೇಯಿಯವರ ವಾಕ್ಚಾತುರ್ಯಕ್ಕೆ ಮರುಳಾಗಿದ್ದ ಡಾ.ರಾಜೇಂದ್ರ ಪ್ರಸಾದ್ ರಾಜ್ಯಸಭೆಯಲ್ಲಿ ಮೊದಲ ಸಾಲಿನಲ್ಲಿ ವಾಜಪೇಯಿಯವರಿಗೆ ಸ್ಥಾನ ಮೀಸಲಿರಿಸಿದ್ದರು.

ಅರವತ್ತರ ದಶಕದಲ್ಲಿ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿದ್ದ ಡಾಗ್ ಹಾಮರ್ಕಲ್ಡ್‍ರಿಗೆ ವಾಷಿಂಗ್ಟನ್‌ನ ಭಾರತೀಯ ದೂತಾವಾಸ ಕಛೇರಿಯಲ್ಲಿ ನೆಹರೂ ವಾಜಪೇಯಿಯನ್ನು ’ಭಾರತದ ಪ್ರಧಾನಿಯಾಗಬಲ್ಲ ಯುವ ಪ್ರತಿಭೆ’ ಎಂದು ಪರಿಚಯಿಸಿದ್ದರು. ವಿರೋಧ ಪಕ್ಷದಲ್ಲಿದ್ದರೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ನೆಹರೂರ ಪ್ರಭಾವ ವಾಜಪೇಯಿ ಮೇಲಾಗಿತ್ತು. ವಾಜಪೇಯಿ ಲೋಕಸಭೆಯಲ್ಲಿರಬೇಕು ಎಂಬುದು ನೆಹರು ಮನದಿಂಗಿತವಾಗಿತ್ತು. ವಾಜಪೇಯಿ ಸ್ಪರ್ಧಿಸಿದ್ದ ಕ್ಷೇತ್ರಕ್ಕೆ ತಾವು ಚುನಾವಣಾ ಪ್ರಚಾರಕ್ಕೆ ಹೋಗದೇ ನೆಹರು ತಪ್ಪಿಸಿಕೊಳ್ಳುತ್ತಿದ್ದರು. ಇಬ್ಬರಿಗೂ ವಿದೇಶಾಂಗ ವ್ಯವಹಾರ ಸಮಾನ ಆಸಕ್ತಿಯ ವಿಷಯವಾಗಿತ್ತು. ನೆಹರು ಅವರ ಪಂಚಶೀಲ ತತ್ವಗಳ ಬಗ್ಗೆ ವಾಜಪೇಯಿ ಟೀಕಿಸಿ ಮಾತನಾಡಿದರೂ ನೆಹರೂ ಅದನ್ನು ಮೆಚ್ಚಿಕೊಂಡಿದ್ದರು.

ರಾಷ್ಟ್ರಕ್ಕೆ ಹೊರಗಿನಿಂದ ಸವಾಲು ಎದುರಾದಾಗ ಪಕ್ಷಭೇದ ಮರೆತು ಸರ್ಕಾರದೊಂದಿಗೆ ಹೆಜ್ಜೆಹಾಕಬೇಕು ಎಂಬುದು ವಾಜಪೇಯಿ ನಿಲುವಾಗಿತ್ತು. ಚೀನಾ ಆಕ್ರಮಣದ ಸಂದರ್ಭವಿರಲಿ, ಭಾರತ ಪಾಕ್ ಯುದ್ಧದ ಸಮಯವಿರಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧ ಪಕ್ಷದ ನಾಯಕನಾಗಿ ಬೆಂಬಲವಾಗಿ ನಿಂತರು. ವಾಜಪೇಯಿ ಅವರ ಈ ಗುಣವನ್ನು ಮೆಚ್ಚಿಕೊಂಡಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ವಿವರಿಸಲು ಕಳುಹಿಸಿದ ಭಾರತೀಯ ನಿಯೋಗದ ನೇತೃತ್ವವನ್ನು ವಾಜಪೇಯಿಯವರಿಗೆ ನೀಡಿದ್ದರು.

1962ರಲ್ಲಿ ಸಿಲೋನ್ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದ್ದ ಪ್ರಧಾನಿ ನೆಹರೂ ’ವಿಜ್ಞಾನದ ಹೊರತು ಯಾವುದೇ ಸಮಾಜಕ್ಕೆ ಭವಿಷ್ಯವಿಲ್ಲ. ಆದರೆ ವಿಜ್ಞಾನ ಅಧ್ಯಾತ್ಮದ ಅಂತಃಪ್ರೇರಣೆಯ ನಿಯಂತ್ರಣ ಮೀರಿದರೆ ಅಂತಹ ಸಮಾಜಕ್ಕೂ ಭವಿಷ್ಯವಿಲ್ಲ’ ಎಂದಿದ್ದರು. ಇದು ವಾಜಪೇಯಿ ನಿಲುವು ಕೂಡ ಆಗಿತ್ತು. 1964ರಲ್ಲಿ ನೆಹರೂ ತೀರಿಕೊಳ್ಳುವ ಸ್ವಲ್ಪ ಮೊದಲು ಶೇಕ್ ಅಬ್ದುಲ್ಲಾರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಪಾಕ್ ಅಧ್ಯಕ್ಷ ಆಯುಬ್ ಖಾನ್‍ರೊಂದಿಗೆ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಕಳುಹಿಸುವ ತೀರ್ಮಾನವನ್ನು ನೆಹರೂ ತೆಗೆದುಕೊಂಡಾಗ ವಾಜಪೇಯಿ ನೆಹರೂರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಭಿನ್ನಾಭಿಪ್ರಾಯ, ವಾಕ್ಸಮರ ಎಂದಿಗೂ ವ್ಯಕ್ತಿಗತವಾಗಲಿಲ್ಲ.

ನೆಹರೂ ನಿಧನರಾದಾಗ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಭಾಷಣ ಮಾಡಿದ ವಾಜಪೇಯಿ ’ಕನಸೊಂದು ಭಗ್ನಗೊಂಡಿದೆ. ಕವಿತೆಯೊಂದು ಕೊನೆಯಾಗಿದೆ. ಜ್ಯೋತಿಯೊಂದು ಅನಂತದಲ್ಲಿ ಲೀನವಾಗಿದೆ. ಅದು ಹಸಿವು ಮತ್ತು ಭೀತಿಮುಕ್ತ ಪ್ರಪಂಚದ ಕನಸು, ಗುಲಾಬಿಯ ಕಂಪು ಮತ್ತು ಗೀತೆಯ ಮಾರ್ದನಿಯ ಕವಿತೆ, ಇರುಳಿಡೀ ಉರಿದು ಅಂಧಕಾರದೊಂದಿಗೆ ಹೋರಾಡಿ, ದಾರಿ ತೋರಿದ ಜ್ಯೋತಿ. ಇಂದು ತಾಯಿ ಭಾರತಿ ಶೋಕತಪ್ತೆ- ತನ್ನ ಮುದ್ದು ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ. ಮನುಷ್ಯತ್ವ ಮರುಗಿದೆ- ಆರಾಧಕ ಇಲ್ಲವಾಗಿದ್ದಾನೆ. ಶಾಂತಿ ತಳಮಳಿಸಿದೆ - ರಕ್ಷಕ ಗತಿಸಿದ್ದಾನೆ. ಕೊನೆಗೂ ತೆರೆಬಿದ್ದಿದೆ. ವಿಶ್ವ ವೇದಿಕೆಯ ಪ್ರಧಾನ ಪಾತ್ರಧಾರಿ ತನ್ನ ಪಾತ್ರ ಮುಗಿಸಿದ್ದಾನೆ’ ಎಂದು ನೆಹರೂರನ್ನು ಬಣ್ಣಿಸಿದ್ದರು.

ನೆಹರೂರ ಬಗ್ಗೆ ಆಸ್ಥೆಯಿಂದ ಮಾತನಾಡುತ್ತಿದ್ದ ವಾಜಪೇಯಿ ಅವರನ್ನು, ಮೊದಲು ಜನತಾ ಪಾರ್ಟಿಯಲ್ಲಿದ್ದು ನಂತರ ವಾಜಪೇಯಿ ಸರ್ಕಾರದ ಪತನಕ್ಕೆ ಕಾರಣರಾದ, ಈಗ ಭಾಜಪಾದಲ್ಲಿರುವ ಸುಬ್ರಹ್ಮಣ್ಯಂ ಸ್ವಾಮಿ ’ವಾಜಪೇಯಿ ನೆಹರೂ ಪಡಿಯಚ್ಚು’ ಎಂದೇ ಕಟಕಿಯಾಡುತ್ತಿದ್ದರು. ಗುಣಕ್ಕೆ ಮತ್ಸರ ತೋರದ ವಾಜಪೇಯಿ, ಬಾಂಗ್ಲಾ ಯುದ್ಧದಲ್ಲಿ ಇಂದಿರಾ ಗಾಂಧಿ ತೋರಿದ ಕುಶಲಮತಿ, ದಿಟ್ಟತನವನ್ನು ಮೆಚ್ಚಿ ಇಂದಿರಾರನ್ನು ಸಂಸತ್ತಿನಲ್ಲಿ ’ದುರ್ಗಾ’ ಎಂದು ಕೊಂಡಾಡಿದ್ದರು. ಇದರಿಂದಾಗಿ ತಮ್ಮ ಪಕ್ಷದವರಿಂದಲೇ ಮೂದಲಿಕೆಗೆ ಒಳಗಾಗಿದ್ದರು.

1977ರಲ್ಲಿ ಮೂವತ್ತು ವರ್ಷಗಳ ಕಾಂಗ್ರೆಸ್ ಆಡಳಿತ ಕೊನೆಯಾಗಿತ್ತು. ಮೊರಾರ್ಜಿಯವರ ಸರ್ಕಾರ ರಚನೆಯಾಗಿತ್ತು. ನೂತನ ಸರ್ಕಾರವನ್ನು, ಮಂತ್ರಿಗಳನ್ನು ಓಲೈಸುವ ಸಲುವಾಗಿ ಅಧಿಕಾರಿ ವರ್ಗ ಹಳೇ ಸರ್ಕಾರದ ಕುರುಹುಗಳನ್ನು ಸಚಿವಾಲಯದಿಂದ ತರಾತುರಿಯಲ್ಲಿ ಮುಕ್ತಗೊಳಿಸುವ ಕಾರ್ಯಕ್ಕಿಳಿಯಿತು. ವಿದೇಶಾಂಗ ಮಂತ್ರಿ ವಾಜಪೇಯಿ ತಮ್ಮ ಕಾರ್ಯಾಲಯಕ್ಕೆ ಭೇಟಿಕೊಟ್ಟಾಗ ಆಶ್ಚರ್ಯ ಕಾದಿತ್ತು. ಅಲ್ಲಿದ್ದ ನೆಹರೂ ಭಾವಚಿತ್ರ ಕಣ್ಮರೆಯಾಗಿತ್ತು. ಸಿಟ್ಟಾದ ವಾಜಪೇಯಿ ಅಧಿಕಾರಿಯನ್ನು ಕರೆದು ’ಇಲ್ಲಿ ಪಂಡಿತ್‍ಜೀ ಪೋಟೋ ಇರುತ್ತಿತ್ತು. ನಾನು ಈ ಹಿಂದೆ ಭೇಟಿಕೊಟ್ಟಾಗ ಗಮನಿಸಿದ್ದೆ. ಅದು ಕೂಡಲೇ ಆ ಸ್ಥಳದಲ್ಲಿ ಇರಬೇಕು’ ಎಂದು ಆದೇಶಿಸಿದ್ದರು. ಇದು ವಾಜಪೇಯಿ ನೆಹರೂರನ್ನು ಗೌರವಿಸುತ್ತಿದ್ದ ಪರಿಗೆ ಒಂದು ಉದಾಹರಣೆ.

ಇಂದು ಭಾಜಪಾ ಹೆಮ್ಮರವಾಗಿ ಬೆಳೆದಿದ್ದರೆ ಅದಕ್ಕೆ ಕಾರಣವಾದವರು ಇಬ್ಬರು. ಭಾಜಪಾದ ನೊಗವನ್ನು ಹೆಗಲಿಗೇರಿಸಿಕೊಂಡು ಶಕ್ತಿಮೀರಿ ಎಳೆದವರು ವಾಜಪೇಯಿ ಮತ್ತು ಅಡ್ವಾಣಿ. ಬಾಬ್ರಿ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ ಭಾಜಪಾ ವೇಗವಾಗಿ ಬೆಳೆಯಿತಾದರೂ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಪ್ರಾಪ್ತ್ರವಾಗಲಿಲ್ಲ. ಭಾಜಪಾವನ್ನು ಇತರ ಪಕ್ಷಗಳು ಅದರ ಹಿಂದೂ ಕೇಂದ್ರಿತ ನಿಲುವುಗಳಿಂದಾಗಿಯೇ ಅಸ್ಪೃಶ್ಯ ಎಂಬಂತೆ ಕಾಣುತ್ತಿದ್ದವು. ಅಧಿಕಾರಕ್ಕೇರಲು ಭಾಜಪಾ ಹೊಸರೂಪವೊಂದನ್ನು ತಳೆಯಬೇಕಾದ ಅನಿವಾರ್ಯತೆ ಒದಗಿತು. ಭಾಜಪಾದ ರಾಷ್ಟ್ರೀಯ ಕಾರ್ಯಕಾರಿಣಿ ವಾಜಪೇಯಿಗೆ ’ವಿಕಾಸ ಪುರುಷ’ ಎಂಬ, ಅಡ್ವಾಣಿಗೆ ’ಲೋಹ ಪುರುಷ’ ಎಂಬ ಹಣೆಪಟ್ಟಿ ಹಚ್ಚಿತು. ಅದು ವಾಜಪೇಯಿ ಮತ್ತು ಅಡ್ವಾಣಿ ಅವರನ್ನು ಕ್ರಮವಾಗಿ ನೆಹರೂ ಮತ್ತು ಪಟೇಲ್ ಸ್ಥಾನದಲ್ಲಿಟ್ಟು ಹೊಸ ರೂಪ ತಳೆಯುವ ಪ್ರಯತ್ನವಾಗಿತ್ತು.

ಅಧಿಕಾರದ ಕನಸು 1996ರಲ್ಲಿ ನನಸಾದರೂ 13 ದಿನಗಳಲ್ಲೇ ಸರ್ಕಾರ ಸಂಕಷ್ಟಕ್ಕೆ ಸಿಲುಕಿತು. ವಾಜಪೇಯಿ ಚಾಣಾಕ್ಷತನದಿಂದ ಆ ಪರಿಸ್ಥಿತಿಯನ್ನು ಬಳಸಿಕೊಂಡರು. ವಿಶ್ವಾಸಮತದ ಚರ್ಚೆ ಇಡೀ ದೇಶದ ಗಮನ ಸೆಳೆದಿತ್ತು. ವಾಜಪೇಯಿ ಅಮೋಘ ಭಾಷಣ ಮಾಡಿದರು. ಅದು ಸಂಸತ್ತಿನಲ್ಲಿ ವಿಶ್ವಾಸ ಮತ ಗಳಿಸಲು ಸಹಕಾರಿಯಾಗಲಿಲ್ಲ. ಆದರೆ ನೇರಪ್ರಸಾರದಲ್ಲಿ ಭಾಷಣ ವೀಕ್ಷಿಸುತ್ತಿದ್ದ ಅಸಂಖ್ಯ ಜನರ ಮನವನ್ನು ವಾಜಪೇಯಿ ಗೆದ್ದಾಗಿತ್ತು. ವಾಜಪೇಯಿ ಸರ್ಕಾರ ಪತನಗೊಂಡಾಗ ಚಿಂತಕ ಮುಲ್ಕರಾಜ್ ಆನಂದ್ ವಾಜಪೇಯಿಯವರಿಗೆ ಬರೆದ ಬಹಿರಂಗ ಪತ್ರದಲ್ಲಿ ’ವಾಜಪೇಯಿ ಅವರನ್ನು ಆಧುನಿಕ ಭಾರತದ ದುರಂತ ನಾಯಕ’ ಎಂದು ಕರೆದಿದ್ದರು. ಪ್ರಜಾಪ್ರಭುತ್ವದ ಸಂಖ್ಯೆಯ ಮೇಲಾಟದಲ್ಲಿ ಮಾನ್ಯತೆ ಪ್ರತಿಭೆಗಲ್ಲ ಎಂಬುದು ವಾಜಪೇಯಿ ವಿಷಯದಲ್ಲಿ ಸಾಬೀತಾಗಿತ್ತು.

1998ರ ಚುನಾವಣೆಯಲ್ಲಿ ಭಾಜಪಾಕ್ಕೆ ಅತಿಹೆಚ್ಚು ಸೀಟು ಬಂದರೂ ಬಹುಮತ ಕೈಗೆಟುಕಲಿಲ್ಲ. ಆಗ ಸಮ್ಮಿಶ್ರ ಸರ್ಕಾರ ಎಂಬ ಹೊಸ ರಾಜಕೀಯ ಅಧ್ಯಾಯ ಶುರುವಾಯಿತು. ಎನ್‍ಡಿಎ ಹುಟ್ಟಿಕೊಂಡಿತು. ಎನ್‍ಡಿಎ ಜೊತೆಗಿದ್ದ ಪಕ್ಷಗಳನ್ನು ಸಂಭಾಳಿಸುವುದು ಸುಲಭವಾಗಿರಲಿಲ್ಲ. ಭಾಜಪಾದ ತತ್ವ ಸಿದ್ಧಾಂತಗಳಿಗೂ, ಅಂಗ ಪಕ್ಷಗಳ ಸಿದ್ಧಾಂತಗಳಿಗೂ ಸಾಮ್ಯವಿರಲಿಲ್ಲ. ಸರ್ಕಾರದಲ್ಲಿ ಜಾತ್ಯತೀತರೆಂದು ಬಿಂಬಿಸಿಕೊಂಡ ಚಂದ್ರಬಾಬು ನಾಯ್ಡು ಇದ್ದರು. ದಲಿತ ನಾಯಕಿ ಮಾಯಾವತಿ, ಬ್ರಾಹ್ಮಣ ವಿರೋಧಿ ಚಳುವಳಿಯಿಂದ ಬಂದ ಕರುಣಾನಿಧಿ, ಸಮಾಜವಾಧಿ ಜಾರ್ಜ್ ಫರ್ನಾಂಡಿಸ್, ಹಟಮಾರಿ ಎನಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ಈ ಎಲ್ಲರನ್ನೂ ಒಂದು ಸರ್ಕಾರವಾಗಿ ಬೆಸೆದ ಅಂಶ ಎಂದರೆ ಅದು ’ವಾಜಪೇಯಿ’.

ವಾಜಪೇಯಿ, ಭಾಜಪಾದ ಪ್ರಖರ ಹಿಂದುತ್ವವನ್ನು ಮಂದವಾಗಿಸಿ ಅದಕ್ಕೆ ಗಾಂಧಿ ಸಮಾಜವಾದವನ್ನು, ಮಾನವೀಯ ನೆಲೆಯ ಉದಾರವಾದವನ್ನು ಬೆರೆಸಿ ಹದವಾಗಿಸಿ ಸರ್ಕಾರ ನಡೆಸಿದರು. ಅನೇಕ ಮಹತ್ವದ ಹೆಜ್ಜೆಗಳನ್ನು ಇಟ್ಟರು. ಹಿರಿಯಣ್ಣನ ಬೆದರಿಕೆಗೆ ಬಗ್ಗದೇ ಅಣ್ವಸ್ತ್ರ ಪರೀಕ್ಷೆಗೆ ಮುಂದಾದರು. ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದಾಗ ’ಆರ್ಥಿಕ ಪ್ರತಿಬಂಧಕ್ಕೆ ಹೆದರಿ ನಾವು ನಿಂತಲ್ಲೇ ನಿಲ್ಲಲು ಸಾಧ್ಯವಿಲ್ಲ. ಮುಂದೆ ಹೆಜ್ಜೆ ಇರಿಸಲೇಬೇಕು’ ಎಂದು ಉತ್ತರಿಸಿದರು. ವಿದೇಶಾಂಗ ವ್ಯವಹಾರದ ಬಗ್ಗೆ ಒಳನೋಟವಿದ್ದ ವಾಜಪೇಯಿ ’ಸ್ನೇಹಿತರನ್ನು ಬದಲಾಯಿಸಬಹುದು, ಆದರೆ ನೆರೆಹೊರೆಯವರನ್ನಲ್ಲ ಎಂದವರೇ ಸಂಬಂಧ ಸುಧಾರಣೆಗೆ, ಕಾಶ್ಮೀರ ಸಮಸ್ಯೆಗೆ ಇತಿಶ್ರೀ ಹಾಡಲು ಪಾಕಿಸ್ತಾನದೊಂದಿಗೆ ಸ್ನೇಹಹಸ್ತ ಚಾಚಿದರು. ಭಾರತದ ಉದಾರ ನಡೆಗೆ ಪಾಕಿಸ್ತಾನ ದ್ರೋಹ ಬಗೆದಾಗ ನಡೆದದ್ದು ಕಾರ್ಗಿಲ್ ಯುದ್ಧ. ಅದನ್ನು ಪ್ರಧಾನಿಯಾಗಿ ನಿಭಾಯಿಸುವಲ್ಲಿ ವಾಜಪೇಯಿ ತೋರಿದ ದಿಟ್ಟತನ ಉಲ್ಲೇಖಾರ್ಹ.

ಯಶವಂತ್ ಸಿನ್ಹರನ್ನು ಜೊತೆಗಿಟ್ಟುಕೊಂಡ ವಾಜಪೇಯಿ ಆರ್ಥಿಕ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಿದರು. ದೂರ ಸಂಪರ್ಕ, ನಗರೀಕ ವಿಮಾನಯಾನ, ಬ್ಯಾಂಕಿಂಗ್, ಇನ್ಸೂರೆನ್ಸ್, ಸಾರ್ವಜನಿಕ ಉದ್ದಿಮೆಗಳು, ವಿದೇಶಿ ವ್ಯಾಪಾರ ಮತ್ತು ಬಂಡವಾಳ, ಸಣ್ಣ ಕೈಗಾರಿಕೆ, ಹೆದ್ದಾರಿ, ಗ್ರಾಮೀಣ ರಸ್ತೆಗಳು, ಮೂಲಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ತಂದರು. ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ವಾಜಪೇಯಿ ಸ್ಪಷ್ಟ ಸೂಚನೆ ನೀಡಿದ್ದರು. ಹಾಗಿದ್ದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ’ಅಟಲ್ ಗ್ರಾಮ ಸಡಕ್ ಯೋಜನ” ಎಂದು ಹೆಸರಿಸಲಾಗಿತ್ತು. ಆದರೆ ವಾಜಪೇಯಿ ಅದನ್ನು ’ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನ’ ಎಂದು ಬದಲಾಯಿಸಿದರು. ವಾಜಪೇಯಿ ಜನರ ಮನವನ್ನು ಗೆದ್ದಿದ್ದು ಇಂತಹ ನಡೆಗಳಿಂದ.

ವಾಜಪೇಯಿ ಅವರ ವೈಶಿಷ್ಟ್ಯವೆಂದರೆ ಅವರ ವಾಕ್ಚಾತುರ್ಯ, ನೀಡುತ್ತಿದ್ದ ತೀಕ್ಷ ಪ್ರತಿಕ್ರಿಯೆಗಳು ಮತ್ತು ಹಾಸ್ಯಪ್ರಜ್ಞೆ. ಖುಷವಂತ್ ಸಿಂಗ್ ತಮ್ಮ ಅಂಕಣದಲ್ಲಿ ವಾಜಪೇಯಿ ಹೆಸರು ಪ್ರಸ್ತಾಪವಾದಗಲೆಲ್ಲಾ ’ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ’ ಎಂದು ಬರೆಯುತ್ತಿದ್ದರು. ಈ ಬಗ್ಗೆ ವಾಜಪೇಯಿಯವರನ್ನು ಪ್ರಶ್ನಿಸಿದಾಗ ಆ ಅಭಿಪ್ರಾಯದಲ್ಲೇ ದೋಷವಿದೆ. ಹಣ್ಣು ಚೆನ್ನಾಗಿದ್ದ ಮೇಲೆ ಮರವೂ ಚೆನ್ನಾಗಿರಲೇ ಬೇಕು. ಕೆಟ್ಟ ಮರದ ಹಣ್ಣು ಚೆನ್ನಾಗಿರಲು ಹೇಗೆ ಸಾಧ್ಯ. ನಾನು ಒಳ್ಳೆಯ ವ್ಯಕ್ತಿಯಾಗಿದ್ದರೆ, ನಾನು ಒಳ್ಳೆಯ ಪಕ್ಷವನ್ನೇ ಆಯ್ದುಕೊಂಡಿರುತ್ತೇನೆ. ಕೆಟ್ಟ ಪಕ್ಷವನ್ನು ಆಯ್ದುಕೊಂಡವನು ಒಳ್ಳೆಯ ವ್ಯಕ್ತಿಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದರು.

ವಾಜಪೇಯಿ ತಿರುಗೇಟು ನೀಡಿದರೆ ಅದರಲ್ಲಿ ತೀಕ್ಷತೆ ಇರುತ್ತಿತ್ತು. ಒಮ್ಮೆ ಇಂದಿರಾಗಾಂಧಿ ಗುಜರಾತಿನ ಚುನಾವಣಾ ಸಭೆಯೊಂದರಲ್ಲಿ ಮಾತನಾಡುತ್ತಾ ’ನಾನು ಉತ್ತರಪ್ರದೇಶದ ಮಗಳು ಮತ್ತು ಗುಜರಾತಿನ ಸೊಸೆ’ ಆ ಕಾರಣಕ್ಕಾಗಿ ನೀವು ಮತ ನೀಡಬೇಕು ಎಂದಿದ್ದರು. ಇದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದ ವಾಜಪೇಯಿ ’ಇಂದಿರಾ ಗಾಂಧಿಯವರು ಮತ್ತೊಂದನ್ನು ನಿಮ್ಮ ಮುಂದೆ ಹೇಳಿಲ್ಲ. ಅವರು ಇಟಲಿಯ ಅತ್ತೆ ಕೂಡ’ ಎಂದು ತಿರುಗೇಟು ನೀಡಿದ್ದರು. ಮತ್ತೊಮ್ಮೆ ಅಯೋಧ್ಯಾ ವಿಷಯವಾಗಿ ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿತ್ತು. ವಿ.ಪಿ. ಸಿಂಗ್ ವಾಜಪೇಯಿ ಕುರಿತು ’ನೀವು ಹಿಂದೂ ಧರ್ಮದ ಪುನರ್ಜನ್ಮ ಸಿದ್ಧಾಂತವನ್ನು ನಂಬುವವರು. ಆಕಸ್ಮಾತ್ ಮುಂದಿನ ಜನ್ಮದಲ್ಲಿ ಅರಬ್ ರಾಷ್ಟ್ರಗಳಲ್ಲಿ ಹುಟ್ಟಿದರೆ ಏನು ಮಾಡುತ್ತೀರಿ?’ ಎಂದಾಗ ವಾಜಪೇಯಿ ’ನಿಮ್ಮ ಸ್ಕಲ್ ಕ್ಯಾಪನ್ನು ಮಾತ್ರ ಕೇಳುವುದಿಲ್ಲ’ ಎಂದು ತಿರುಗೇಟು ನೀಡಿದ್ದರು. ಸಂಸತ್ತು ನಗೆಗಡಲಿನಲ್ಲಿ ತೇಲಿತ್ತು.

ಭಾಷಣದ ವೇಳೆ ಅತಿಯಾಗಿ ಕೈಗಳನ್ನು ಆಡಿಸುತ್ತೀರಿ ಎಂದು ಕೆಲವು ಸಂಸದರು ವರಾತ ತೆಗೆದಾಗ ವಾಜಪೇಯಿ ತಬ್ಬಿಬ್ಬಾಗದೇ ’ಹಾಗಾದರೇ ನೀವು ಏನನ್ನು ಸೂಚಿಸುತ್ತೀರಿ? ನಾನು ನನ್ನ ಕಾಲುಗಳನ್ನು ಆಡಿಸಬೇಕೆ? ಅದು ಸಂಸದೀಯ ಶಿಷ್ಟಾಚಾರದ ವಿರುದ್ಧ’ ಎಂದಿದ್ದರು. ಆಕ್ಷೇಪಿಸಿದವರು ಹುಸಿನಗೆ ನಕ್ಕು ತೆಪ್ಪಗಾಗಿದ್ದರು. ಪ್ರಧಾನಿಯಾಗಿ ನಿಯೋಜಿತರಾಗಿದ್ದ ವಾಜಪೇಯಿ ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಕರ್ತನೊಬ್ಬ ಕೇಳಿದ ’What message do you have tonight for Benazir Bhutto?' ಅದಕ್ಕೆ ವಾಜಪೇಯಿ ಉತ್ತರಿಸಿದ್ದು ’Is there any harm if I send the message tomorrow morning?' ಪ್ರಶ್ನೆಕೇಳಿದವ ಪೆಚ್ಚಾದರೆ ನಗುವ ಸರದಿ ಉಳಿದ ಪತ್ರಕರ್ತರದ್ದಾಗಿತ್ತು.

ಕವಿ ಹೃದಯದ ವಾಜಪೇಯಿ ಅನೇಕ ಕವಿತೆಗಳನ್ನು ಬರೆದವರು. ’ಕದಮ್ ಮಿಲಾಕರ್ ಚಲ್ನಾ ಹೋಗ’ ಎಂಬ ಕವಿತೆಯಲ್ಲಿ ’ಎಷ್ಟೇ ಕಷ್ಟಗಳಿರಲಿ, ದಟ್ಟ ಮೋಡಗಳು ಎದುರಾಗಲಿ, ಕೆಂಡದ ಮಳೆಯೇ ಸುರಿಯಲಿ, ಆದರೆ ನಾವು ಮುನ್ನಡೆಯಲೇ ಬೇಕು. ಜೊತೆ ಜೊತೆಗೆ ಹೆಜ್ಜೆ ಇಡಲೇಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಬಹುಶಃ ಬದುಕಿನುದ್ದಕ್ಕೂ ಅವರು ಅನುಸರಿಸಿದ್ದು ಅದನ್ನೇ. ಸೋಲುಗಳು ವಾಜಪೇಯಿ ಅವರನ್ನು ಕಂಗೆಡಿಸಿದ್ದಿಲ್ಲ. 1984ರ ಚುನಾವಣೆಯಲ್ಲಿ ಮಾಧವರಾವ್ ಸಿಂಧಿಯಾ ಎದುರು ಸೋಲುಂಡಿದ್ದ ವಾಜಪೇಯಿ 'ಮಾಧವನ ಸೌಂದರ್ಯಕ್ಕೆ ಮಹಿಳೆಯರು ವೋಟು ಕೊಟ್ಟು ಮುದುಕನಿಗೆ ಕೈಕೊಟ್ಟರು' ಎಂದು ಚಟಾಕಿ ಹಾರಿಸಿದ್ದರು.

ಇಂತಹ ಬಹುಮುಖ ಪ್ರತಿಭೆಯ, 9 ಬಾರಿ ಸಂಸದನಾಗಿ, 2 ಬಾರಿ ರಾಜ್ಯಸಭೆ ಸದಸ್ಯನಾಗಿ ಸಂಸದೀಯ ಪ್ರಕ್ರಿಯೆಯ ಘನತೆ ಹೆಚ್ಚಿಸಿದ, ಪ್ರಧಾನಿಯಾಗಿ ಹಲವು ದಿಟ್ಟ ಹೆಜ್ಜೆಗಳನಿಟ್ಟು ದೇಶದ ಪ್ರತಿಷ್ಠೆಯನ್ನು ಎತ್ತರಕ್ಕೊಯ್ದ ನಾಯಕನಿಗೆ ’ಭಾರತರತ್ನ’ ಸಹಜವಾಗಿಯೇ ಸಿಗಬೇಕಿತ್ತು.2008ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಡ್ವಾಣಿ ಪತ್ರ ಬರೆದು ’ಭಾರತರತ್ನ ಪ್ರಶಸ್ತಿಗೆ ವಾಜಪೇಯಿ ಅರ್ಹ’ ಎಂಬುದನ್ನು ಮನವರಿಕೆ ಮಾಡಿದ್ದರು. ಆದರೆ ಒಂದೇ ಕುಟುಂಬದ ಮೂವರಿಗೆ ಈ ಉನ್ನತ ಪ್ರಶಸ್ತಿಯನ್ನು ’ಕೊಟ್ಟುಕೊಂಡ’, ರಾಜಕೀಯ ಕಾರಣಗಳಿಗೆ ’ಭಾರತರತ್ನ’ವನ್ನು ಬಳಸಿಕೊಂಡ ಕಾಂಗ್ರೆಸ್ ಪ್ರತಿಪಕ್ಷದ ಮೇರು ನಾಯಕನನ್ನು ಗೌರವಿಸುವ ಉದಾರತೆ ತೋರಲಿಲ್ಲ. ದೊಡ್ಡತನ ತೋರುವ ಅವಕಾಶವನ್ನು ಕೈಚೆಲ್ಲಿ ನೆಪವೊಡ್ಡಿತು.

ಅದಿರಲಿ, ಸಂದರ್ಶನ ಒಂದರಲ್ಲಿ ’ವಾಜಪೇಯಿ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂಬ ಪ್ರಶ್ನೆಗೆ ಖುಷ್ವಂತ್ ಸಿಂಗ್ ತುಂಟತನ ಬೆರೆಸಿ ಉತ್ತರಿಸಿದ್ದರು ’ಅವರೊಬ್ಬ ಮಾನವೀಯತೆ ಉಳ್ಳ, ಎಲ್ಲರೂ ಪ್ರೀತಿಸಬಹುದಾದ ಮನುಷ್ಯ. ಹೆಂಗಸರಿಗೆ ಮುದ್ದಾಡಬೇಕು ಎನಿಸಿದರೆ ಅಚ್ಚರಿಯೇನಲ್ಲ. ಆತ ಒಬ್ಬ ಕವಿ, ಅಕ್ಷರ ಜೀವಿ. ದೂರದೃಷ್ಟಿಯುಳ್ಳ ಮುತ್ಸದ್ದಿ. ಕ್ಷಣಿಕ ಲಾಭಕ್ಕೆ ರಾಜಿಯಾಗದ ರಾಜಕಾರಣಿ. ಸ್ವಾತಂತ್ರ್ಯಾನಂತರದ ಅಮೋಘ ಭಾಷಣಕಾರ. ಆತನ ಮಾತು ಕೇಳುವುದು ಆನಂದದಾಯಕ. ವಿದೇಶಾಂಗ ಮಂತ್ರಿಯಾಗಿ, ಅನೇಕ ಭಾರತೀಯ ನಿಯೋಗಗಳ ಸದಸ್ಯನಾಗಿ, ಪ್ರಧಾನಿಯಾಗಿ ಅಂತಾರಾಷ್ಟ್ರೀಯ ಸ್ತರದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಮಾಡಿದ ಮುತ್ಸದ್ದಿ. ಒಂದೇ ಸಾಲಿನಲ್ಲಿ ಹೇಳುವುದಾದರೆ ’He is most likeable, loveable character'. ಖುಷ್ವಂತ್ ಸಿಂಗ್ ಮಾತುಗಳನ್ನು ಅನುಮೋದಿಸದವರು ಯಾರಿದ್ದಾರೆ ಹೇಳಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT