ಸಿಂಗ್ರೌಲಿ: ಸಿಂಗ್ರೌಲಿಯ ಪೊಲೀಸ್ ಠಾಣೆಯೊಂದರಲ್ಲಿ ಕರ್ತವ್ಯದ ವೇಳೆ ರಾಜಕೀಯ ವ್ಯಕ್ತಿಯ ಮಾತಿನಿಂದ ಸಿಟ್ಟಿಗೆದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಸಮವಸ್ತ್ರ ಕಳಚಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಮಧ್ಯಪ್ರದೇಶ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.
ಈ ಘಟನೆ ಫೆಬ್ರುವರಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಪೊರೇಟರ್ ಒಬ್ಬರ ಪತಿಯ ಏರಿದ ಧ್ವನಿಯ ಮಾತಿನಿಂದ ತಾಳ್ಮೆ ಕಳೆದುಕೊಂಡು ಈ ರೀತಿ ಮಾಡಿಕೊಂಡಿರುವ ಎಎಸ್‌ಐ ವಿನೋದ್ ಮಿಶ್ರಾ ವಿರುದ್ಧ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಡಿಯೊ ತುಣಕನ್ನು ಹಂಚಿಕೊಂಡಿರುವ ಕಾಂಗ್ರೆಸ್, ‘ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಅಪರಾಧಗಳು ಅನಿಯಂತ್ರಿತವಾಗಿವೆ. ಅಪರಾಧಿಗಳು ನಿರ್ಭೀತರಾಗಿದ್ದಾರೆ ಮತ್ತು ಪೊಲೀಸರು ಕೆಲವು ಸ್ಥಳಗಳಲ್ಲಿ ಅಸಹಾಯಕರಾಗಿದ್ದಾರೆ ಹಾಗೂ ಇನ್ನು ಕೆಲವು ಕಡೆಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದೆ.
‘ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೊ ಸಿಂಗ್ರೌಲಿಯ ವೈಧಾನ್ ಪೊಲೀಸ್ ಠಾಣೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಬಿಜೆಪಿ ಕೌನ್ಸಿಲರ್‌ನ ಸಮವಸ್ತ್ರ ಹರಿದುಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ಪೊಲೀಸ್ ಒಬ್ಬರು ತಮ್ಮ ಸಮವಸ್ತ್ರ ಕಳಚಿಕೊಂಡಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆಡಳಿತದಲ್ಲಿ ಗೃಹ ಇಲಾಖೆಯ ಸ್ಥಿತಿಯು ಹದಗೆಟ್ಟಿದೆ’ ಎಂದು ಪಕ್ಷವು ಹೇಳಿದೆ.
ಎಎಸ್‌ಐಗೆ ವಾರ್ಷಿಕ ಇನ್‌ಕ್ರಿಮೆಂಟ್ ಕಡಿತ
ಫೆಬ್ರುವರಿಯಲ್ಲಿ ಆಗಿರುವ ಈ ಘಟನೆ ಬಗ್ಗೆ ಅಂದಿನ ಎಸ್‌ಪಿ ಯೂಸುಫ್ ಖುರೇಷಿ ಅವರ ಸೂಚನೆ ಮೇರೆಗೆ ತನಿಖೆ ನಡೆಸಲಾಗಿದೆ. ತನಿಖಾ ವರದಿ ಬಂದ ನಂತರ ಈಗಿನ ಎಸ್‌ಪಿ ನಿವೇದಿತಾ ಗುಪ್ತಾ ಅವರು ಮಿಶ್ರಾ ಅವರ ವಾರ್ಷಿಕ ಇನ್‌ಕ್ರಿಮೆಂಟ್ ನಿಲ್ಲಿಸಲು ಆದೇಶಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ವರ್ಮಾ ಹೇಳಿದ್ದಾರೆ.
ಬಿಜೆಪಿ ಕಾರ್ಪೊರೇಟರ್ ಗೌರಿ ಗುಪ್ತಾ ಅವರ ಪತಿ ಅರ್ಜುನ್ ಗುಪ್ತಾ ಅವರು ಮಿಶ್ರಾ ಅವರ ಬಟ್ಟೆಗಳನ್ನು ಹರಿದಿದ್ದಾರೆ ಎಂಬ ಆರೋಪಗಳು ಈಗ ಸುಳ್ಳೆಂದು ಸಾಬೀತಾಗಿದೆ. ಚರಂಡಿ ನಿರ್ಮಾಣದ ಬಗ್ಗೆ ವಾಗ್ವಾದ ನಡೆದಿತ್ತು. ಪ್ರತಿಭಟನೆ ಮುಂದುವರಿಸಿದರೆ ಸಮವಸ್ತ್ರ ಹರಿದು ಹಾಕುವುದಾಗಿ ಮಿಶ್ರಾಗೆ ಹೇಳಿದ್ದಾಗಿ ಗುಪ್ತಾ ಹೇಳಿದ್ದಾರೆ. ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಸುಧೇಶ್ ತಿವಾರಿ ಅವರ ಸಮ್ಮುಖದಲ್ಲಿ ಗುಪ್ತಾ ತನ್ನ ಸಮವಸ್ತ್ರ ಹರಿದು ಸೇವೆಯಿಂದ ತೆಗೆದು ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಿಶ್ರಾ ಸೋಮವಾರ ಹೇಳಿದ್ದಾರೆ.
ಗುಪ್ತಾ ಮಾತಿನಿಂದ ಅವಮಾನವಾಗಿದೆ ಎಂದು ಅವರು ತಮ್ಮ ಸಮವಸ್ತ್ರ ತೆಗೆದುಹಾಕಿದ್ದರು. ‘ನಾನು ಈ ರೀತಿ ಪ್ರತಿಕ್ರಿಯಿಸಬಾರದಿತ್ತು’ ಎಂದು ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.