ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯ ರಾಮ ಮಂದಿರದಲ್ಲಿ ಜನಸಾಗರ

ಭೇಟಿಗೂ ಮೊದಲು ಮಾಹಿತಿ ನೀಡುವಂತೆ ಅತಿಗಣ್ಯ ವ್ಯಕ್ತಿಗಳಿಗೆ ಟ್ರಸ್ಟ್‌ ಮನವಿ
Published 24 ಜನವರಿ 2024, 14:14 IST
Last Updated 24 ಜನವರಿ 2024, 14:14 IST
ಅಕ್ಷರ ಗಾತ್ರ

ಅಯೋಧ್ಯೆ/ಲಖನೌ: ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ನಂತರದಲ್ಲಿ ಭಾರಿ ಪ್ರಮಾಣದ ಭಕ್ತರ ಹರಿವನ್ನು ಕಂಡಿದ್ದ ಅಯೋಧ್ಯೆಯಲ್ಲಿ ಬುಧವಾರ ಭಕ್ತರ ಸಂಖ್ಯೆಯು ತುಸು ಮಟ್ಟಿಗೆ ಕಡಿಮೆ ಇತ್ತು. ಇದು ಅಲ್ಲಿನ ಅಧಿಕಾರಿಗಳಲ್ಲಿ ಸಮಾಧಾನ ಮೂಡಿಸಿತು. ಹೀಗಿದ್ದರೂ, ಅತಿಗಣ್ಯ ವ್ಯಕ್ತಿಗಳು ಮುಂದಿನ ಹತ್ತು ದಿನಗಳವರೆಗೆ ಮಂದಿರಕ್ಕೆ ಭೇಟಿ ನೀಡಬಾರದು ಎಂದು ಉತ್ತರ ಪ್ರದೇಶ ಸರ್ಕಾರವು ಬುಧವಾರ ಕೋರಿದೆ.

ಮಂದಿರಕ್ಕೆ ಭೇಟಿ ನೀಡುವ ಆಲೋಚನೆ ಹೊಂದಿರುವ ಅತಿಗಣ್ಯ ವ್ಯಕ್ತಿಗಳು ಕನಿಷ್ಠ ಏಳು ದಿನ ಮೊದಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮಾಹಿತಿ ನೀಡುವಂತೆಯೂ ಸರ್ಕಾರವು ಕೋರಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿನ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಲು ಲಖನೌನಲ್ಲಿ ಸಭೆ ನಡೆಸಿದರು. ಬುಧವಾರ ಮಧ್ಯಾಹ್ನದ ವೇಳೆಗೆ ಸರಿಸುಮಾರು ಮೂರು ಲಕ್ಷ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ.

ಭಕ್ತರ ದಂಡನ್ನು ಹೆಚ್ಚು ಸಮರ್ಪಕವಾಗಿ ನಿಭಾಯಿಸುವ ಉದ್ದೇಶದಿಂದ ಅಯೋಧ್ಯೆ ಪ್ರವೇಶಿಸುವ ಒಂದು ಮಾರ್ಗವನ್ನು ಮಾತ್ರ ಮುಕ್ತವಾಗಿ ಇರಿಸಿದ್ದರು.

‘ಭಕ್ತರನ್ನು ಗರ್ಭಗೃಹಕ್ಕೆ ಗುಂಪುಗಳಲ್ಲಿ ಕಳುಹಿಸಲಾಗುತ್ತಿದೆ... ಬುಧವಾರ ಗೊಂದಲ ನಿರ್ಮಾಣವಾಗಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಬಾಲರಾಮನ ದರ್ಶನವು ಸುಗಮವಾಗಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದರು. ಅವರನ್ನು ಮಂಗಳವಾರ ಅಯೋಧ್ಯೆಗೆ ಕಳುಹಿಸಲಾಗಿತ್ತು.

ದರ್ಶನ ಪಡೆಯಲು ಬರುತ್ತಿರುವ ಭಕ್ತರ ಸರತಿ ಸಾಲಿನ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಲಾಗಿದೆ ಎಂದು ಪ್ರಶಾಂತ್ ಅವರು ಹೇಳಿದರು.

ಭಕ್ತರಿಗೆ ತೊಂದರೆ ಆಗದೆ ಇರಲಿ ಎಂಬ ಉದ್ದೇಶದಿಂದ ಒಟ್ಟು ಎಂಟು ಸಾವಿರ ಮಂದಿ ಭದ್ರತಾ ಸಿಬ್ಬಂದಿಯನ್ನು ದೇವಸ್ಥಾನ ಒಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಭಕ್ತರು ಇನ್ನೂ ಕೆಲವು ದಿನಗಳವರೆಗೆ ಅಯೋಧ್ಯೆಗೆ ಭಾರಿ ಸಂಖ್ಯೆಯಲ್ಲಿ ಬರಬಹುದು, ಅದಾದ ನಂತರದಲ್ಲಿ ಪರಿಸ್ಥಿತಿಯು ಸಹಜವಾಗಬಹುದು ಎಂದು ಮೂಲಗಳು ಹೇಳಿವೆ.

ಅಯೋಧ್ಯೆಗೆ ಬರುವ ಭಕ್ತರೆಲ್ಲರಿಗೂ ದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಯೋಗಿ ಆದಿತ್ಯನಾಥ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಕ್ತರಿಗೆ ಅಯೋಧ್ಯೆಯಿಂದ ವಾಪಸ್ಸಾಗುವಾಗ ಕೂಡ ಯಾವುದೇ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಮಂಗಳವಾರ ಸರಿಸುಮಾರು ಐದು ಲಕ್ಷ ಭಕ್ತರು ಬಾಲರಾಮನ ದರ್ಶನ ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT