ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಸಂದೇಶಗಳಿಗೆ ವಾಟ್ಸ್‌ ಆ್ಯಪ್‌ ಕಡಿವಾಣ

ಒಂದು ಬಾರಿಗೆ ಗರಿಷ್ಠ ಐದು ಸಂದೇಶಗಳಿಗೆ ಮಾತ್ರ ಅವಕಾಶ
Last Updated 20 ಜುಲೈ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿಯ ವಾಟ್ಸ್‌ ಆ್ಯಪ್‌ ಬಳಕೆದಾರರು ಇನ್ನು ಮುಂದೆ ಐದಕ್ಕಿಂತ ಹೆಚ್ಚು ಸಂದೇಶಗಳನ್ನು (ಚಿತ್ರ, ವಿಡಿಯೊ ಮತ್ತು ಸಂದೇಶ) ಒಟ್ಟಿಗೆ ಕಳಿಸುವುದು ಸಾಧ್ಯವಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ವಾಟ್ಸ್‌ ಆ್ಯಪ್‌ ಈ ಹೊಸಮಾರ್ಗ ಕಂಡುಕೊಂಡಿದೆ.

ಒಂದು ಬಾರಿಗೆ ಒಟ್ಟಿಗೆ ಐದಕ್ಕಿಂತ ಹೆಚ್ಚು ಸಂದೇಶ ಕಳಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ವಾಟ್ಸ್‌ ಆ್ಯಪ್‌ ಶುಕ್ರವಾರ ಪ್ರಕಟಿಸಿದೆ. ಹೊಸ ನಿಯಮ ಎಂದಿನಿಂದ ಅನ್ವಯವಾಗಲಿದೆ ಎಂಬುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಜಾಗತಿಕಮಟ್ಟದಲ್ಲಿ ಈ ಮಿತಿಯನ್ನು 20ಕ್ಕೆ ನಿಗದಿಗೊಳಿಸಲಾಗಿದೆ.

ಇಲ್ಲಿಯವರೆಗೆ ವಾಟ್ಸ್‌ ಆ್ಯಪ್‌ ಬಳಕೆದಾರರಿಗೆ ಸಂದೇಶ ಹಂಚಿಕೊಳ್ಳಲು ಯಾವುದೇ ಮಿತಿ ಇರಲಿಲ್ಲ. ಬಳಕೆದಾರರು ಏಕಕಾಲಕ್ಕೆ ಬೇಕಾದಷ್ಟು ಸಂದೇಶ ಹಂಚಿಕೊಳ್ಳಬಹುದಾಗಿತ್ತು.

’ಕ್ವಿಕ್‌ ಫಾರ್ವಡ್‌ ಬಟನ್‌’ನಿಷ್ಕ್ರಿಯ:ತ್ವರಿತವಾಗಿ ಸಂದೇಶ ಹಂಚಿಕೊಳ್ಳಲು ರೂಪಿಸಲಾಗಿರುವ ಮಿಡಿಯಾ ಸಂದೇಶದ ಪಕ್ಕ ಕಾಣಿಸಿಕೊಳ್ಳುವ ’ಕ್ವಿಕ್‌ ಫಾರ್ವಡ್‌ ಬಟನ್‌’ ತೆಗೆದು ಹಾಕುವುದಾಗಿ ಸಂಸ್ಥೆ ತನ್ನ ಅಧಿಕೃತ ಬ್ಲಾಗ್‌ಸ್ಪಾಟ್‌ನಲ್ಲಿ ಪ್ರಕಟಿಸಿದೆ.

ಅಮಾಯಕರ ಮೇಲೆ ಹೆಚ್ಚುತ್ತಿರುವ ಗುಂಪು ದಾಳಿಗಳಿಗೆ ಪ್ರಚೋದನೆ ನೀಡುವ ಸುಳ್ಳುಸುದ್ದಿಗಳ ಪ್ರಸರಣಕ್ಕೆ ವಾಟ್ಸ್‌ ಆ್ಯಪ್‌ ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಸಂಸ್ಥೆ ಹೇಳಿದೆ.

ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಗುರುವಾರ ಸಂಸ್ಥೆಗೆ ಎರಡನೇ ನೋಟಿಸ್ ನೀಡಿತ್ತು.

ವದಂತಿ ಹರಡುವ ವೇದಿಕೆಯಾಗಿ ವಾಟ್ಸ್‌ ಆ್ಯಪ್‌ ದುರ್ಬಳಕೆಯಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಒಡೆತನದ ವಾಟ್ಸ್ ಆ್ಯಪ್‌ ಜಾಗತಿಕವಾಗಿ ನೂರು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಆ ಪೈಕಿ 20 ಕೋಟಿ ಬಳಕೆದಾರರು ಭಾರತದಲ್ಲಿಯೇ ಇದ್ದಾರೆ.
**

ಪ್ರಸರಣ ತಡೆಗೆ ಖಾಸಗಿತನ ಅಡ್ಡಿ!
ನಿಷ್ಪ್ರಯೋಜಕ ಸಂದೇಶ ಪ್ರಸರಣ ತಡೆಯಲು ಸಾಧ್ಯ. ಆದರೆ, ಖಾಸಗಿ ಸಂದೇಶಗಳ ಪರಿಶೀಲನೆ ನಿರ್ಬಂಧವಿರುವುದು ತನ್ನ ಕೈಗಳನ್ನು ಕಟ್ಟಿ ಹಾಕಿದೆ ಎಂದು ವಾಟ್ಸ್ ಆ್ಯಪ್‌ ಹೇಳಿದೆ.

ಆದರೆ, ಬಳಕೆದಾರರ ಚಟುವಟಿಕೆ ವರದಿಯ ಆಧಾರದ ಮೇಲೆ ಶಂಕಿತ ಸಂದೇಶಗಳ ಪ್ರಸರಣ ತಡೆಯಬಹುದು ಎಂದು ಮೊದಲ ನೋಟಿಸ್‌ಗೆ ಉತ್ತರ ನೀಡಿತ್ತು.

ಸರ್ಕಾರದ ಎರಡನೇ ನೋಟಿಸ್‌ಗೆ ವಾಟ್ಸ್‌ ಆ್ಯಪ್‌ ಇನ್ನೂ ಉತ್ತರ ನೀಡಿಲ್ಲವಾದರೂ, ತಾನು ಕೈಗೊಂಡ ಕ್ರಮಗಳನ್ನು ಬ್ಲಾಗ್‌ನಲ್ಲಿ ಪ್ರಕಟಿಸಿದೆ.
**
ಭಾರತಕ್ಕೂ ಬರಲಿದೆ ‘ವೆರಿಫಿಕಾಡೊ’
ಭಾರತದಲ್ಲಿ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ವಾಟ್ಸ್ ಆ್ಯಪ್‌ ದುರ್ಬಳಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಾಟ್ಸ್‌ ಆ್ಯಪ್‌ ಶುಕ್ರವಾರ ಚುನಾವಣಾ ಆಯೋಗಕ್ಕೆ ಭರವಸೆ ನೀಡಿದೆ.

ಈ ನಿಟ್ಟಿನಲ್ಲಿ ವಾಟ್ಸ್‌ ಆ್ಯಪ್‌ ಜಾಗತಿಕ ತಂತ್ರಜ್ಞರ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಸುಳ್ಳು ಸುದ್ದಿ ಪರಿಶೀಲನಾ ಮಾದರಿ ’ವೆರಿಫಿಕಾಡೊ’ ಅನ್ನು ಭಾರತದ ಮಾರುಕಟ್ಟೆಗೂ ಪರಿಚಯಿಸುವುದಾಗಿ ಸಂಸ್ಥೆ ತಿಳಿಸಿದೆ.

‘ವೆರಿಫಿಕಾಡೊ’ ಮಾದರಿಯನ್ನು ಈಗಾಗಲೇ ಮೆಕ್ಸಿಕೊ ಮತ್ತು ಬ್ರೆಜಿಲ್‌ ಚುನಾವಣೆ ಸಂದರ್ಭದಲ್ಲಿ ಅಳವಡಿಸಲಾಗಿತ್ತು. ಅದು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಈಗಾಗಲೇ ಭಾರತದಲ್ಲಿರುವ ಸಂಸ್ಥೆಯ ಜಾಗತಿಕ ತಂತ್ರಜ್ಞರ ತಂಡವು ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ತಂತ್ರಜ್ಞರ ಜತೆ ಚರ್ಚೆಯಲ್ಲಿ ತೊಡಗಿದೆ.
**
ಹೊಸ ಕ್ರಮಗಳೇನು?
* ಮುಂದಿನ ದಿನಗಳಲ್ಲಿ ಖಾಸಗಿತನ ರಕ್ಷಣೆ ಮತ್ತು ಸುರಕ್ಷತೆಯ ಇನ್ನಷ್ಟ ಕ್ರಮಗಳನ್ನು ಅಳವಡಿಸುವ ಭರವಸೆ
* ‘ಫಾರ್ವರ್ಡೆಡ್‌ ಮೆಸೇಜ್‌’ ಸ್ಪಷ್ಟವಾಗಿ ಗುರುತಿಸಲು ಮತ್ತು ಗುಂಪು ಸಂಭಾಷಣೆಗೆ ಕಡಿವಾಣ ಹಾಕಲು ಹೊಸ ಸುರಕ್ಷತಾ ಕ್ರಮ ಅಳವಡಿಕೆ
* ಸುದ್ದಿಗಳ ನೈಜತೆ ಖಚಿತಪಡಿಸಿಕೊಳ್ಳಲು ಬಳಕೆದಾರರಿಗೆ ಕೆಲವು ಸಲಹೆ, ಸೂಚನೆ ನೀಡಿ ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಜಾಹೀರಾತು
* ಸುಳ್ಳುಸುದ್ದಿ ಪತ್ತೆಗೆ ಬಳಕೆದಾರರಿಗೆ ನೆರವಾಗಲು ಭಾರತದಲ್ಲಿ 12ಕ್ಕೂ ಹೆಚ್ಚು ಕಂಪನಿಗಳ ಜತೆಗೂಡಿ ‘ಡಿಜಿಟಲ್‌ ಶಿಕ್ಷಣ ಯೋಜನೆ’ ರೂಪಿಸುವ ಯತ್ನ
***
ಇತರ ದೇಶಗಳಿಗೆ ಹೋಲಿಸಿದರೆ ಭಾರತದ ವಾಟ್ಸ್‌ ಆ್ಯಪ್ ಬಳಕೆದಾರರು ಅತಿ ಹೆಚ್ಚು ಸಂದೇಶ, ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
– ವಾಟ್ಸ್ ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT