ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡಿನಲ್ಲಿ ಸಿಎಎ ಜಾರಿ ಇಲ್ಲ: ಸ್ಟಾಲಿನ್‌

Published 1 ಫೆಬ್ರುವರಿ 2024, 14:45 IST
Last Updated 1 ಫೆಬ್ರುವರಿ 2024, 14:45 IST
ಅಕ್ಷರ ಗಾತ್ರ

ಚೆನ್ನೈ: ‘ಮುಸ್ಲಿಮರ ಹಾಗೂ ಶ್ರೀಲಂಕಾ ತಮಿಳರ ವಿರುದ್ಧವಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಬುಧವಾರ ಹೇಳಿದ್ದಾರೆ.

‘ಏಳು ದಿನಗಳಲ್ಲಿ ಪಶ್ಚಿಮ ಬಂಗಾಳ ಮಾತ್ರವಲ್ಲ, ದೇಶದಾದ್ಯಂತ ಸಿಎಎ ಜಾರಿ ಮಾಡಲಾಗುವುದು’ ಎಂಬ ಕೇಂದ್ರ ಸಚಿವ ಶಂತನು ಠಾಕೂರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿಎಎ ರಾಜ್ಯಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಜನರಿಗೆ ಭರವಸೆ ನೀಡುತ್ತೇನೆ. ಈ ಹಿಂದೆ ಬಿಜೆಪಿಯ ಮಿತ್ರಪಕ್ಷವಾಗಿದ್ದ ಎಐಎಡಿಎಂಕೆ ರಾಜ್ಯಸಭೆಯಲ್ಲಿ ಬೆಂಬಲ ಇಲ್ಲದ್ದಿದ್ದರೆ ಈ ಮಸೂದೆ ಕಾನೂನಾಗಿ ಪರಿವರ್ತನೆಯಾಗುತ್ತಿರಲಿಲ್ಲ’ ಎಂದು ಪ್ರತಿಪಾದಿಸಿದರು.

ಪ್ರಸ್ತುತ ಸ್ಪೇನ್‌ನ ಅಧಿಕೃತ ಪ್ರವಾಸದಲ್ಲಿರುವ ಸ್ಟಾಲಿನ್‌ ಅವರು ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಮಸೂದೆಯು ಮಂಡನೆಯಾದಾಗ ಡಿಎಂಕೆಯು ವಿರೋಧ ಪಕ್ಷವಾಗಿದ್ದರೂ ಇದರ ವಿರುದ್ಧ ಬೃಹತ್‌ ಪ್ರತಿಭಟನೆಗಳನ್ನು ನಡೆಸಿತ್ತು. ಅಲ್ಲದೇ ಮಸೂದೆಯನ್ನು ವಿರೋಧಿಸಿ ಎರಡು ಕೋಟಿ ಸಹಿಗಳನ್ನು ಸಂಗ್ರಹಿಸಿ ಆಗಿನ ರಾಷ್ಟ್ರಪತಿಯವರಿಗೆ ಕಳುಹಿಸಲಾಗಿತ್ತು.  2021ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಸಿಎಎ ಹಿಂಪಡೆಯುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದವು’ ಎಂದಿದ್ದಾರೆ.

‘ಬಿಜೆಪಿಯು ಧಾರ್ಮಿಕ ಸೌಹಾರ್ದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದ ಸ್ಟಾಲಿನ್, ‘ಕೇಂದ್ರ ಸರ್ಕಾರ ಈ ವಿನಾಶಕಾರಕ ಚಟುವಟಿಕೆಗಳನ್ನು ಹಾಗೂ ಈ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಎಐಎಡಿಎಂಕೆಯ ಕಪಟ ನಾಟಕಗಳನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಎಐಎಡಿಎಂಕೆ ತಿರುಗೇಟು

ಸ್ಟಾಲಿನ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು, ‘ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ, ಶ್ರೀಲಂಕಾ ತಮಿಳರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಏನಾದರೂ ತೊಂದರೆಯಾದರೆ ಸುಮ್ಮನಿರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದ್ದೆವು’ ಎಂದಿದ್ದಾರೆ.

‘ಡಿಎಂಕೆ ತನ್ನ ‘ಕೋಮುವಾದವನ್ನು ವಿರೋಧಿಸುವ ನಾಟಕ’ವನ್ನು ರೂಪಿಸಿದ್ದು, ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯನ್ನು ವಿರೋಧಿಸಿ ರಾಜ್ಯವನ್ನು ಆಳುತ್ತಿರುವಾಗ ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಂಡು ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಿದೆ. ಇದೇ ಡಿಎಂಕೆಯ ಇದರ ರಾಜಕೀಯ ಬಂಡವಾಳ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT