ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಕ್ಕೆ ಶರಣಾಗುತ್ತೇನೆ, ಪೋಷಕರ ಕಾಳಜಿವಹಿಸಿ: ಕೇಜ್ರಿವಾಲ್‌ ಮನವಿ

Published 31 ಮೇ 2024, 19:30 IST
Last Updated 31 ಮೇ 2024, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಜೂನ್‌ 2ರಂದು ಶರಣಾಗುತ್ತೇನೆ’ ಎಂದು ಶುಕ್ರವಾರ ಹೇಳಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ‘ಜೈಲಿಗೆ ಹೋದ ಬಳಿಕ, ನನ್ನ ವೃದ್ದ ಮತ್ತು ಆರೋಗ್ಯ ಸಮಸ್ಯೆಯಿರುವ ಪೋಷಕರನ್ನು ನೋಡಿಕೊಳ್ಳುವಂತೆ’ ದೆಹಲಿ ಜನರಲ್ಲಿ ಮನವಿ ಮಾಡಿದರು.

‘ಭಾನುವಾರ ಮಧ್ಯಾಹ್ನ 3 ಗಂಟೆಗೆ ಶರಣಾಗಲು ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನಗೆ ಹೆಚ್ಚು ಹಿಂಸೆ ನೀಡುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣಕ್ಕೂ ತಲೆಬಾಗುವುದಿಲ್ಲ’ ಎಂದು ಅವರು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೆಹಲಿ ಜನರಿಗೆ ದೊರೆಯುತ್ತಿರುವ ಎಲ್ಲ ಸೌಲಭ್ಯಗಳು ನನ್ನ ಅನುಪಸ್ಥಿತಿಯಲ್ಲೂ ಮುಂದುವರಿಯುತ್ತವೆ. ಜೈಲಿನಲ್ಲಿದ್ದರೂ ನಿಮ್ಮ ಬಗ್ಗೆ ನಾನು ಕಾಳಜಿ ಮಾಡುತ್ತೇನೆ. ನೀವು ಸಂತಸದಿಂದ ಇದ್ದರೆ, ನಾನೂ ಸಂತಸದಿಂದ ಇರುತ್ತೇನೆ’ ಎಂದರು.

‘ನಾನು ಜೈಲಿನಿಂದ ಹಿಂದಿರುಗಿದ ಬಳಿಕ ಪ್ರತಿ ತಾಯಿ ಮತ್ತು ಸಹೋದರಿಯರಿಗೆ ತಿಂಗಳಿಗೆ ತಲಾ ₹1,000 ನೀಡುತ್ತೇನೆ’ ಎಂದು ಅವರು ಭರವಸೆ ನೀಡಿದರು.

‘ನಿಮ್ಮ ಕುಟುಂಬದ ಮಗನಾಗಿ ನಾನು ಸದಾ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಹೆತ್ತವರಿಗೆ ವಯಸ್ಸಾಗಿದೆ. ತಾಯಿಗೆ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ಚಿಂತಿತನಾಗಿದ್ದೇನೆ. ಜೈಲಿಗೆ ಹೋದ ಬಳಿಕ ನನ್ನ ಪೋಷಕರನ್ನು ನೋಡಿಕೊಳ್ಳಿ. ಅವರಿಗಾಗಿ ಪ್ರಾರ್ಥಿಸಿ’ ಎಂದು ಅವರು ಕೋರಿದರು.

‘ನಿಮ್ಮ ಪ್ರಾರ್ಥನೆಯಿಂದ ಬದುಕಿದ್ದೇನೆ’: ‘ನನ್ನ ಪ್ರತಿ ಕಷ್ಟದ ಸಮಯದಲ್ಲೂ ಪತ್ನಿ ಸುನೀತಾ ಬೆಂಬಲಿಸಿದ್ದಾರೆ’ ಎಂದ ಅವರು, ‘ಕಷ್ಟದ ಸಮಯದಲ್ಲಿ ಇಡೀ ಕುಟುಂಬ ಒಟ್ಟಿಗೆ ಸೇರುತ್ತದೆ. ಹಾಗೆಯೇ ನೀವೆಲ್ಲರೂ ನನ್ನನ್ನು ಬೆಂಬಲಿಸಿದ್ದೀರಿ. ನಿಮ್ಮ ಪ್ರಾರ್ಥನೆಯಿಂದಲೇ ನಾನು ಇಂದು ಬದುಕಿದ್ದೇನೆ. ಈ ನಿಮ್ಮ ಆಶೀರ್ವಾದವು ಭವಿಷ್ಯದಲ್ಲಿಯೂ ನನ್ನನ್ನು ರಕ್ಷಿಸುತ್ತದೆ. ದೇವರು ಬಯಸಿದಲ್ಲಿ ನಿಮ್ಮ ಮಗ ಶೀಘ್ರದಲ್ಲಿಯೇ ಹಿಂತಿರುಗುತ್ತಾನೆ’ ಎಂದು ಅವರು ಹೇಳಿದರು.

24 ಗಂಟೆ ಉಚಿತ ವಿದ್ಯುತ್‌, ಮಹಿಳಾ ಬಸ್‌ ಪ್ರಯಾಣ ಸೇರಿದಂತೆ ಜನರಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳು ಮುಂದುವರಿಯಲಿವೆ ಎಂದು ಅವರು ಪುನರಚ್ಚರಿಸಿದರು.

ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಜೂನ್‌ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ. ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಕೇಜ್ರಿವಾಲ್‌ ಅವರು ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು.

ಸರ್ವಾಧಿಕಾರದ ವಿರುದ್ಧ ಹೋರಾಟ: ‘ಸರ್ವಾಧಿಕಾರದ ವಿರುದ್ಧ ನಾವೆಲ್ಲರೂ ಹೋರಾಡುತ್ತಿದ್ದೇವೆ. ಇದಕ್ಕಾಗಿ ನನಗೆ ಹೆಮ್ಮೆಯಿದೆ ದೇಶವನ್ನು ಉಳಿಸುವ ಈ ಹೋರಾಟದಲ್ಲಿ ನನಗೆ ಏನಾದರೂ ಆದರೆ, ಪ್ರಾಣ ಕಳೆದುಕೊಂಡರೆ ದುಃಖಿಸಬೇಡಿ’ ಎಂದು ಅರವಿಂದ ಕೇಜ್ರಿವಾಲ್‌ ತಿಳಿಸಿದರು.

‘ಇಳಿದ ತೂಕ ಏರುತ್ತಿಲ್ಲ’

‘50 ದಿನಗಳು ಜೈಲಿನಲ್ಲಿದ್ದಾಗ ನನ್ನ ದೇಹದ ತೂಕದಲ್ಲೂ ಇಳಿಕೆಯಾಗಿತ್ತು. ಜೈಲಿಗೆ ಹೋದಾಗ 70 ಕೆ.ಜಿ. ಇದ್ದ ನಾನು ಇಂದು 64 ಕೆ.ಜಿ. ಇದ್ದೇನೆ. ಜೈಲಿನಿಂದ ಹೊರಬಂದ ಮೇಲೂ ತೂಕದಲ್ಲಿ ಏರಿಕೆಯಾಗಿಲ್ಲ. ಇದು ಪ್ರಮುಖ ಕಾಯಿಲೆಯ ಲಕ್ಷಣ ಇರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಇದನ್ನು ತಿಳಿದುಕೊಳ್ಳಲು ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಿದೆ’ ಎಂದು ಅವರು ಪುನರುಚ್ಚರಿಸಿದರು.

‘ಸುಳ್ಳು ಹೇಳುವ ಕಾಯಿಲೆ’–ಬಿಜೆಪಿ ಟೀಕೆ: ಕೇಜ್ರಿವಾಲ್‌ ಅವರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ‘ಹೌದು ಕೇಜ್ರಿವಾಲ್‌ ಅವರಿಗೆ ಸುಳ್ಳು ಹೇಳುವ ಕಾಯಿಲೆ ಇದೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT