ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ಬಂಧನ: ಎಎಪಿ ಇತರ ನಾಯಕರಲ್ಲಿ ಹೆಚ್ಚಿದ ಜವಾಬ್ದಾರಿ

Published 22 ಮಾರ್ಚ್ 2024, 15:31 IST
Last Updated 22 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಯಾಗಿ ವಾರವಾಗುವುದಕ್ಕೂ ಮುನ್ನವೇ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ಆಗಿರುವುದರಿಂದ, ಆ ಪಕ್ಷದ ಇತರ ಹಿರಿಯ ನಾಯಕರ ಮೇಲೆ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆಗಳಿವೆ.

ಪಕ್ಷದ ರಾಷ್ಟ್ರೀಯ ಸಂಘಟನೆಯ ಕಾರ್ಯದರ್ಶಿ ಸಂದೀಪ್‌ ಪಾಠಕ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌, ದೆಹಲಿಯ ಸಚಿವರಾದ ಅತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಸೇರಿದಂತೆ ಪಕ್ಷದ ಹಿರಿಯ ನಾಯಕರ ಪಾತ್ರ ಮತ್ತು ಜವಾಬ್ದಾರಿಗಳು ಹೆಚ್ಚಲಿದ್ದು, ನಾಯಕತ್ವ ಬೆಳೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಜ್ರಿವಾಲ್‌ ಪತ್ನಿ ಅಖಾಡಕ್ಕೆ?:

ಇಲ್ಲಿಯವರೆಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಅವರು ಹೊಸ ಪಾತ್ರ ನಿಭಾಯಿಸಬಹುದು ಎಂಬ ನಿರೀಕ್ಷೆ ಕುರಿತು ಜನರಲ್ಲಿ ಚರ್ಚೆಯಾಗುತ್ತಿದೆ.

‘ನನ್ನ ಪತಿ ಯಾವಾಗಲೂ ದೆಹಲಿಯ ಜನರೊಂದಿಗೆ ನಿಲ್ಲುತ್ತಾರೆ. ಅವರ ಬಂಧನವು ದೆಹಲಿ ಜನರಿಗೆ ಮಾಡಿದ ದ್ರೋಹ’ ಎಂದು ಸುನಿತಾ ಕೇಜ್ರಿವಾಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ನಿವೃತ್ತ ಐಆರ್‌ಎಸ್‌ ಅಧಿಕಾರಿಯೂ ಆಗಿರುವ ಅವರು, ‘ನಿಮ್ಮ ಮೂರು ಬಾರಿಯ ಮುಖ್ಯಮಂತ್ರಿಯನ್ನು ಮೋದಿಜಿ ಅವರು ಅಧಿಕಾರದ ದುರಹಂಕಾರದಿಂದ ಬಂಧಿಸಿದ್ದಾರೆ. ಹೀಗೆ ಎಲ್ಲರನ್ನೂ ಅವರು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿ ಜನರಿಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ಅವರು ಒಳಗಿರಲಿ ಅಥವಾ ಹೊರಗಿರಲಿ, ಅವರ ಜೀವನ ದೇಶಕ್ಕಾಗಿ ಸಮರ್ಪಿತ. ಸಾರ್ವಜನಿಕರಿಗೆ ಪರಮಾಧಿಕಾರ ಇದ್ದು, ಅವರಿಗೆ ಎಲ್ಲವೂ ತಿಳಿದಿದೆ. ಜೈ ಹಿಂದ್‌’ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ತಾನು ಭಾಗವಹಿಸುವುದಾಗಿ ಭಗವಾನ್‌ ಮಾನ್‌ ತಿಳಿಸಿದ್ದಾರೆ. ‘ಕೇಜ್ರಿವಾಲ್‌ ನನ್ನ ಹಿರಿಯ ಸಹೋದರ. ನಾನು ಪಕ್ಷದ ನಿಷ್ಠಾವಂತ ಸೈನಿಕ. ಮುಂದಿನ ದಿನಗಳಲ್ಲಿ ಗುಜರಾತ್‌, ಕುರುಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಪಕ್ಷವು ನನ್ನನ್ನು ಎಲ್ಲಿಗೆ ಕಳುಹಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು, ಹೀಗೆಲ್ಲ ಮಾಡುವ ಮೂಲಕ ಎಎಪಿಯನ್ನು ಚುನಾವಣಾ ಪ್ರಚಾರದಿಂದ ದೂರ ಇಡಬಹುದು ಎಂದು ಭಾವಿಸಿದಂತಿದೆ. ಅದು ಅವರ ಭ್ರಮೆಯಷ್ಟೇ ಎಂದು ಅವರು ಹೇಳಿದರು. 

ಮಾನ್‌ ಅವರಲ್ಲದೆ, ಅತಿಶಿ, ಭಾರದ್ವಾಜ್‌, ಪಾಠಕ್‌ ಅವರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಜತೆಗಿನ ಚರ್ಚೆಗಳಲ್ಲಿ ಭಾಗವಹಿಸಿದ್ದು, ನಿಕಟ ಸಂಬಂಧ ಹೊಂದಿದ್ದಾರೆ.

ಜೈಲಿನಿಂದಲೇ ಸರ್ಕಾರ:

‘ಕೇಜ್ರಿವಾಲ್‌ ಜೈಲಿನಿಂದ ಸರ್ಕಾರ ನಡೆಸುತ್ತಾರೆ. ಇದಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಅಷ್ಟಕ್ಕೂ ಮುಖ್ಯಮಂತ್ರಿ ಅವರು ಹೊರಗಿದ್ದಾಗಲೂ ಕೇಂದ್ರ ಸರ್ಕಾರ ಅವರ ಇಡೀ ಆಡಳಿತವನ್ನು ದೆಹಲಿಯಲ್ಲಿ ಬಂಧಿಸಿದಂತಿತ್ತು’ ಎಂದು ಪಾಠಕ್‌ ಪ್ರತಿಕ್ರಿಯಿಸಿದರು.

‘ಜೈಲಿನಿಂದ ಆಡಳಿತ ನಡೆಸಲಾಗದು ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು ಎಂದು ಸಾಬೀತಾಗಲಿದೆ’ ಎಂದು ಅವರು ಹೇಳಿದರು.

ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರೂ ಕೆಲ ತಿಂಗಳಿಂದ ಜೈಲಿನಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರೂ ದೀರ್ಘಕಾಲ ಒಳಗೆ ಇರುವ ಸಾಧ್ಯತೆ ಇದೆ. ಆದ್ದರಿಂದ ದೆಹಲಿ ಸರ್ಕಾರದ ವ್ಯವಹಾರಗಳನ್ನು ನಡೆಸಲು ಎಎಪಿ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜಕೀಯ ಜವಾಬ್ದಾರಿಗಳನ್ನು ವಹಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT