ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2029ಕ್ಕೆ 1.50 ಲಕ್ಷ ವೈದ್ಯಕೀಯ ಸೀಟು ಲಭ್ಯ: ಸಚಿವ ಪ್ರಲ್ಹಾದ ಜೋಶಿ

Published 23 ಡಿಸೆಂಬರ್ 2023, 15:48 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಡವರ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. 2029ರ ವೇಳೆಗೆ 1.50 ಲಕ್ಷ ಸೀಟುಗಳು ಲಭ್ಯವಾಗಲಿವೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕಾಮೆಡ್ -ಕೆ ಕೇರ್‌, ಎಜುಕೇಶನ್ ಪ್ರಮೋಷನ್‌ ಸೊಸೈಟಿ ಫಾರ್‌ ಇಂಡಿಯಾ (ಇಪಿಎಸ್ಐ) ಶನಿವಾರ ಹಮ್ಮಿಕೊಂಡಿದ್ದ  ವಿಚಾರ ಸಂಕಿರಣ ಹಾಗೂ ರಾಷ್ಟ್ರೀಯ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.

2014ಲ್ಲಿ 51 ಸಾವಿರ ಸೀಟುಗಳು ಮಾತ್ರವೇ ಇದ್ದವು. ಈಗ ಸೀಟುಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ಸೀಟು ಹೆಚ್ಚಳದ ನಿರ್ಧಾರದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೂ ವೈದ್ಯಕೀಯ ಶಿಕ್ಷಣ ದೊರಕಲಿದೆ. ದೇಶದಲ್ಲಿನ ವೈದ್ಯರ ಕೊರತೆಯೂ ನೀಗಲಿದೆ ಎಂದರು.

ದೇಶದ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಕೊಡುಗೆ ನೀಡಿವೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು. ಚೀನಾ ಹಾಗೂ ಭಾರತಕ್ಕೆ ಯುವ ಜನರೇ ಶಕ್ತಿ. ಇಂತಹ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಎಂಜಿನಿಯರಿಂಗ್ ಪದವಿ ಪಡೆದ ಸಾಕಷ್ಟು ವಿದ್ಯಾರ್ಥಿಗಳಿಗೆ ಸೂಕ್ತ ಕೆಲಸ ಸಿಗುತ್ತಿಲ್ಲ. ಕೌಶಲದ ಕೊರತೆ ಇದಕ್ಕೆ ಪ್ರಮುಖ ಕಾರಣ. ಕೌಶಲ ಕೊರತೆ ನೀಗಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಟಿ.ಜಿ.ಸೀತಾರಾಂ, ತಾಂತ್ರಿಕ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಾಗಿದೆ. 13 ಭಾಷೆಗಳಲ್ಲಿ ಪುಸ್ತಕಗಳು ದೊರೆಯುತ್ತಿವೆ. ಎಐಸಿಟಿಇ ಅಧೀನದಲ್ಲಿರುವ ಕಾಲೇಜುಗಳು ಐಐಟಿ ಮಾದರಿಯ ಸೌಲಭ್ಯ, ಶಿಕ್ಷಣವನ್ನು ನೀಡುತ್ತಿವೆ ಎಂದರು. 

ಇಪಿಎಸ್ಐ ಸಂಸ್ಥೆಯ ನೂತನ ಅಧ್ಯಕ್ಷ ಎಂ.ಆರ್.ಜಯರಾಂ ಉಪಸ್ಥಿತರಿದ್ದರು.

ಎಂ.ಆರ್. ಜಯರಾಂ ಇಪಿಎಸ್ಐ ಅಧ್ಯಕ್ಷ 

ಇಪಿಎಸ್ಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಜಯರಾಂ ಆಯ್ಕೆಯಾಗಿದ್ದಾರೆ. ವಿಐಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಇಪಿಎಸ್ಐ ನಿಕಟಪೂರ್ವ ಅಧ್ಯಕ್ಷ ಟಿ.ಜಿ. ವಿಶ್ವನಾಥನ್‌ ಅವರು ಜಯರಾಂ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಅಧಿಕಾರ ಸ್ವೀಕರಿಸಿದ ಜಯರಾಂ ಇಡೀ ದೇಶದ 8 ಸಾವಿರ ವಿದ್ಯಾ ಸಂಸ್ಥೆಗಳು ಇಪಿಎಸ್ಐ ಸದಸ್ಯತ್ವ ಪಡೆದಿವೆ.  ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜತೆಗೆ ಕೌಶಲಯುಕ್ತ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಸರ್ಕಾರ ಖಾಸಗಿ ಕಾಲೇಜುಗಳ ಬಲವರ್ಧನೆಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT