ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ₹40 ಸಾವಿರ ಕೋಟಿ ಖೋತಾ: ಕೃಷ್ಣ ಬೈರೇಗೌಡ

'ಪ್ರಜಾವಾಣಿ‘ ವರದಿ ಪ್ರಸ್ತಾವ
Published 7 ಡಿಸೆಂಬರ್ 2023, 23:30 IST
Last Updated 7 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ‘ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ ಹಾಗೂ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ₹40 ಸಾವಿರ ಕೋಟಿ ಅನುದಾನ ಕಡಿಮೆಯಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಪ್ರಶ್ನೋತ್ತರ ಕಲಾಪದ ವೇಳೆ ಸೆ. 4ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ಪ್ರಕಟವಾದ ‘ಕೇಂದ್ರ ಪುರಸ್ಕೃತ 61 ಯೋಜನೆ: ಅನುದಾನ ಶೂನ್ಯ’ ವರದಿಯನ್ನು ಪ್ರದರ್ಶಿಸಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಚಿವರು ಉತ್ತರಿಸಿದರು.

‘ಕೇಂದ್ರದಿಂದ 61 ಇಲಾಖೆಗಳಿಗೆ ಬರಬೇಕಿದ್ದ ಅನುದಾನದಲ್ಲಿ ನಯಾ ಪೈಸೆ ಬಂದಿಲ್ಲ’ ಎಂದು ವೆಂಕಟೇಶ್‌ ಪ್ರಸ್ತಾಪಿಸುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ವೈ.ಎ. ನಾರಾಯಣಸ್ವಾಮಿ ಮತ್ತಿತರರು, ‘ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಚರ್ಚಿಸಲು ನಾವೂ ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಅನುದಾನ ನೀಡಿದರೂ ಅದನ್ನು ರಾಜ್ಯ ಸರಿಯಾಗಿ ಸದ್ಬಳಕೆ ಮಾಡಿಕೊಂಡಿಲ್ಲ. ಆರೋಪ ಮಾಡುವುದು ಸರಿಯಲ್ಲ’ ಎಂದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಆಗ ಉತ್ತರಿಸಿದ ಸಚಿವರು, ‘ಕೇಂದ್ರ ಪುರಸ್ಕೃತ ಕೆಲವು ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಇನ್ನೂ ಬಂದಿಲ್ಲ. ಬರಬಹುದೆಂಬ ನಿರೀಕ್ಷೆಯಿದೆ. 14 ಮತ್ತು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಒಟ್ಟು ₹11,495 ಕೋಟಿ ಮತ್ತು ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತ ಬರಬೇಕಿದೆ. ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಹೋಲಿಸಿದರೆ, ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗಿದೆ. ಇದರಿಂದ ನಮ್ಮ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ’ ಎಂದು ವಿವರಿಸಿದರು.

‘ಒಪಿಎಸ್‌ ಜಾರಿ: ಎಸಿಎಸ್‌ ಸಮಿತಿ ಶೀಘ್ರ ಪುನರ್‌ರಚನೆ’

‘ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಜಾರಿಗೊಳಿಸುವ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಸಮಿತಿಗೆ ಇನ್ನಷ್ಟು ಸದಸ್ಯರನ್ನು ಸೇರಿಸಿ 10 ದಿನಗಳ ಒಳಗೆ ಪುನರ್‌ ರಚಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರ, ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಉತ್ತರಿಸಿದ ಕೃಷ್ಣ ಬೈರೇಗೌಡ, ‘ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಮುಂದುವರಿಸಬೇಕೆ? ಒಪಿಎಸ್ ವ್ಯವಸ್ಥೆ ಜಾರಿ ಮಾಡಬೇಕೇ ಎಂಬುದರ ಬಗ್ಗೆ ವಿಸ್ತೃತ ವರದಿ ನೀಡುವಂತೆ ಎಸಿಎಸ್‌ ಅವರ ಏಕ ವ್ಯಕ್ತಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಈಗಾಗಲೇ ಮೂರು ಬಾರಿ ಸಭೆ ನಡೆಸಿದೆ. ಆದಷ್ಟು ಬೇಗ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ವರದಿ ನೀಡಲು ಸಾಧ್ಯವಾಗಿಲ್ಲ’ ಎಂದರು.

‘ಮೂರರಿಂದ ಐವರು ಸದಸ್ಯರನ್ನು ಸೇರಿಸಿ ಸಮಿತಿಯನ್ನು ಪುನರ್‌ ರಚಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಲ್ಲದೆ, ಒಪಿಎಸ್‌ ಜಾರಿಗೆ ಮುಂದಾಗಿರುವ ರಾಜಸ್ಥಾನ, ಛತ್ತೀಸಗಢ, ಪಂಜಾಬ್‌ ರಾಜ್ಯಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸುವಂತೆ ಅವರು ತಿಳಿಸಿದ್ದಾರೆ. ಸಮಿತಿಯ ಕಾರ್ಯವ್ಯಾಪ್ತಿ, ವರದಿ ಕೊಡಲು ಕಾಲಮಿತಿ ಸೇರಿದಂತೆ ಷರತ್ತು ಮತ್ತು ನಿಯಮಗಳನ್ನು ಶೀಘ್ರದಲ್ಲಿ ರಚಿಸಲಾಗುವುದು. ಆದಷ್ಟು ಬೇಗ ವರದಿ ನೀಡುವಂತೆಯೂ ಸಮಿತಿಗೆ ಸೂಚಿಸಲಾಗುವುದು’ ಎಂದರು. 

‘ಸದಸ್ಯರು ನೀಡಿದ ಸಲಹೆಯಂತೆ, ಅನುದಾನಿತ ಸಂಸ್ಥೆಗಳ ಸಿಬ್ಬಂದಿಯೂ ಪಿಂಚಣಿಯಿಂದ ವಂಚಿತರಾಗದಂತೆ ಗಮನಹರಿಸಲಾಗುವುದು’ ಎಂದರು.

‘ಎನ್‌ಪಿಎಸ್‌ ಯೋಜನೆಯಂತೆ ಭವಿಷ್ಯ ನಿಧಿ (ಪಿಎಫ್‌) ಪಾವತಿಸಿದ್ದು, ಆ ಮೊತ್ತ ಕೇಂದ್ರದ ಖಾತೆಯಲ್ಲಿದೆ. ಎನ್‌ಪಿಎಸ್‌ ಯೋಜನೆಯಿಂದ ಹೊರಬರಬೇಕಾದರೆ ಈ ಹಣ ವಾಪಸ್‌ ಬರಬೇಕು. ರಾಜಸ್ಥಾನ ಸರ್ಕಾರ ಈಗಾಗಲೇ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದೆ. ಆದರೆ, ಕೇಂದ್ರ ಅದಕ್ಕೆ ಒಪ್ಪಿಲ್ಲ. ಈ ಸಮಸ್ಯೆಯೂ ಇದೆ’ ಎಂದೂ ಸಚಿವರು ವಿವರಿಸಿದರು.

‘ಹೊಸ ಮದ್ಯದಂಗಡಿ ಪರವಾನಗಿ ಪ್ರಸ್ತಾವ ಇಲ್ಲ’

ವಿಧಾನ ಪರಿಷತ್‌: ‘ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು.

ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಕುರಿತ ಕೆಲವು ವದಂತಿಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

‘ಗ್ರಾಮೀಣ ಭಾಗಗಳಲ್ಲಿ ಅಂಗಡಿ ಮತ್ತಿತರ ಕಡೆಗಳಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸಲು ಸಿಎಲ್-7ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆಯೇ ಹೊರತು ಮದ್ಯಪಾನಕ್ಕೆ ಎಲ್ಲಿಯೂ ಉತ್ತೇಜನ ನೀಡಿಲ್ಲ’ ಎಂದೂ ತಿಳಿಸಿದರು.

‘ಕಾರ್ಮಿಕ ಸಾರಿಗೆ ವಲಯ ಸ್ಥಾಪನೆ– ಲಾಡ್

ವಿಧಾನ ಪರಿಷತ್‌: ‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲೇ ಕಾರ್ಮಿಕ ಸಾರಿಗೆ ವಲಯವನ್ನು ಸ್ಥಾಪಿಸಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಬಿಜೆಪಿಯ ಪ್ರತಾಪಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಸಾರಿಗೆ ವಲಯ ಸ್ಥಾಪನೆಯಾದರೆ, ನೋಂದಾಯಿತ ವಾಣಿಜ್ಯ ವಾಹನ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದರು.

‘ಚಾಲಕರು, ಕ್ಲೀನರ್, ಮೆಕ್ಯಾನಿಕ್‌ಗಳು, ಪಂಕ್ಚರ್ ಅಂಗಡಿಗಳಲ್ಲಿ ಕೆಲಸ ಮಾಡುವವರು ಮತ್ತಿತರರು ಇದರ ಲಾಭ ಪಡೆಯಲಿದ್ದಾರೆ. ರಾಜ್ಯದಲ್ಲಿ ಈ ರೀತಿಯ 35 ಲಕ್ಷ ಕಾರ್ಮಿಕರಿದ್ದಾರೆ. ಈ ಸಂಬಂಧ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‌ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ’ ಎಂದರು.

‘ಸಾರಿಗೆ ಇಲಾಖೆಯ ಶೇ 10ರಷ್ಟು ಸೆಸ್ ಮೊತ್ತ ಅಂದಾಜು ₹274 ಕೋಟಿಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಲಿದ್ದೇವೆ. ತಿಂಗಳೊಳಗೆ ಈ ಯೋಜನೆ ಅನುಷ್ಠಾನ ಮಾಡಲಾಗುವುದು’ ಎಂದರು ಹೇಳಿದರು.

ಅಕ್ರಮ ವಲಸಿಗರ ಗಡೀಪಾರು– ಸಚಿವ ಪರಮೇಶ್ವರ

ವಿಧಾನ ಪರಿಷತ್‌: ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ವಿಶೇಷ ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿ ಗಡಿಯವರೆಗೂ ಕರೆದೊಯ್ದು ಬಿಟ್ಟು ಬರಲಾಗುತ್ತಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಕಾಂಗ್ರೆಸ್ಸಿನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚಲಾಗುತ್ತಿದೆ’ ಎಂದರು.

‘ಇತ್ತೀಚೆಗೆ 45 ದಿನ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸ್‌ ಇಲಾಖೆ, ಐದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಅಕ್ರಮ ವಲಸಿಗರು ಇರುವ 28 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಹೀಗೆ ಹಂತ ಹಂತವಾಗಿ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ವಾಸಿಸುತ್ತಿರುವ ಬಾಂಗ್ಲಾ ಹಾಗೂ ವಿದೇಶಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಸಲುವಾಗಿ ಗುಪ್ತಚರ ವಿಭಾಗದ ಸಿಬ್ಬಂದಿ, ಠಾಣಾ ಸಿಬ್ಬಂದಿ ಸೂಕ್ತ ಗಸ್ತು ಮಾಡುತ್ತಿದ್ದಾರೆ’  ಎಂದರು.

‘ಇದುವರೆಗೆ ಬಾಂಗ್ಲಾ ಮತ್ತು ವಿದೇಶಿ ಅಕ್ರಮ ವಲಸಿಗರ ಮೇಲೆ ಒಟ್ಟು 764 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳು ದಾಖಲಾಗಿವೆ. ವಿದೇಶಿಯರ ವಿರುದ್ಧವೂ 711 ಪ್ರಕರಣಗಳು ದಾಖಲಾಗಿವೆ. ಜೊತೆಗೆ, ಒಟ್ಟು 135 ಜನ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ’ ಎಂದರು.

‘ಅಕ್ರಮ ವಲಸಿಗರಿಗೆ ನಕಲಿ ಆಧಾರ್‌ ಕಾರ್ಡ್ ಸೇರಿದಂತೆ ಇತರ ದಾಖಲೆಗಳನ್ನು ಮಾಡಿ ಕೊಡುತ್ತಿರುವ ಏಜೆಂಟರನ್ನು ಪತ್ತೆ ಮಾಡಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT