ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದಲೇ ಶೇ 50ರಷ್ಟು ಹಾಸಿಗೆ ನೀಡಬೇಕು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರಿಂದ ಸಕಾರಾತ್ಮಕ ಸ್ಪಂದನೆ
Last Updated 18 ಜುಲೈ 2020, 13:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್-19 ಪ್ರಕರಣಗಳ ಸಂಖ್ಯೆ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ 50ರಷ್ಟನ್ನು ಭಾನುವಾರದಿಂದಲೇ (ಜುಲೈ 19) ಕೋವಿಡ್ ಚಿಕಿತ್ಸೆಗೆ ನೀಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಾಕೀತು ಮಾಡಿದರು.

ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಶನಿವಾರ ಚರ್ಚಿಸಿದ ಅವರು, ‘ವೈದ್ಯರು, ನರ್ಸ್‌ಗಳ ಕೊರತೆ ಇದ್ದರೆ ಸರ್ಕಾರವೇ ನೇಮಕ ಮಾಡಲು ಸಿದ್ಧ. ಅಲ್ಲದೆ, ಯಾವುದೇ ರೀತಿಯ ನೆರವು ಅಗತ್ಯವಿದ್ದರೂ ಕೊಡಲು ಬದ್ಧ’ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಯ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ಕೆಲವು ಕಾಲೇಜುಗಳು ಶೇ 50ರಷ್ಟು ಹಾಗೂ ಇನ್ನೂ ಕೆಲವು ಕಾಲೇಜುಗಳು ಶೇ 80ರಷ್ಟು ಹಾಸಿಗೆ ನೀಡುತ್ತೇವೆ. ಅಷ್ಟೇ ಅಲ್ಲ, ಲಭ್ಯವಿರುವ ವೆಂಟಿಲೇಟರ್‌ಗಳನ್ನೂ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಇನ್ನೂ ಹೆಚ್ಚಿನ ಸಹಕಾರ ನೀಡಬೇಕಿದೆ. ಆದರೆ, ಕೆಲವೆಡೆಗಳಲ್ಲಿ ಕೋವಿಡ್ ಹಾಗೂ ಕೋವಿಡ್ ಅಲ್ಲದ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ’ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

‘ಕೋವಿಡ್‍ಗೆ ಚಿಕಿತ್ಸೆ ಅಗತ್ಯವಿರುವವರು ಹಾಗೂ ಇತರ ಸಮಸ್ಯೆಗಳಿಂದ ಬಳಲುತ್ತಿರುವವರು ಚಿಕಿತ್ಸೆ ದೊರೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಹಾಗೂ ಹಲವರು ಸಾವಿಗೀಡಾದ ದಾರುಣ ಘಟನೆ ನಡೆದಿರುವುದು ಖೇದಕರ’ ಎಂದ ಮುಖ್ಯಮಂತ್ರಿ, ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಮಾದರಿಯಾಗಿತ್ತು. ಮುಂದೆಯೂ ಮಾದರಿಯಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಈ ಹಿಂದೆ ನಡೆದ ಸಭೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2 ಸಾವಿರ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 4,500 ಹಾಸಿಗೆಗ ಲಭ್ಯತೆಯ ಬಗ್ಗೆ ಒಮ್ಮತದ ತೀರ್ಮಾನ ಆಗಿತ್ತು. ಆದರೆ, ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಸಿಗೆ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

‘ಈ ಹಿಂದೆ ನೀಡಿದ ಭರವಸೆಯಂತೆ ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಸಿಗೆಗಳನ್ನು ಒದಗಿಸದೆ ಇರುವುದು ಹಾಗೂ ಇನ್ನೂ ಅನೇಕ ಸಮಸ್ಯೆಗಳು ಕೆಲವು ವೈದ್ಯಕೀಯ ಕಾಲೇಜುಗಳಿಗೆ ಸಚಿವರು ಭೇಟಿ ನೀಡಿದಾಗ ತಿಳಿದುಬಂದಿದೆ’ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

‘ಇಂದಿನ ಈ ತುರ್ತು ಸಂದರ್ಭದಲ್ಲಿ ಮಾನವೀಯತೆಯಿಂದ ಕೋವಿಡ್ ಚಿಕಿತ್ಸೆಗೆ ಸಹಕರಿಸಬೇಕು. ಕೋವಿಡ್ ಇಲ್ಲದ ಇತರ ರೋಗಿಗಳಿಗೂ ಚಿಕಿತ್ಸೆ ನಿರಾಕರಿಸದೆ, ರಾಜ್ಯದ ವೈದ್ಯಕೀಯ ವ್ಯವಸ್ಥೆಯಲ್ಲಿ ಸಮತೋಲನ ಇರುವಂತೆ ಎಚ್ಚರ ವಹಿಸಬೇಕು. ಕಾಲೇಜುಗಳ ಹಾಸಿಗೆಗಳ ಮೇಲೆ‌ ನಿಗಾ ಇಡಲು‌ ಅಧಿಕಾರಿಗಳನ್ನು‌‌ ಈಗಾಗಲೇ ನೇಮಕ‌ ಮಾಡಲಾಗಿದೆ’ ಎಂದೂ ಅವರು ಹೇಳಿದರು.

ಸಭೆಗೆ ಹಾಜರಾಗದ ವೈದೇಹಿ ವೈದ್ಯಕೀಯ ಕಾಲೇಜಿಗೆ ನೋಟಿಸ್ ನೀಡಲು ಮುಖ್ಯಮಂತ್ರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT