ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್‌ ಸ್ವಚ್ಛಪಡಿಸುವ 7,493 ಮಂದಿ: ಎಂ.ಶಿವಣ್ಣ

Last Updated 16 ಏಪ್ರಿಲ್ 2023, 21:45 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ಮ್ಯಾನ್‌ ಹೋಲ್‌ನೊಳಗೆ ಸ್ವತಃ ಇಳಿದು ಸ್ವಚ್ಛಗೊಳಿಸುವ (ಮ್ಯಾನುವಲ್‌ ಸ್ಕ್ಯಾವೆಂಜರ್‌) 7,493 ಮಂದಿ ಇದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದು ಬಂದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1,625 ಮಂದಿ ಇದ್ದಾರೆ. ನಂತರದ ಸ್ಥಾನಗಳಲ್ಲಿ ಮೈಸೂರು ಜಿಲ್ಲೆ (1,381) ಹಾಗೂ ಕೋಲಾರ ಜಿಲ್ಲೆ (1,224) ಇವೆ.

‘ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ನಾಲ್ಕು ವರ್ಷಗಳಿಂದ ನಡೆಸಿದ ಸಮೀಕ್ಷೆ ಪೂರ್ಣಗೊಂಡಿದ್ದು, ಈ ಅಂಕಿ ಅಂಶ ದೊರೆತಿದೆ’ ಎಂದು ಆಯೋಗದ ಅಧ್ಯಕ್ಷ ಎಂ.ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮ್ಯಾನ್‌ಹೋಲ್‌ಗೆ ಜನರನ್ನು ಇಳಿಸುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೂ ಇಳಿದು ಕೆಲಸ ಮಾಡುವುದು ಇಂದಿಗೂ ಮುಂದು
ವರಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಈ ಹಿಂದೆಯೂ ಹಲವು ಸಮೀಕ್ಷೆ ನಡೆಸಲಾಗಿದೆ. 2020ರಲ್ಲಿ 1,968 ಮ್ಯಾನುವಲ್‌ ಸ್ಕ್ಯಾವೆಂಜರ್‌ ಗಳನ್ನು ಗುರುತಿಸಲಾಗಿತ್ತು. 2018ರಲ್ಲಿ 4,807 ಮಂದಿ ಇದ್ದರು. ಅವರಲ್ಲಿ 1,424 ಮಂದಿ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೆ, ಮೈಸೂರಿನಲ್ಲಿ 1,381, ಕೋಲಾರದಲ್ಲಿ 985 ಮಂದಿ ಇದ್ದರು. 2016ರ ಸಮೀಕ್ಷೆ ಪ್ರಕಾರ, 417 ಮಂದಿ ಇದ್ದರು. ಅವರಲ್ಲಿ 148 ಮಂದಿ ಕೋಲಾರದವರು. 2013ರ ಸಮೀಕ್ಷೆಯಲ್ಲಿ 301 ಮಂದಿ ಗುರುತಿಸಲಾಗಿತ್ತು, 201 ಮಂದಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಇದ್ದರು’ ಎಂದು ಮಾಹಿತಿ ನೀಡಿದರು.

92 ಮಂದಿ ಸಾವು: ‘1993ರಿಂದ ಇಲ್ಲಿಯವರೆಗೆ ರಾಜ್ಯದಾದ್ಯಂತ 92 ಮಂದಿ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌ ಗಳು ಮೃತಪಟ್ಟಿದ್ದಾರೆ. ಇವರಲ್ಲಿ ಬೆಂಗಳೂರಿನವರು 40 ಮಂದಿ, ಮೈಸೂರಿನ 6 ಹಾಗೂ ಕೋಲಾರದ ಐವರು ಸೇರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 10 ಜನರು ಮೃತಪಟ್ಟಿದ್ದು, ಪ್ರಕರಣಗಳೂ ದಾಖಲಾಗಿವೆ’ ಎಂದು ತಿಳಿಸಿದರು.

‘ಸುರಕ್ಷಾ ಪರಿಕರಗಳಿಲ್ಲ’

‘ಸ್ಥಳೀಯ ಸಂಸ್ಥೆಗಳು ಒಳಚರಂಡಿ ಹೂಳು ತೆಗೆಯಲು ಡಿಸಿಲ್ಟಿಂಗ್‌, ಜೆಟ್ಟಿಂಗ್‌ ಯಂತ್ರಗಳನ್ನು ಖರೀದಿಸಲು ಮುಂದಾಗಿವೆ. ಆದರೆ, ಮ್ಯಾನುವಲ್‌ ಸ್ಕ್ಯಾವೆಂಜರ್‌ ಗಳನ್ನು ಮಳೆಗಾಲದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ, ಸುರಕ್ಷತಾ ಪರಿಕರಗಳನ್ನು ಕೊಡುತ್ತಿಲ್ಲ. ಮ್ಯಾನ್‌ಹೋಲ್‌, ಸೆಪ್ಟಿಕ್‌ ಟ್ಯಾಂಕ್‌ಗಳಿಗೆ ಇಳಿಸಲಾಗುತ್ತಿದೆ’ ಎಂದು ಪೌರಕಾರ್ಮಿಕರೊಬ್ಬರು ತಿಳಿಸಿದರು. ‘ನನ್ನಂತೆಯೇ ಹಲವು ಪೌರಕಾರ್ಮಿಕರು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಮತ್ತೊಬ್ಬರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ದಸಂಸ ರಾಜ್ಯ ಸಂಚಾಲಕ ಚೋರನಹಳ್ಳಿ ಶಿವಣ್ಣ, ‘ಪರಿಶಿಷ್ಟರಿಗೆ ಸಮಾನತೆ ಮರೀಚಿಕೆಯಾಗಿದೆ. ಪೌರಕಾರ್ಮಿಕರನ್ನು ಮಲ ಗುಂಡಿಗಳ ಸ್ವಚ್ಛತೆಗೆ ಬಳಸಿಕೊಳ್ಳಲಾಗುತ್ತಿದೆ. ಇದು ನಿಲ್ಲಬೇಕು. ಪೌರಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಹಾಗೂ ಪುನರ್ವಸತಿ ಕಲ್ಪಿಸಬೇಕು. ಸುರಕ್ಷಾ ಪರಿಕರಗಳನ್ನು ಒದಗಿಸಬೇಕು. ಅಮಾನವೀಯ ಕೆಲಸಕ್ಕೆ ಬಳಸಿಕೊಂಡರೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT