ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ಎರಡು ಬಾರಿ ಪ್ರವೇಶ; ರಾಜ್ಯದ ತಿರಸ್ಕಾರ

Published 9 ಜುಲೈ 2024, 16:31 IST
Last Updated 9 ಜುಲೈ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ಎರಡು ಬಾರಿ ಪ್ರವೇಶ ಪ್ರಕ್ರಿಯೆಗೆ ಅವಕಾಶ ಕಲ್ಪಿಸಬೇಕು ಎನ್ನುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸೂಚನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.

‘ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು 2035ರ ವೇಳೆಗೆ ಈಗಿರುವ ಪ್ರಮಾಣಕ್ಕಿಂತ ಶೇ 50ರಷ್ಟು ಹೆಚ್ಚಳ ಮಾಡುವ ಗುರಿ ಸಾಧಿಸಲು ಎಲ್ಲ ಕಾಲೇಜುಗಳಲ್ಲೂ ವರ್ಷಕ್ಕೆ ಎರಡು ಬಾರಿ ಪ್ರವೇಶ ನೀಡಬೇಕು ಎನ್ನುವ ಸೂಚನೆ ಪಾಲಿಸಲು ಸಾಧ್ಯವಿಲ್ಲ. ಸರ್ಕಾರಿ, ಖಾಸಗಿ ಕಾಲೇಜುಗಳು ಅಧ್ಯಾಪಕರ ಕೊರತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಹಾಗಾಗಿ, ನಿಯಮ ಪಾಲನೆ ಅಸಾಧ್ಯವೆಂದು ಪತ್ರ ಬರೆಯಲಾಗುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಜುಲೈ–ಆಗಸ್ಟ್‌ ಹಾಗೂ ಜನವರಿ–ಫೆಬ್ರುವರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಯುಜಿಸಿ ಈಚೆಗೆ ಸುತ್ತೋಲೆ ಹೊರಡಿಸಿತ್ತು.

‘ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಇಂತಹ ಪದ್ಧತಿ ಇದೆ. ಭಾರತದಂತಹ ದೇಶಗಳ ಶಿಕ್ಷಣ ವ್ಯವಸ್ಥೆಗೆ ಈ ಪದ್ಧತಿ ಕಷ್ಟಕರವಾಗುತ್ತದೆ. ಯುಜಿಸಿ ಇಂತಹ ನಿಯಮ ರೂಪಿಸುವ ಮೊದಲು ಆಯಾ ರಾಜ್ಯಗಳ ಜತೆ ಚರ್ಚಿಸಬೇಕು. ಈಗಾಗಲೇ ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸುವ ಕೆಲಸ ಮುಕ್ತಾಯದ ಹಂತದಲ್ಲಿದ್ದು, ಆಯೋಗದ ಅಂತಿಮ ವರದಿ ಶೀಘ್ರ ದೊರಕಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT