ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ವಿಮಾನ ಸಂಚಾರ: ಬೆಂಗಳೂರು ಪ್ರಥಮ, ಬೀದರ್‌ ಕೊನೆ

ರಾಜ್ಯದಲ್ಲಿ ಬೆಂಗಳೂರು ಪ್ರಥಮ, ಮಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಂತರದ ಸ್ಥಾನ
Published 23 ಡಿಸೆಂಬರ್ 2023, 5:20 IST
Last Updated 23 ಡಿಸೆಂಬರ್ 2023, 5:20 IST
ಅಕ್ಷರ ಗಾತ್ರ

ಬೀದರ್‌: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಬೀದರ್ ವಿಮಾನ ನಿಲ್ದಾಣದಿಂದ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಬೆಳೆಸಿದ್ದಾರೆ.

2023ನೇ ಸಾಲು ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದುವರೆಗೆ ಬೀದರ್‌ ವಿಮಾನ ನಿಲ್ದಾಣದಿಂದ 10,140 ಪ್ರಯಾಣಿಕರಷ್ಟೇ ಸಂಚರಿಸಿದ್ದಾರೆ. ಇದು ರಾಜ್ಯದ ಇತರೆ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ತೀರ ಕಡಿಮೆ. ವಿಮಾನದಲ್ಲಿ ಸಂಚರಿಸುವವರ ಸ್ಥಾನದಲ್ಲಿ ಬೀದರ್‌ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಬೀದರ್‌ ವಿಮಾನ ನಿಲ್ದಾಣದಿಂದ ಸದ್ಯ ಬೆಂಗಳೂರಿಗೆ ಮಾತ್ರ ವಿಮಾನ ಸಂಚರಿಸುತ್ತಿದೆ. ಪ್ರತಿದಿನ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ ಸಂಜೆ 4.30ಕ್ಕೆ ಬೀದರ್‌ ಬಂದು ಸೇರುತ್ತದೆ. ಸಂಜೆ 4.35ಕ್ಕೆ ಬೀದರ್‌ನಿಂದ ಹೊರಟು ಸಂಜೆ 5.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುತ್ತದೆ. ನಿತ್ಯ ಒಂದೇ ವಿಮಾನ ಸಂಚರಿಸುತ್ತಿರುವ ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆ ಇರಲು ಪ್ರಮುಖ ಕಾರಣ ಎಂದು ಗೊತ್ತಾಗಿದೆ.

ಬೀದರ್‌ ಸಮೀಪದಲ್ಲೇ ತೆಲಂಗಾಣದ ರಾಜಧಾನಿ ಹೈದರಾಬಾದ್‌ ಇದೆ. ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಬೆಂಗಳೂರು ಸೇರಿದಂತೆ ಜಗತ್ತಿನ ಎಲ್ಲ ಭಾಗಗಳಿಗೆ ವಿಮಾನಗಳು ಹಾರಾಡುತ್ತವೆ. ಈ ಪೈಕಿ ಬೀದರ್‌ನ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವ ಹೆಚ್ಚಿನವರು ಹೈದರಾಬಾದ್‌ಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬೀದರ್‌ಗೆ ಭೇಟಿ ಕೊಡುತ್ತಾರೆ. ಇನ್ನು, ಕಲಬುರಗಿಗೂ ವಿಮಾನಯಾನ ಸೇವೆ ಆರಂಭಿಸಿರುವುದರಿಂದ ಕೆಲವರು ಆ ಮಾರ್ಗದ ಮೂಲಕವೂ ಬರುತ್ತಾರೆ. ಇದು ಕೂಡ ಪ್ರಯಾಣಿಕರ ಸಂಖ್ಯೆ ತಗ್ಗಲು ಪ್ರಮುಖ ಕಾರಣ ಎನ್ನುತ್ತಾರೆ ವಿಮಾನ ನಿಲ್ದಾಣದ ಅಧಿಕಾರಿಗಳು.

ಬೆಂಗಳೂರು ಪ್ರಥಮ

ಇನ್ನು, ರಾಜ್ಯದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ, ದಟ್ಟಣೆ ಇರುವ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗ್ರ ಸ್ಥಾನವಿದೆ. ಪ್ರಸಕ್ತ ಸಾಲಿನಲ್ಲಿ 31.91 ಮಿಲಿಯನ್‌ ಜನ ವಿವಿಧ ಭಾಗಗಳಿಗೆ ಸಂಚರಿಸಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಜನ ಪ್ರಯಾಣಿಸುವ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನವಿದೆ. ನವದೆಹಲಿ ಮತ್ತು ಮುಂಬೈ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಂಕಿ ಅಂಶಗಳು ತಿಳಿಸುತ್ತವೆ.

ಮಂಗಳೂರಿಗೆ ಎರಡನೇ ಸ್ಥಾನ

ರಾಜ್ಯದ ವಿಮಾನ ನಿಲ್ದಾಣಗಳಿಂದ ಅತಿ ಹೆಚ್ಚು ಜನ ಸಂಚರಿಸುವ ವಿಮಾನ ನಿಲ್ದಾಣಗಳಲ್ಲಿ ಮಂಗಳೂರಿಗೆ ಎರಡನೇ ಸ್ಥಾನವಿದೆ. ಪ್ರಸಕ್ತ ಸಾಲಿನಲ್ಲಿ 18.92 ಲಕ್ಷ ಜನ ಸಂಚರಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 3.22 ಲಕ್ಷ, ಬೆಳಗಾವಿಯಿಂದ 2.97 ಲಕ್ಷ, ಮೈಸೂರಿನಿಂದ 1.88 ಲಕ್ಷ, ಕಲಬುರಗಿಯಿಂದ 79,143 ಜನ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಸಮಯ ಬದಲಾವಣೆ ಅಗತ್ಯ

ಬೀದರ್ ಹಾಗೂ ಬೆಂಗಳೂರು ನಡುವೆ ಸದ್ಯ ಸಂಚರಿಸುತ್ತಿರುವ ವಿಮಾನದ ಸಮಯ ಸೂಕ್ತವಾಗಿಲ್ಲ‌. ಸಮಯ ಬದಲಾವಣೆ ಮಾಡುವುದು ಅಗತ್ಯವಾಗಿದೆ. ಸಂಜೆಯ ಬದಲು ಬೆಳಿಗ್ಗೆ ಏಳು ಅಥವಾ ಎಂಟು ಗಂಟೆಗೆ ಬೀದರ್ ನಿಂದ ಪ್ರಯಾಣ ಬೆಳೆಸಬೇಕು. ಸಂಜೆ ಬೆಂಗಳೂರಿನಿಂದ ಬೀದರ್ ಗೆ ಬರಬೇಕು. ಹೀಗೆ ಮಾಡಿದರೆ ಒಂದೇ ದಿನ ಕೆಲಸ ಮುಗಿಸಿಕೊಂಡು ಬರುವವರಿಗೆ ಅನುಕೂಲವಾಗುತ್ತದೆ ಎಂದು ಉದ್ಯಮಿ ಬಸವರಾಜ ಧನ್ನೂರ ಅಭಿಪ್ರಾಯ ಪಟ್ಟಿದ್ದಾರೆ. ಮೇಲಿಂದ ‘ಸ್ಟಾರ್ ಏರ್’ ವಿಮಾನಯಾನ ಸಂಸ್ಥೆ‌ ಹೇಳಿಕೊಳ್ಳುವಂತಹದ್ದಲ್ಲ. ಅದರ ಬದಲು ಇಂಡಿಗೋ‌ ಸೇರಿದಂತೆ ಇತರೆ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಬೇಕು. ‘ಉಡಾನ್’ ಯೋಜನೆಗೆ‌ ಅನುಗುಣವಾಗಿ ದರ ಇಡಬೇಕು. ಆರಂಭದಲ್ಲಿ ಕಡಿಮೆ ಶುಲ್ಕ ಇರಿಸಿ ನಂತರ ಏಕಾಏಕಿ ಹೆಚ್ಚಿಸಿದರೆ ಹೊರೆಯಾಗುತ್ತದೆ ಎಂದು ತಿಳಿಸಿದರು.

ಪದೇ ಪದೇ ರದ್ದಾಗಬಾರದು

ಬೀದರ್-ಬೆಂಗಳೂರು ನಡುವಿನ ವಿಮಾನ ಪದೇ ಪದೇ ರದ್ದು ಮಾಡಬಾರದು. ಹೀಗೆ ಮಾಡಿದರೆ ಸಂಚರಿಸುವವರಲ್ಲಿ ಗೊಂದಲ ಉಂಟಾಗುತ್ತದೆ. ನಿಖರತೆ ಇರುವುದಿಲ್ಲ. ಅದರ ಕಡೆಗೆ ಗಮನ ಹರಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ತಿಳಿಸಿದರು. ಸದ್ಯ ಬೀದರ್-ಬೆಂಗಳೂರಿಗಷ್ಟೇ ವಿಮಾನಯಾನ ಸೇವೆ ಇದೆ. ಅದನ್ನು ವಿಸ್ತರಿಸಬೇಕು. ಬೀದರ್-ಮುಂಬೈ ಬೀದರ್-ಹುಬ್ಬಳ್ಳಿ ಸೇರಿದಂತೆ ಅಗತ್ಯ ಇರುವ ಕಡೆ ವಿಮಾನ ಆರಂಭಿಸಬೇಕು. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅವರಿಗೆ ಸೌಕರ್ಯ ಇಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT