ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆ ಕೈಗೊಂಡಿರುವ ನಿರ್ಣಯವನ್ನು ವಿವಿಧ ಪಕ್ಷಗಳ ನಾಯಕರು ಪಕ್ಷ ಭೇದ ಮರೆತು ಖಂಡಿಸಿದ್ದು, ಮೇಕೆದಾಟು ಯೋಜನೆಗೆ ಅಡ್ಡಿ ಮಾಡುತ್ತಿರುವ ತಮಿಳುನಾಡಿನ ವಿರುದ್ಧ ಬುಧವಾರ (ಮಾ.23) ವಿಧಾನ ಮಂಡಲದ ಉಭಯಸದನಗಳಲ್ಲಿ ನಿರ್ಣಯ ಅಂಗೀಕರಿಸಲು ನಿರ್ಧರಿಸಲಾಯಿತು.

ಈ ವಿಷಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಪ್ರಸ್ತಾಪವಾಯಿತು.

ಶೂನ್ಯವೇಳೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ,ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ಮತ್ತು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡಿನ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನಾಡಿನ ನೆಲ, ಜಲ, ಭಾಷೆ ಮತ್ತು ಗಡಿ ರಕ್ಷಣೆಯ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಿಲುವು ಒಂದೇ. ತಮಿಳುನಾಡು ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಮೊದಲು ಕಾನೂನು ತಜ್ಞರ ಜತೆ ಮಾತುಕತೆ ನಡೆಸುತ್ತೇನೆ. ನಾಳೆಯೇ ನಿರ್ಣಯ ಮಂಡಿಸುತ್ತೇನೆ’ ಎಂದರು.

‘ತಮಿಳುನಾಡು ವಿಧಾನಸಭೆಯ ನಿರ್ಣಯ ರಾಜ್ಯದ ಹಕ್ಕಿನ ಮೇಲೆ ನಡೆಸಿರುವ ಗದಾ ಪ್ರಹಾರ. ಇದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವೂ ಹೌದು. ಮೇಕೆದಾಟು ಯೋಜನೆ ಜಾರಿ ಮಾಡಿಯೇ ತೀರುತ್ತೇವೆ. ತಮಿಳುನಾಡು ಕೂಡ ಕಾವೇರಿ ನೀರು ಬಳಸಿ ಸಾಕಷ್ಟು ಯೋಜನೆಗಳನ್ನು ರಾಜ್ಯದ ಗಮನಕ್ಕೆ ತರದೇ, ಕೇಂದ್ರದ ಒಪ್ಪಿಗೆ ಪಡೆಯದೇ ಕೈಗೊಂಡಿದೆ’ ಎಂದರು.

‘ನಮ್ಮ ಪಾಲಿಗೆ ಬಂದ ನೀರನ್ನು ಸದ್ಬಳಕೆ ಮಾಡಲು ಮೇಕೆದಾಟು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಜನರ ಕುಡಿಯುವ ಉದ್ದೇಶಕ್ಕಾಗಿ ಈ ನೀರನ್ನು ಬಳಸುತ್ತಿದ್ದೇವೆ. ಚೆನ್ನೈನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಆದಾಗ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳು ಸೇರಿ ತೆಲುಗು ಗಂಗಾ ಯೋಜನೆಯ ಮೂಲಕ ಅಲ್ಲಿಗೆ ನೀರು ಒದಗಿಸಲಾಯಿತು. ರಾಜ್ಯದ ಕೃಷ್ಣಾ ನದಿಯಿಂದ ನೀರಿನ ಪಾಲು ತೆಲುಗು ಗಂಗಾಗೆ ನೀಡಿದ್ದೇವೆ. ಈಗ ಅವರು ನಮ್ಮ ಯೋಜನೆಗೆ ಅಡ್ಡಿ ಮಾಡುತ್ತಿದ್ದಾರೆ’ ಎಂದು ಬೊಮ್ಮಾಯಿ ಹರಿಹಾಯ್ದರು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ಅವರು, ‘ಯಾವ ರಾಜ್ಯಕ್ಕೆ ನೀರಿನ ಪಾಲು ಎಷ್ಟು ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹಂಚಿಕೆ ಮಾಡಿದೆ. ಹಾಗಿದ್ದರೂ ಮೇಕೆದಾಟು ವಿರುದ್ಧ ತಮಿಳುನಾಡು ವಿಧಾನಸಭೆ ನಿರ್ಣಯ ಕೈಗೊಳ್ಳುವ ಮೂಲಕ ನಮ್ಮ ಅಭಿವೃದ್ಧಿ ಯೋಜನೆಗೆ ಅಡ್ಡಗಾಲು ಹಾಕಿದೆ. ಈ ನೀರಿನ ಬಳಕೆ ನಮ್ಮ ನ್ಯಾಯೋಚಿತ ಹಕ್ಕು’ ಎಂದು ಪ್ರತಿಪಾದಿಸಿದರು.

ಪರಿಷತ್‌ನಲ್ಲೂ ಪ್ರಸ್ತಾಪ: ವಿಧಾನ ಪರಿಷತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ‘ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಮಂಡಲ ನಿರ್ಣಯ ಅಂಗೀಕರಿಸಿದೆ. ನಾವು ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ನೀಡುವಂತೆ ಆಗ್ರಹಿಸಿ ಇಲ್ಲಿಯೂ ನಿರ್ಣಯ ಅಂಗೀಕರಿಸಬೇಕು’ ಎಂದು ಒತ್ತಾಯಿಸಿದರು.

ಸರ್ಕಾರ ನಿರ್ಣಯ ಮಂಡಿಸದಿದ್ದರೆ ತಾವೇ ಮಂಡನೆ ಮಾಡುವುದಾಗಿ ಹರಿಪ್ರಸಾದ್ ಹೇಳಿದರು. ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕ ಸರ್ಕಾರವೇ ನಿರ್ಣಯ ಮಂಡಿಸಲಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ಕಾನೂನಾತ್ಮಕ ಹಕ್ಕಿಲ್ಲ: ಸಿದ್ದರಾಮಯ್ಯ
ತಮಿಳುನಾಡು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ. ಈ ರೀತಿ ನಿರ್ಣಯ ತೆಗೆದುಕೊಳ್ಳಲು ಅಲ್ಲಿನ ವಿಧಾನಸಭೆಗೆ ಕಾನೂನಾತ್ಮಕ ಹಕ್ಕಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ಇದು ನಮ್ಮ ರಾಜ್ಯದ ಗಡಿಯೊಳಗೆ ಬರುತ್ತದೆ. 2018ರ ಫೆಬ್ರುವರಿ 16 ರಂದು ಸುಪ್ರೀಂಕೋರ್ಟ್ ಅಂತಿಮ ಆದೇಶ ಬಂದಿದೆ. ಈ ಆದೇಶವನ್ನು ಎರಡೂ ರಾಜ್ಯಗಳು ಒಪ್ಪಿಕೊಂಡಿವೆ. ವಾಡಿಕೆಯಂತೆ ಮಳೆಯಾದ ಸಹಜ ವರ್ಷದಲ್ಲಿ 177.25 ಟಿಎಂಸಿ ಅಡಿ ನೀರನ್ನು ಬಿಳಿಗೊಂಡ್ಲುವಿನಿಂದ ತಮಿಳುನಾಡಿಗೆ ಬಿಡಬೇಕು ಎಂದು ತೀರ್ಪು ಹೇಳಿದೆ. ಈ ನೀರು ಪಡೆದುಕೊಳ್ಳುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ತಮಿಳುನಾಡಿಗೆ 582 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ ಎಂದು ಹೇಳಿದರು.

ಇಚ್ಛಾಶಕ್ತಿ ಪ್ರದರ್ಶಿಸಿ: ಎಚ್.ಡಿ.ಕೆ
ಮೇಕೆದಾಟು ವಿಷಯದಲ್ಲಿ ಸೋಮವಾರ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೂ ಮತ್ತು ರಾಜ್ಯಕ್ಕೂ ಸಂಬಂಧವಿಲ್ಲ. ಮೇಕೆದಾಟು ವಿಚಾರದಲ್ಲಿ ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೇಕೆದಾಟು ಯೋಜನೆಯನ್ನು ವಿರೋಧ ಮಾಡುವ ಯಾವುದೇ ಹಕ್ಕು ತಮಿಳುನಾಡಿಗೆ ಇಲ್ಲ. ನಮಗೆ ಪರಿಸರ ವಿಷಯಲ್ಲಿ ಮಾತ್ರ ಒಪ್ಪಿಗೆ ಬಾಕಿ ಇದೆ. ತಮಿಳುನಾಡಿನ ನಾಯಕರು ವಿಧಾನಸಭೆಯಲ್ಲಿ ಮಾಡಿಕೊಂಡಿರುವ ನಿರ್ಣಯಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಾರ ಬದ್ಧತೆ ತೋರಿಸಬೇಕು. ಎಲ್ಲವೂ ಸರ್ಕಾರದ ಕೈಯಲ್ಲಿದೆ ಎಂದರು.

ಈ ಯೋಜನೆಯನ್ನು ಹೇಗೆ ಕಾರ್ಯಗತ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅದೇ ಪ್ರಕಾರ ಎರಡು ಹಂತಗಳಲ್ಲಿ ಕಾರ್ಯಗತ ಮಾಡುವುದು ಸೂಕ್ತ ಎಂದರು.

ಕಾವೇರಿ ನೀರಿನ ವಿಷಯವನ್ನು ತಮಿಳುನಾಡು ರಾಜಕೀಯ ದಾಳವಾಗಿ ನಿರಂತರವಾಗಿ ಬಳಸುತ್ತಲೇ ಬಂದಿದೆ. ಸುಪ್ರೀಂಕೋರ್ಟ್‌ನಲ್ಲಿ ವಿವಾದ ಬಗೆ ಹರಿದರೂ ನೀರಿನ ತಂಟೆ ನಿಲ್ಲಿಸಿಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಲು ಮುಖ್ಯಮಂತ್ರಿ ಪ್ರಯತ್ನ ನಡೆಸಲಿ. ಕೇಂದ್ರ ಜಲಶಕ್ತಿ ಸಚಿವ ಮತ್ತು ಪ್ರಧಾನಿಯವರನ್ನು ಬೊಮ್ಮಾಯಿ ಭೇಟಿ ಮಾಡಲಿ.
-ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.