ಬೆಂಗಳೂರು: ಮಲ್ಲೇಶ್ವರ ಸಂಪಿಗೆ ಚಿತ್ರಮಂದಿರ ಬಳಿ ನಟ ಕೋಮಲ್ ಮೇಲೆ ಹಲ್ಲೆ ನಡೆದಿದ್ದು, ಆ ಸಂಬಂಧ ವಿಜಯ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಕೋಮಲ್ ಅವರು ತಮ್ಮ ಮಗಳನ್ನು ಟ್ಯೂಷನ್‌ಗೆ ಬಿಡಲು ಕಾರಿನಲ್ಲಿ ಹೊರಟಿದ್ದಾಗಲೇ ಈ ಘಟನೆ ನಡೆದಿದೆ. ಅವರು ನೀಡಿರುವ ದೂರಿನನ್ವಯ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರೋಪಿ ವಿಜಯ್, ಸ್ಥಳೀಯ ‘ಎಂಎಸ್‌ಐಎಲ್’ ಮದ್ಯದ ಮಳಿಗೆಯ ಕೆಲಸಗಾರ. ಹಲ್ಲೆಯಿಂದಾಗಿ ಕೋಮಲ್ ಅವರ ಮುಖಕ್ಕೆ ಗಾಯವಾಗಿದ್ದು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ವಿವರಿಸಿದರು.
ಆಗಿದ್ದೇನು?
ಮಂಗಳವಾರ ಸಂಜೆ 5.30ರ ಸುಮಾರಿಗೆ ಕೋಮಲ್, ಮಲ್ಲೇಶ್ವರದಿಂದ ಶ್ರೀರಾಮಪುರದತ್ತ ಕಾರಿನಲ್ಲಿ ತೆರಳುತ್ತಿದ್ದರು. ಯುವತಿಯೊಬ್ಬರ ಜೊತೆ ಬೈಕ್‌ನಲ್ಲಿ ಹೊರಟಿದ್ದ ಆರೋಪಿ ವಿಜಯ್, ಕಾರು ಹಿಂದಿಕ್ಕಿ ಮುನ್ನುಗ್ಗಿದ್ದ. ಅದೇ ವೇಳೆ ವಾಹನಗಳು ಪರಸ್ಪರ ತಾಗಿದ್ದವು. ಅದೇ ವಿಷಯಕ್ಕೆ ಜಗಳ ಶುರುವಾಗಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ಕೋಮಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಜಯ್, ಕೈ ಹಿಡಿದು ಎಳೆದಾಡಿದ್ದ. ಅದನ್ನು ಪ್ರಶ್ನಿಸಿದ್ದ ಕೋಮಲ್, ಆರೋಪಿಗೆ ಒಂದು ಏಟು ಹೊಡೆದಿದ್ದರು. ಆಗ ಆರೋಪಿ, ಕೋಮಲ್ ಮುಖಕ್ಕೆ ಐದಾರು ಬಾರಿ ಪಂಚ್ ಮಾಡಿ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ಮಾಡಿದ. ಸ್ಥಳೀಯರು ಹಾಗೂ ಸಂಚಾರ ಪೊಲೀಸರು, ಸ್ಥಳಕ್ಕೆ ಬಂದು ಜಗಳ ಬಿಡಿಸಿದರು’ ಎಂದು ವಿವರಿಸಿದರು.
ಗಲಾಟೆ ವಿಡಿಯೊವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಅದರ ಸಹಿತ ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸುಪರ್ದಿಗೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕೋಮಲ್ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ‘ಕೆಂಪೇಗೌಡ–2’ ಸಿನಿಮಾ ಶುಕ್ರವಾರಷ್ಟೇ ಬಿಡುಗಡೆ ಆಗಿದೆ.
‘ದಾದಾಗಿರಿ ಅಂತ್ಯವಾಗಬೇಕು’
‘ಡ್ರಗ್ಸ್ ಹಾಗೂ ಮದ್ಯದ ಅಮಲಿನಲ್ಲಿ ಕೆಲವರು ದಾದಾಗಿರಿ ಮಾಡುತ್ತಿದ್ದಾರೆ. ಅಮಾಯಕರಿಗೆ ತೊಂದರೆ ಕೊಡುತ್ತಿದ್ದಾರೆ. ಇದೆಲ್ಲವೂ ಅಂತ್ಯವಾಗಬೇಕು. ಈ ಬಗ್ಗೆ ಪೊಲೀಸ್ ಕಮಿಷನರ್ ಅವರಲ್ಲೂ ಮನವಿ ಮಾಡುತ್ತೇನೆ’ ಎಂದು ನಟ ಜಗ್ಗೇಶ್ ತಿಳಿಸಿದರು.
ಸಹೋದರ ಕೋಮಲ್ ಮೇಲಿನ ಹಲ್ಲೆ ಬಗ್ಗೆ ಮಾತನಾಡಿದ ಅವರು, ‘ಹುಡುಗಿಯರ ಜೊತೆ ಓಡಾಡುವುದು, ಶೋ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವ ಗ್ಯಾಂಗ್ ಇದೆ. ಕೋಮಲ್ ಮೇಲೆ ಹಲ್ಲೆ ಮಾಡಿರುವ ಯುವಕನೂ ಅದೇ ಗ್ಯಾಂಗ್‌ನವನು’ ಎಂದರು.
‘ಪ್ರತಿಯಾಗಿ ಹೊಡೆದೆ’
‘ಕೋಮಲ್ ಅವರೇ ನನಗೆ ಮೊದಲಿಗೆ ಹೊಡೆದರು. ನಾನು ಅವರಿಗೆ ವಾಪಸ್ ಹೊಡೆದೆ. ನಾನೂ ಅವರ ವಿರುದ್ಧ ದೂರು ಕೊಡುತ್ತೇನೆ, ತೆಗೆದುಕೊಳ್ಳಿ’ ಎಂದು ಆರೋಪಿ ಮಲ್ಲೇಶ್ವರ ಪೊಲೀಸರಿಗೆ ಹೇಳಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.