ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳತೂರು ಬಳಿ ಮೇಲ್ಸೇತುವೆ ನಿರ್ಮಾಣ: ಮನವಿ ಪರಿಗಣನೆಗೆ ಹೈಕೋರ್ಟ್‌ ಸೂಚನೆ

Published 6 ಜೂನ್ 2024, 0:20 IST
Last Updated 6 ಜೂನ್ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು–ಚೆನ್ನೈ ಕಾರಿಡಾರ್‌ ಮಾರ್ಗದಲ್ಲಿನ ಹೊಸಕೋಟೆ ತಾಲ್ಲೂಕಿನ ಕೊಳತೂರು ಜಂಕ್ಷನ್‌ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೋರಿ ಸ್ಥಳೀಯರು ಸಲ್ಲಿಸಿರುವ ಮನವಿಯನ್ನು ಎಂಟು ವಾರಗಳಲ್ಲಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ತೀರ್ಮಾನ ಕೈಗೊಳ್ಳಿ’ ಎಂದು ಹೈಕೋರ್ಟ್‌, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್‌ಎಐ) ನಿರ್ದೇಶಿಸಿದೆ.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೃಷಿಕರಾದ ಕೆ.ವಿ. ರವಿಕುಮಾರ್ ಸೇರಿದಂತೆ ಕೊಳತೂರು, ಅಪ್ಪಸಂದ್ರ, ಸೋಲೂರು, ಊರಹಳ್ಳಿ ಗ್ರಾಮಗಳ ಒಟ್ಟು 13 ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ಶಿವ ಪ್ರಕಾಶ್‌, ‘ಕೊಳತೂರು ಪ್ರಮುಖ ಗ್ರಾಮ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಇದರ ರಸ್ತೆಯು 20 ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಈ ಗ್ರಾಮ ಹಾಲು ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ. ಅಂತೆಯೇ, ಸಮೀಪದಲ್ಲೇ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನು ಸುಮಾರು ₹40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ದಿನಕ್ಕೆ ಸರಾಸರಿ ಒಂದು ಸಾವಿರ ವಾಹನಗಳ ಸಂಚಾರವಿದೆ. ಮುಖ್ಯವಾಗಿ ಶಾಲಾ ಮಕ್ಕಳು ಮತ್ತು ಹಾಲು ಸಾಗಣೆ ವಾಹನಗಳು, ಉಗ್ರಾಣಗಳಿಂದ ತರಕಾರಿ, ಹಣ್ಣು, ಇತ್ಯಾದಿ ದಿನಬಳಕೆ ಸಾಮಗ್ರಿಗಳ ಸರಬರಾಜು ನೇರವಾಗಿ ಬೆಂಗಳೂರು–ಕೋಲಾರ ರಸ್ತೆಯ ಎನ್‌ಎಚ್‌–75ಕ್ಕೆ ತಲುಪುತ್ತದೆ’ ಎಂದರು.

‘ಬೆಂಗಳೂರು–ಚೆನ್ನೈ ಕಾರಿಡಾರ್‌ ರಸ್ತೆಯಿಂದ ಕೊಳತೂರು ಗ್ರಾಮದ ಮುಖ್ಯ ದ್ವಾರಕ್ಕೆ ಲಿಂಕ್‌ ರಸ್ತೆ ಕೊಟ್ಟು ಅಡ್ಡಿಪಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮುಖ್ಯವಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ಬರುವವರು ಸುತ್ತಿಕೊಂಡು ಬರಬೇಕಾಗಿದೆ. ಈ ಬಗ್ಗೆ ಸಂಬಂಧಿಸಿ ದವರಿಗೆ ಹಲವಾರು ಮನವಿ ಸಲ್ಲಿಸಿದ್ದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬೇರಾವುದೇ ರೀತಿಯ ಪರಿಹಾರ ಮಾರ್ಗವನ್ನೂ ತೋರಿಸಿಲ್ಲ’ ಎಂದು ಆಕ್ಷೇಪಿಸಿದರು.

‘ಕೊಳತೂರು ಮತ್ತು ಸುತ್ತಲಿನ 19 ಗ್ರಾಮಗಳನ್ನು ಸಂಧಿಸುವ ರಾಷ್ಟ್ರೀಯ ಹೆದ್ದಾರಿ–75 ಹಾಗೂ 648ರ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಪರ್ಕ ಕಲ್ಪಿಸುವ ಕೊಳತೂರು ಜಂಕ್ಷನ್‌ ಬಳಿ ಮೇಲ್ಸೇತುವೆ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಎನ್‌ಎಚ್‌ಎಐ ಸೂಕ್ತವಾದ ನೀಲನಕ್ಷೆ ಸಿದ್ಧಪಡಿಸಬೇಕು. ಇದಕ್ಕಾಗಿ 2023ರ ಸೆಪ್ಟೆಂಬರ್ 4ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಿರ್ದೇಶಿಸಬೇಕು‘ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರ ಮನವಿ ಪತ್ರವನ್ನು ಎಂಟು ವಾರಗಳಲ್ಲಿ ಕಾನೂನು ಪ್ರಕಾರ ಪರಿಗಣಿಸಿ ನಿರ್ಧಾರವನ್ನು ತಿಳಿಸಿ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT