ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಗೂಂಡಾಗಳಿಂದ ರಾಜಕೀಯ ಹಸ್ತಕ್ಷೇಪ: ಡಿಕೆಶಿ ವಿರುದ್ಧ ರಮೇಶ ವಾಗ್ದಾಳಿ

Last Updated 2 ಡಿಸೆಂಬರ್ 2021, 11:35 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಂಗಳೂರಿನ ಗೂಂಡಾಗಳು ಬೆಳಗಾವಿಗೆ ಬಂದು ರಾಜಕೀಯ ಹಸ್ತಕ್ಷೇಪ ಮಾಡಿ, ತೊಂದರೆ ಕೊಡುತ್ತಿದ್ದಾರೆ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ತಾಲ್ಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಸಲ ವಿವೇಕರಾವ್ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಹಿಂದುಳಿದ ಕುರುಬ ಸಮಾಜದ ನಾಯಕನಿಗೆ ಆ ಪಕ್ಷ ಮೋಸ ಮಾಡಿದೆ’ ಎಂದು ಆರೋಪಿಸಿದರು.

‘ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿಸಿದ್ದೀರೇಕೆ ಎಂಬ ಗೊಂದಲ ನಿಮಗಿರಬಹುದು. ವಿವೇಕರಾವ್‌ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೆ ಲಖನ್ ಜಾರಕಿಹೊಳಿ ಕಣಕ್ಕಿಳಿಸುತ್ತಿರಲಿಲ್ಲ. ಕಾಂಗ್ರೆಸ್‌ ಸೋಲಿಸುವುದಕ್ಕಾಗಿಯೇ ನಿಲ್ಲಿಸಿದ್ದೇನೆ. ಈ ವಿಷಯವನ್ನು ವರಿಷ್ಠರಿಗೆ 3 ತಿಂಗಳ ಹಿಂದೆಯೇ ಹೇಳಿದ್ದೆ’ ಎಂದರು.

‘ಹಣದಿಂದ ರಾಜಕೀಯ ಸಾಧ್ಯವಿಲ್ಲ. ದುಡ್ಡಿನ ಮೇಲೆ ಎಲ್ಲವೂ ನಡೆಯುತ್ತದೆ ಎನ್ನುವುದಾಗಿದ್ದರೆ ನಿತ್ಯವೂ ಒಬ್ಬೊಬ್ಬರು ಶಾಸಕರಾಗುತ್ತಿದ್ದರು’ ಎಂದು ಹೇಳಿದರು.

‘ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಗೆಲ್ಲಬೇಕು. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು 2024ಕ್ಕೆ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕುಟುಂಬದಲ್ಲಿ ಈಗಾಗಲೆ ಮೂವರು ಶಾಸಕರಿದ್ದೀರಿ. 4ನೇಯವರು ಬೇಕಾ ಎಂದು ಕೇಳಬಹುದು. ಸ್ವಾರ್ಥವೇನಿಲ್ಲ. ಕಾಂಗ್ರೆಸ್ ಸೋಲಿಸಲು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ. ವರಿಷ್ಠರಿಗೂ ತಿಳಿಸಿದ್ದೇನೆ’ ಎಂದರು.

‘ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಬಿಜೆಪಿಯವರಿಗೆ ನಾನು ಹೇಳಿಲ್ಲ. ಈ ರೀತಿ ಹೇಳಿದ್ದರೆ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ’ ಎಂದು ಹೇಳಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಮೊದಲ ಪ್ರಾಶಸ್ತ್ಯದ ಮತ ಬಿಜೆಪಿಗೆ ಹಾಕಿ. 2ನೇ ಮತ ಕಾಂಗ್ರೆಸ್‌ಗೆ ಹಾಕಬೇಡಿ. ಯಾರಿಗೆ ಕೊಡಬೇಕು ಎನ್ನುವುದನ್ನು ನೀವೇ ಯೋಚಿಸಿ; ಕಾಂಗ್ರೆಸ್‌ ಮಾತ್ರ ಗೆಲ್ಲಿಸಬೇಡಿ’ ಎಂದು ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಬೆಂಬಲಿಸುವಂತೆ ಕೋರಿದರು.

‘ಯಾರನ್ನು ಬೆಳೆಸಬೇಕು; ಯಾರನ್ನು ಬೆಳೆಸಬಾರದು ಎನ್ನುವುದನ್ನು ಗಮನಿಸಬೇಕಾದ ಚುಣಾವಣೆ ಇದು’ ಎಂದರು.

ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮಾತನಾಡಿದರು.

ಮುಖಂಡರಾದ ಶಶಿಕಾಂತ ನಾಯಿಕ, ಮನೋಹರ ಕಡೋಲ್ಕರ್‌, ಕಿರಣ ಜಾಧವ್, ಧನಂಜಯ ಜಾಧವ್, ಯುವರಾಜ ಜಾಧವ್ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT