ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಿಜೆಪಿ– ಜೆಡಿಎಸ್‌ ಮೈತ್ರಿ?

ಬಿಜೆಪಿಯ 10–12 ಸಂಸದರ ಸ್ವಯಂ ನಿವೃತ್ತಿ
Published 4 ಜೂನ್ 2023, 23:46 IST
Last Updated 4 ಜೂನ್ 2023, 23:46 IST
ಅಕ್ಷರ ಗಾತ್ರ

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. 

ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ 15 ರಿಂದ 18 ಕ್ಷೇತ್ರಗಳ ಬಗ್ಗೆ ಮಾತ್ರ ಬಿಜೆಪಿ ಹೆಚ್ಚಿನ ಗಮನ ಹರಿಸಲಿದೆ. ಜೆಡಿಎಸ್‌ ಗೆದ್ದೇ ಗೆಲ್ಲಬಹುದಾದ 5–6 ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟು ಮೈತ್ರಿ  ಅಥವಾ ಒಳ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಪಕ್ಷದೊಳಗೆ ಚರ್ಚೆ ನಡೆದಿದೆ. ಇದರಿಂದ ಎರಡೂ ಪಕ್ಷಗಳಿಗೂ ಲಾಭ ಆಗುತ್ತದೆ ಎಂದು ಮೂಲಗಳು ಹೇಳಿವೆ.

2019ರಲ್ಲಿ ಅತ್ಯಧಿಕ ಸ್ಥಾನಗಳನ್ನು (25) ಗೆದ್ದಿದ್ದ ಬಿಜೆಪಿ ಈ ಬಾರಿ ಅಷ್ಟು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿರುವುದರಿಂದ ಅದರ ಪರಿಣಾಮ ಲೋಕಸಭಾ ಚುನಾವಣೆ ಮೇಲೂ ಆಗಬಹುದು ಎಂಬ ವಾದವೂ ಕೇಳಿ ಬಂದಿದೆ. 28ರಲ್ಲಿ ಬಿಜೆಪಿ 20 ರಿಂದ 22 ಸ್ಥಾನಗಳನ್ನು ಗೆದ್ದು, ಜೆಡಿಎಸ್‌ಗೆ 8 ಸ್ಥಾನಗಳನ್ನು ಬಿಟ್ಟುಕೊಡಬಹುದು. ಹೀಗಾಗಿ ಜೆಡಿಎಸ್‌ ಒಪ್ಪಿದರೆ ಮೈತ್ರಿ ಲೇಸು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆದಿದೆ.

10–12 ಸಂಸದರ ಸ್ವಯಂ ನಿವೃತ್ತಿ:

ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿಕೊಳ್ಳುತ್ತಿರುವ ಬೆನ್ನಲ್ಲೇ ವಯಸ್ಸಾಗಿರುವ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 10 ರಿಂದ 12 ಸಂಸದರು ಈ ಬಾರಿ ಕಣದಿಂದ ಹಿಂದಕ್ಕೆ ಸರಿಯಲಿದ್ದಾರೆ. 

ದಾವಣಗೆರೆ ಸಂಸದ ಸಿದ್ದೇಶ್ವರ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಚಿಕ್ಕಬಳ್ಳಾಪುರ ಸಂಸದ ಬಿ.ಎನ್‌.ಬಚ್ಚೇಗೌಡ, ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರು ಸ್ವರ್ಧೆಯಿಂದ ಹಿಂದಕ್ಕೆ ಸರಿಯಲಿದ್ದಾರೆ. ಹಾವೇರಿ ಸಂಸದ ಶಿವಕುಮಾರ ಉದಾಸಿ ಚುನಾವಣಾ ರಾಜಕೀಯ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. 

ಬಚ್ಚೇಗೌಡ ಅವರ ಪುತ್ರ ಕಾಂಗ್ರೆಸ್ ಶಾಸಕರಾಗಿದ್ದಾರೆ. ಬಚ್ಚೇಗೌಡರ ವಯಸ್ಸು 80 ದಾಟಿದ್ದು, ಈ ಬಾರಿ ಸ್ಪರ್ಧಿಸುವುದಿಲ್ಲ. ತುಮಕೂರು ಸಂಸದ ಜಿ.ಎಸ್‌ ಬಸವರಾಜ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಗೊಂದಲದಲ್ಲಿದ್ದು, ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.  ಚಾಮರಾಜನಗರ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ವಯೋಮಾನದ ಕಾರಣ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಸಂಗಣ್ಣ ಕರಡಿ ಅವರು ಟಿಕೆಟ್‌ ನೀಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಉತ್ತರಕ‌ನ್ನಡದ ಸಂಸದ ಅನಂತಕುಮಾರ್ ಹೆಗಡೆ ಅವರೂ ಅನಾರೋಗ್ಯದಿಂದ ಬಳಲುತ್ತಿದ್ದು, ಅವರೂ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಬಾಗಲಕೋಟೆಯ ಪಿ.ಸಿ. ಗದ್ದಿಗೌಡರ್‌ ಸ್ಪರ್ಧೆಯಿಂದ ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚಿವೆ. 

ಮಂಗಳೂರು ಕ್ಷೇತ್ರದಲ್ಲಿ ನಳಿನ್‌ ಕುಮಾರ್ ಕಟೀಲ್ ಅವರಿಗೆ ಮತ್ತೆ ಟಿಕೆಟ್‌ ನೀಡಿದರೆ ಅವರ ವಿರುದ್ಧ ತಾವು ಸ್ಪರ್ಧಿಸುವುದಾಗಿ ಅರುಣ್‌ಕುಮಾರ್‌ ಪುತ್ತಿಲ ಘೋಷಿಸಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಅತಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮಂಗಳೂರು ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇಬೇಕಾಗಿರುವುದರಿಂದ ಬಿಜೆಪಿ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.

ಸಚಿವ ಸ್ಥಾನ ಸಿಗದಿದ್ದರಿಂದಲೂ ಕೆಲವರು ಬೇಸತ್ತಿದ್ದು, ‘ಪಕ್ಷಕ್ಕಾಗಿ ಎಷ್ಟೇ ದುಡಿದರೂ ಪ್ರಯೋಜನವಿಲ್ಲ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕುಟುಂಬ ರಾಜಕಾರಣ ಮತ್ತಿತರ ವಿಷಯಗಳ ಕುರಿತ ಮಾನದಂಡ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ ಎಂಬ ಬೇಸರ ಅನೇಕರಲ್ಲಿ ಇದೆ. ಆದರೆ, ಈ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಲು ಸಿದ್ಧರಿಲ್ಲ.

ವಿಧಾನಸಭೆ ಚುನಾವಣೆ ಸಂದರ್ಭ ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಮತ್ತಿತರರು ಟಿಕೆಟ್‌ ದೊರೆಯದ್ದರಿಂದ ಪಕ್ಷ ತೊರೆದಿದ್ದರು. ತಮಗೂ ಟಿಕೆಟ್‌ ದೊರೆಯದಿದ್ದರೆ ಆಗ ಎದುರಾಗಬಹುದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿರುವ ಕೆಲವು ಹಾಲಿ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಈ ಕುರಿತು ವರಿಷ್ಠರಿಗೆ ಸಂದೇಶ ನೀಡಲಿದ್ದಾರೆ ಎಂದು ಸಂಸದರೊಬ್ಬರು ತಿಳಿಸಿದ್ದಾರೆ.

‘ಟಿಕೆಟ್‌ ನಿರಾಕರಿಸಲಾಗುತ್ತದೆ ಎನ್ನುವುದಕ್ಕಿಂತಲೂ ಸಾಕಷ್ಟು ಸಂಸದರು ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಹೀಗಾಗಿ ಟಿಕೆಟ್‌ ನಿರಾಕರಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ’ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT