ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರಿಗೆ ನಿಗಮ ಮುಚ್ಚುವ ಸ್ಥಿತಿಗೆ ತಂದಿದ್ದ ಬಿಜೆಪಿ: ಸಚಿವ ರಾಮಲಿಂಗಾರೆಡ್ಡಿ

Published : 28 ಆಗಸ್ಟ್ 2024, 15:52 IST
Last Updated : 28 ಆಗಸ್ಟ್ 2024, 15:52 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಿಜೆಪಿ ಆಡಳಿತದಲ್ಲಿ ಸಾರಿಗೆ ನಿಗಮಗಳನ್ನು ಮುಚ್ಚುವ ಪರಿಸ್ಥಿತಿಗೆ ತಂದಿಡಲಾಗಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ನಿಗಮಗಳು ಸುಲಲಿತವಾಗಿ ನಡೆಯುತ್ತಿವೆ. ಇದರ ಅರಿವಿಲ್ಲದೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎದಿರೇಟು ನೀಡಿದ್ದಾರೆ.

‘ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿಗೆ ₹4,500 ಕೋಟಿ ಸರ್ಕಾರ ನೀಡಬೇಕಿದೆ. ವೇತನ ಪಾವತಿಸಲು ಹಣವಿಲ್ಲದೇ ಮೂರ್ನಾಲ್ಕು ತಿಂಗಳಲ್ಲಿ ಮುಚ್ಚಬೇಕಾಗುತ್ತದೆ’ ಎಂದು ವಿಜಯೇಂದ್ರ ಅವರು ನೀಡಿದ್ದ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

‘ಶಕ್ತಿ ಯೋಜನೆಯ ಹಣವನ್ನು ಪ್ರತಿ ತಿಂಗಳು ನಿಗಮಗಳಿಗೆ ಪಾವತಿ ಮಾಡಲಾಗುತ್ತಿದೆ. ನಾಲ್ಕು ಸಾರಿಗೆಗಳಿಗೆ ಒಟ್ಟು ₹1,467 ಕೋಟಿ ಬಾಕಿ ನೀಡಬೇಕಿದೆ. ಕೆಎಸ್‌ಆರ್‌ಟಿಸಿ ಒಂದಕ್ಕೇ ₹4,500 ಕೋಟಿ ನೀಡಲು ಬಾಕಿ ಇದೆ ಎಂದು ತಪ್ಪು ಮಾಹಿತಿಯನ್ನು ವಿಜಯೇಂದ್ರ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಾರಿಗೆ ನಿಗಮಗಳು ₹5,900 ಕೋಟಿ ನಷ್ಟದ್ದಲ್ಲಿದ್ದವು. ನಿಗಮಗಳನ್ನು ಮುಚ್ಚಿಬಿಡಿ ಎಂದು ಹೇಳಿ ಹೋಗಿದ್ದರು’ ಎಂದು ತಿಳಿಸಿದ್ದಾರೆ.

‘ಬಿಜೆಪಿ ಆಡಳಿತದಲ್ಲಿ ಸಾರಿಗೆ ಸಿಬ್ಬಂದಿಗೆ ವೇತನ ಪೂರ್ಣ ಪಾವತಿಯಾಗುತ್ತಿರಲಿಲ್ಲ. ಬಸ್ ಸೇರ್ಪಡೆಗೆ ಕ್ರಮ ಕೈಗೊಂಡಿರಲಿಲ್ಲ. ಖಾಲಿ ಹುದ್ದೆ ತುಂಬಿರಲಿಲ್ಲ. ನಾವು ಆಡಳಿತಕ್ಕೆ ಬಂದ ಮೇಲೆ ಆಯಾ ತಿಂಗಳ ಮೊದಲ ವಾರದಲ್ಲಿಯೇ ವೇತನ ಪಾವತಿಯಾಗುತ್ತಿದೆ. 5,800 ಬಸ್‌ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಒಂದು ವರ್ಷದಲ್ಲಿ 3,000 ಬಸ್‌ಗಳ ಸೇರ್ಪಡೆ ಮಾಡಲಾಗಿದೆ. 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, 6,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT